Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 7

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                                 ಅಧ್ಯಾಯ 7

ಪ್ರಿಯಂವದಾ ಎಚ್ಚರಗೊಳ್ಳುತ್ತಲೇ ಸುತ್ತಲೂ ನೋಡಿದಳು. ಎರಡು ನಿಮಿಷವೇ ಹಿಡಿಯಿತು ಅವಳಿಗೆ ವರ್ತಮಾನಕ್ಕೆ ಬರಲು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ದಿಢೀರನೆ ಹತ್ತಿರ ಬಂದ ಗುಂಪು, ಅದರಲ್ಲಿದ್ದ ಆಗುಂತಕ ಹಾರಿಸಿದ ಗುಂಡು, ಅವಳಿಗೆ ಪ್ರಜ್ಞೆ ತಪ್ಪಿದ್ದು.. ಮೆದುಳು ಅವಳಿಗೆ ಸಹಕರಿಸಿದ್ದೇ ತಡ .. ಅವಳ ಯೋಚನೆಗಳು ಗರಿಗೆದರಿದವು. ಅವಳ ಪ್ರಕಾರ ಸುತ್ತಲೂ ಹತ್ತಾರು ಡಾಕ್ಟರ್ ಗಳಿರಬೇಕು. ರೂಮಿನ ಹೊರಗಡೆ ನೂರಾರು ಪತ್ರಕರ್ತರು, ನ್ಯೂಸ್ ಚಾನೆಲ್ ಗಳವರು ತನ್ನ ಆರೋಗ್ಯದ ಬಗ್ಗೆ, ತನ್ನ ಪರಿಸ್ಥಿತಿಯ ಬಗ್ಗೆ ಕ್ಷಣ ಕ್ಷಣದ ವಿವರಣೆ ನೀಡುತ್ತಿರಬೇಕು. ಅವಳ ಕಡೆಯವರು ಈಗಾಗಲೇ ಆಸ್ಪತ್ರೆಯ ಹೊರಗಡೆ ಸಾವಿರಾರು ಜನರನ್ನು ಸೇರಿಸಿ ಇದರಲ್ಲಿ ರಾಜಕೀಯ ವಿರೋಧಿಗಳ ಕೈವಾಡವಿದೆ ಎಂದು ಘೋಷಣೆ ಕೂಗುತ್ತಿರಬೇಕು. ನಗರದ ಹಲವು ಕಡೆ ಚಿಕ್ಕ ಪುಟ್ಟ ದೊಂಬಿಗಳು, ಪ್ರತಿಮೆ ಸುಡುವುದು, ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರಾಡುವುದು ನಡೆಯುತ್ತಿರಬೇಕು. ಒಟ್ಟಿನಲ್ಲ್ಲಿ ದೇಶ ಪೂರ್ತಿ ಪ್ರಿಯಂವದಾ ರಾಜ್ ಳ ಗುಂಗಿನಲ್ಲಿರಬೇಕು ಅಷ್ಟೆ!!
"ತನ್ನ ರಕ್ತ ದೇಶಕ್ಕಾಗಿಯೇ! ತನ್ನನ್ನು ಯಾರೇ ಕೊಂದರೂ, ತಾನಾಗಿಯೇ ಸತ್ತರೂ, ಬದುಕಿ ಜೀವಿಸಿದರೂ ಈ ದೇಶಕ್ಕಾಗಿಯೇ!!" ಅವಳು ಎಚ್ಚರಾದ ಮರುಘಳಿಗೆ ಶಾಂತಿ ಕಾಪಾಡಿಕೊಳ್ಳಿ ಎಂದು ಕೇಳುತ್ತ ಹೇಳುವ ಮಾತುಗಳಿವು. 
ಜನರ ಸೆಂಟಿಮೆಂಟ್ ಗಳನ್ನು ಹೇಗೆ ಆಡಿಕೊಳ್ಳಬೇಕೆಂಬುದು ಪ್ರಿಯಂವದಾ ಬಲ್ಲಳು. ಅರವತ್ತು ವರ್ಷದ ಅವಳ ಬದುಕು ಅದೆಷ್ಟು ಏರಿಳಿತಗಳನ್ನು ಕಂಡಿಲ್ಲ. ಈಗ ಪ್ರಿಯಂವದಾ ಪಕ್ವವಾಗಿದ್ದಾಳೆ. ಆಕೆ ದುಡುಕುವುದೇ ಇಲ್ಲ. ಕಾಲಿಗೆ ಮುಳ್ಳು ಚುಚ್ಚಿದರೆ ಅದನ್ನು ನಿಧಾನವಾಗಿ ತೆಗೆಯಬೇಕು.
ಅವಳ ಕಣ್ಣುಗಳು ಆ ಕೊಠಡಿಯ ಬೆಳಕಿಗೆ ಹೊಂದಿಕೊಳ್ಳಲು ಒಂದೆರಡು ಕ್ಷಣ ಹಿಡಿಯಿತು. ಅವಳ ಎಡಭುಜಕ್ಕೆ ಬ್ಯಾಂಡೇಜ್ ಮಾಡಲಾಗಿತ್ತು. ರೂಮ್ ಪ್ರಶಾಂತವಾಗಿತ್ತು. ಸುತ್ತಲೂ ಕಣ್ಣಾಡಿಸಿದಳು. ಯಾರೂ ಇರಲಿಲ್ಲ. ಎದುರಿರುವ ಪರಿಸರ ಅರಿವಾಗತೊಡಗಿತು. ತನ್ನದೇ ಮನೆ, ದಿನವೂ ಮಲಗುವ ಕೊಠಡಿಯೇ. ಎಷ್ಟು ಹೊತ್ತಿನಿಂದ ಹೀಗೆಯೇ ಮಲಗಿದ್ದೇನೆ? ಎಷ್ಟು ಘಂಟೆ ಎಂದು ಗಡಿಯಾರವನ್ನು ದಿಟ್ಟಿಸಿದಳು.ಬೆಳಗಿನ ಹತ್ತು ಘಂಟೆ. ದಿನಾಂಕ ಕೂಡ ಬದಲಾಗಿತ್ತು. ಒಂದು ದಿನ.. ಅಂದರೆ ಇಪ್ಪತ್ನಾಲ್ಕು ಘಂಟೆಗಳ ಕಾಲ ಮೈ ಮರೆತು ಮಲಗಿದ್ದೆ. ತಾನು ರಾಜಕೀಯಕ್ಕೆ ಬಂದ ಮೇಲೆ ಇದೇ ಸುದೀರ್ಘ ಗಂಟೆಗಳು ತಾನು ಹೊರಪ್ರಪಂಚದ ಪರಿವೆಯಿಲ್ಲದೆ ಮಲಗಿದ್ದು. ಎಲ್ಲರೂ ರೂಮ್ ನ ಹೊರಗೆ ನಿಂತಿರಬೇಕು ಎಂದು ಮಲಗಿದಲ್ಲಿಮ್ದ ಮೇಲೇಳಲು ನೋಡಿದಳು. ಎಡಭುಜ ಚುರ್ ಎಂದಿತು. ತನಗೆ ಆದ ನೋವಿಗೆ ಹತ್ತರಷ್ಟು ವಾಪಸ್ ನೀಡುತ್ತೇನೆ ಎಂದು ಮನಸ್ಸಲ್ಲೇ ನಿರ್ಧರಿಸಿದಳು. 
ಪಕ್ಕದಲ್ಲಿದ ಫೋನ್ ಎತ್ತಿ ಬಟನ್ ಒತ್ತಿದಳು. ಹೊರಗಡೆ ಸದಾಯಿತು. ಪ್ರಿಯಂವದಾಳಿಗೆ ಎಚ್ಚರವಾಯಿತೆಂದು ತಿಳಿದು ಇಬ್ಬರು ಡಾಕ್ಟರ್ ನರ್ಸ್ ಗಳೊಂದಿಗೆ ಒಳಗೆ ಬಂದರು. ಅವರ ಜೊತೆಯೇ ಒಳಗೆ ಬಂದವನು ಹಿಮಾಂಶು. ಮೂವತ್ತೈದರ ಆಸುಪಾಸು. ಎತ್ತರವಾಗಿ, ಬೆಳ್ಳಗೆ ಇದ್ದ. ಬಿಳಿಯ ಪೈಜಾಮದಲ್ಲಿ ತುಂಬ ಸರಳವಾಗಿದ್ದ. ಆತ ಪ್ರಿಯಂವದಾಳ ಸಾಕುಮಗ. ಪ್ರಿಯಂವದಾ ಮದುವೆಯಾಗಿರಲಿಲ್ಲ, ಹಿಮಾಂಶು ಕೂಡಾ. ತಮಗೆ ಸಂಸಾರವೇ ಇಲ್ಲ. ಬದುಕು ದೇಶಕ್ಕಾಗಿಯೇ ಎಂದು ಬಿಂಬಿಸುವುದು ಸುಲಭ.
ಹಿಮಾಂಶು ಪ್ರಿಯಂವದಾಳಷ್ಟು ಚಾಣಕ್ಯನಾಗಲೀ, ಚುರುಕಾಗಲೀ, ರಾಜಕೀಯದ ಒಳಗುಟ್ಟುಗಳನ್ನು ಗ್ರಹಿಸುವವನಾಗಲೀ ಆಗಿರಲಿಲ್ಲ. ಅದೊಂದು ನೋವು ಅವಳಿಗೆ ಕಾಡುತ್ತಿತ್ತು. ಹಾಗೆಂದು ಆತ ದಡ್ಡನೇನಲ್ಲ. ರಾಜಕೀಯ ವಲಯದಲ್ಲೇ ಬೆಳೆದು ಬಂದಿರುವುದರಿಂದ ಅದರ ಗಟ್ಟಿಗತನ ಅವನಿಗೂ ಬಂದಿದೆ. ಆದರೆ ತಾಯಿಯ ಕಮಾಂಡಿಂಗ್ ನೇಚರ್ ಬೆಳೆದು ಬಂದಿರಲಿಲ್ಲ. ಎಷ್ಟೆಂದರೂ ರಕ್ತ ಹಂಚಿಕೊಂಡು ಹುಟ್ಟುವುದೇ ಬೇರೆ. 
"ಏನಮ್ಮಾ ಇದೆಲ್ಲಾ!? ಎಷ್ಟು ಸಲ ಹೇಳಿದ್ದೇನೆ, ಜನಗಳ ಮಧ್ಯೆ ಹೋಗುವಾಗ ಎಚ್ಚರದಿಂದಿರು ಎಂದು..." ಮಾತಿನಲ್ಲಿ ಮೃದುತ್ವ, ಮುಖದಲ್ಲಿ ಕಳವಳ ಸ್ಪಷ್ಟವಾಗಿತ್ತು. ಒಣನಗೆ ನಕ್ಕಳವಳು. ತುಂಬಾ ರಕ್ತ ಹೋಗಿದ್ದರಿಂದ ಮುಖ ಬಿಳಚಿಕೊಂಡಿತ್ತು, ಸುಸ್ತು ಎದ್ದು ಕಾಣುತ್ತಿತ್ತು. 
ಡಾಕ್ಟರ್ ಗಳು ಅವಳ ನಾಡಿ ಬಡಿತ, ಹಾರ್ಟ್ ಬೀಟ್ಸ್, ಬ್ಲಡ್ ಪ್ರೆಶರ್ ಎಲ್ಲವನ್ನೂ ಚೆಕ್ ಮಾಡಿ "ನಾರ್ಮಲ್ ತೋರಿಸುತ್ತಿದೆ, ಎರಡು ದಿನ ರೆಸ್ಟ್ ಮಾಡಿದರೆ ಸರಿ ಹೋಗುತ್ತದೆ, Nothing to worry " ಎಂದು ಹೊರಗಡೆ ಹೋದರು ತಾಯಿ ಮಗನಿಗೆ ಪ್ರೈವಸಿ ಒದಗಿಸಲು. 
"ನನ್ನನ್ನು ಹತ್ಯೆಗಯ್ಯಲು ಪ್ರಯತ್ನಿಸಿದವರು ಯಾರು ತಿಳಿಯಿತಾ?" ಪ್ರಿಯಂವದಾ ಉದ್ವೇಗಗೊಂಡಳು. 
"ಒಬ್ಬ ಅಲ್ಲಿಯೇ ಪೋಲಿಸ್ Encounter ನಲ್ಲಿ ಬಲಿಯಾದ. ಪೋಲಿಸರು ಅವನ ಹಿನ್ನೆಲೆ ವಿಚಾರಿಸುತ್ತಿದ್ದಾರೆ. ಒಮ್ಮೆಲೇ ಗದ್ದಲವಾದ್ದರಿಂದ ಉಳಿದವರು ಸಿಗಲಿಲ್ಲ, ಪೋಲಿಸರು ಬಲೆ ಬೀಸಿದ್ದಾರೆ" ವರದಿ ಒಪ್ಪಿಸಿದ ಹಿಮಾಂಶು.
"ಹೊರಗಡೆ ಪತ್ರಿಕೆಯವರು, ಮಾಧ್ಯಮದವರು ಕಾಯುತ್ತಿದ್ದಾರಾ? ಎಲ್ಲ ವ್ಯವಸ್ಥೆಯಾಗಿದೆಯಾ?"
ಅಡ್ಡಡ್ಡ ತಲೆಯಾಡಿಸುತ್ತ ಇಲ್ಲ ಎಂದ ಹಿಮಾಂಶು. 
"ವಾಟ್!?" ಆಶ್ಚರ್ಯವಾಗಿತ್ತವಳಿಗೆ. ಅವಳ ಮನಸ್ಸನ್ನು ಅರ್ಥ ಮಾಡಿಕೊಂಡ ಹಿಮಾಂಶು " ನಿಮ್ಮ ಮೇಲೆ ಹತ್ಯೆ ಪ್ರಯತ್ನ ನಡೆದಿದೆ ಎಂದು ಹೊರಜಗತ್ತಿಗೆ ತಿಳಿಯದಂತೆ ತಡೆಹಿಡಿಯಲಾಗಿದೆ. ಒಂದು ಪುಟ್ಟ ಸುದ್ಧಿಯೂ ಎಲ್ಲೂ ಹೊರಬರದಂತೆ ನೋಡಿಕೊಂಡಿದ್ದಾರೆ ಪೋಲಿಸರು."
"ಮೈ ಉರಿಯಿತವಳಿಗೆ, ಏನು ಹೇಳುತ್ತಿರುವೆ? ಇದು ಎಂಥ ಸೆನ್ಸೇಷನಲ್ ನ್ಯೂಸ್! ನಮಗೆ ಎಷ್ಟು ಉಪಯುಕ್ತವಾಗಿದೆ! ಮುಂದಿನ ವರ್ಷವೇ ಲೋಕಸಭಾ ಚುನಾವಣೆಯಿದೆ. ಇದನ್ನು ನಮ್ಮ ಫೇವರ್ ಆಗಿ ಮಾಡಿಕೊಳ್ಳಬಹುದಿತ್ತು. ಏಕೆ ಹಾಗೆ ತಡೆಹಿಡಿದರು ಪೋಲಿಸರು? 
ವಿರೋಧ ಪಕ್ಷದವರೇ ಇರುತ್ತಾರೆ ಇದರ ಹಿಂದೆ. ನೀನೇನು ಮಾಡುತ್ತಿದ್ದೆ? ಎಲ್ಲವನ್ನೂ ನಾನೇ ಹೇಳಬೇಕಾ? ಯಾವಾಗ ತಿಳಿದುಕೊಳ್ಳುತ್ತೀಯೋ??" ನೋವಿತ್ತು ಅವಳ ಧ್ವನಿಯಲ್ಲಿ.
"ನನಗೆ ಅದೆಲ್ಲ ಗೊತ್ತಮ್ಮ. ಇದರಲ್ಲಿ ವಿರೋಧ ಪಕ್ಷದವರ ಕೈವಾಡವಿಲ್ಲ. ನಿನ್ನ ಒಳಿತಿಗಾಗಿಯೇ ಇದೆಲ್ಲ. ಒಬ್ಬ ಪೋಲಿಸ್ ಅಧಿಕಾರಿ ಹೇಳುವ ಮಾತುಗಳು ಸರಿಯೆನಿಸಿ ನಾನು ಹೀಗೆ ಮಾಡಲು ಒಪ್ಪಿಕೊಂಡೆ. ಅವನನ್ನೇ ಒಳಗೆ ಕಳಿಸುತ್ತೇನೆ, ಮಾತನಾಡು. ಆಯಾಸ ಮಾಡಿಕೊಳ್ಳಬೇಡ. ಸುಧಾರಿಸಿಕೋ ಎರಡು ದಿನ. ಉಳಿದದ್ದೆಲ್ಲ ನಾನು ನೋಡಿಕೊಳ್ಳುತ್ತೇನೆ." ಹೊರ ನಡೆದ ಹಿಮಾಂಶು. 
"May I Come In?" ಬಾಗಿಲು ತೆರೆದು ನಿಂತ ಸಮ್ಮಿಶ್ರ. "Come in" ಒಳ ಬರುತ್ತಿರುವ ಸಮ್ಮಿಶ್ರನ ಮುಖವನ್ನೇ ನೋಡಿದಳು ಪ್ರಿಯಂವದಾ. ಮೊದಲ ಬಾರಿ ನೋಡಿದರೂ ಕೂಡ ಸಲುಗೆ ಮೂಡಿತು ಅವನಲ್ಲಿ. ಆತ ಅವಳ ಬಳಿ ಬಂದು ತಲೆಯಡಿ ಇದ್ದ ದಿಂಬನ್ನು ಸರಿ ಮಾಡಿ ಅವಳನ್ನು ನಿಧಾನವಾಗಿ ಎಬ್ಬಿಸಿ ಕೂರಿಸಿದ. ಪಕ್ಕದಲ್ಲಿಯೇ ಜ್ಯೂಸ್ ಇತ್ತು. ಬದಿಯಲ್ಲಿಯೇ ಇದ್ದ ಗ್ಲಾಸಿಗೆ ಹಾಕಿ ಕೊಟ್ಟ. ಎದುರಿಗಿರುವವಳು ಪ್ರಿಯಂವದಾ ಎಂಬ ಭಯವಾಗಲೀ, ದೇಶದ ಆಡಳಿತ ಪಕ್ಷದ ಕಿಂಗ್ ಪಿನ್ ಜೊತೆ ತಾನು ಇದ್ದೇನೆ ಎಂಬ ನಾಜುಕುತನವಾಗಲೀ, ಇದ್ದಂತಿರಲಿಲ್ಲ ಅವನಿಗೆ. ಸಹಜ ಮುಗುಳ್ನಗು ಲಾಸ್ಯವಾಡುತ್ತಿತ್ತು ಅವನ ಮುಖದಲ್ಲಿ. 
ತನ್ನ ಮಗ ಕೂಡ ತನ್ನ ಜೊತೆ ಹೀಗಿರುವುದಿಲ್ಲ. ಅವನು ಜೊತೆಯಿದ್ದರೂ ಏಕತಾನತೆ ಕಾಡುತ್ತದೆ. ಆದರೆ ಸಮ್ಮಿಶ್ರ ಒಳಗೆ ಬರುತ್ತಲೇ ಏನೋ ಆತ್ಮ ವಿಶ್ವಾಸ ಮೂಡಿತು. ಆತ ತನ್ನನ್ನು ಹಿಡಿದೆತ್ತಿ ಕೂರಿಸಿದ ರೀತಿ, ಜ್ಯೂಸ್ ನೀಡಿದ್ದು.. ತನ್ನ ಹತ್ತಿರದ ಸಂಬಂಧಿಯಂತೆ ಅನ್ನಿಸಿತು ಅವಳಿಗೆ. 
ಅದನ್ನೆಲ್ಲ ಮನಸ್ಸಿನಲ್ಲಿಯೇ ಅಡಗಿಸಿಕೊಳ್ಳುತ್ತಾ "ಯಾರು ನೀನು?" ಅಧಿಕಾರವಿತ್ತು ಧ್ವನಿಯಲ್ಲಿ. 
"ನಿಮ್ಮ ಸೆಕ್ಯುರಿಟಿ ಟೀಂ ನಲ್ಲಿ ನಾನೂ ಒಬ್ಬನಾಗಿದ್ದೆ. ನಿಮಗೆ ಗುಂಡು ಹಾರಿಸಿದವನನ್ನು ಶೂಟ್ ಮಾಡಿದವನು ನಾನೇ." 
ಆತನ ಮುಖವನ್ನೇ ನೋಡುತ್ತ ಸೀರಿಯಸ್ ಆಗಿ "ಅದಕ್ಕೇನೀಗ?" ಎಂದಳು. "ಆತನ ಹಣೆಗೆ ಶೂಟ್ ಮಾಡುವ ಬದಲು ಭುಜಕ್ಕೋ, ಕಾಲಿಗೋ ಶೂಟ್ ಮಾಡಿದ್ದರೆ ಈ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿಯುತ್ತಿತ್ತು. ನಿನ್ನ ಬುದ್ಧಿಗೇಡಿತನದಿಂದ ಅದು ತಪ್ಪಿಹೋಯಿತು" ಎಂದು ಕೆಂಡ ಕಾರಿದಳು.
ಸಮ್ಮಿಶ್ರ ಅವಳಿಂದ ಇದನ್ನು ನಿರೀಕ್ಷಿಸಿರಲಿಲ್ಲ. "ಅವನನ್ನಂತೂ ಹೊಡೆದು ಮುಗಿಸಿದೆ. ಇನ್ವೆಸ್ಟಿಗೇಶನ್ ನಡೆಸಿ ಇದರ ಹಿಂದೆ ಯಾರಿದ್ದಾರೆ ಎಂದು ಬಯಲಿಗೆಳೆಯುವುದು ಬಿಟ್ಟು ನನ್ನ ಮನೆಯಲ್ಲಿ ಏನು ಮಾಡುತ್ತಿರುವೆ!? ಈ ಸುದ್ಧಿ ಎಲ್ಲೂ ಲೀಕ್ ಆಗದಂತೆ ತಡೆಯಲು ವಿರೋಧ ಪಕ್ಷದವರು ನಿನಗೆಷ್ಟು ನೀಡಿದ್ದಾರೆ?"ಕೋಪ ತಣ್ಣಗಾಗಲೇ ಇಲ್ಲ. 
ಇವಳು ನಿಜವಾಗಿಯೂ ಹೆಣ್ಣೇ?? ಎಂದುಕೊಂಡ. ಉತ್ತರ ನೀಡಬೇಕಾದ ಜವಾಬ್ದಾರಿ ಅವನ ಮೇಲಿತ್ತೀಗ. ಚೆಸ್ ನಲ್ಲಿ ಎದುರಾಳಿ ಚೆಕ್ ನೀಡಿದ್ದಾನೆ. ಕೇವಲ ತಪ್ಪಿಸಿಕೊಳ್ಳುವುದಲ್ಲ, ತಪ್ಪಿಸಿಕೊಂಡು ಎದುರಾಳಿಯನ್ನು ಸಂಕಷ್ಟಕ್ಕೆ ಗುರಿ ಮಾಡಬೇಕು. ಇಲ್ಲದಿದ್ದರೆ ಆತನ ಬೇಟೆ ಬಲೆಗೆ ಬೀಳುತ್ತದೆ. 
ಸಮ್ಮಿಶ್ರ ಬಳಿಯಿದ್ದ ಚೇರ್ ಎಳೆದು ಅವಳ ಹತ್ತಿರವೇ ಕುಳಿತ. ಕುಡಿದಿಟ್ಟ ಗ್ಲಾಸ್ ತೆಗೆದು ಬದಿಯಲ್ಲಿಟ್ಟು ಮಾತು ಪ್ರಾರಂಭಿಸಿದ "ಪ್ರಿಯಂವದಾರವ್ರೇ, ನನಗೆ ವಿರೋಧ ಪಕ್ಷ ನೀವು ಎರಡು ಒಂದೇ. ನಾನೊಬ್ಬ ಪೋಲಿಸ್. ನನಗೆ ಪಕ್ಷವಾಗಲಿ, ಸಂಘಟನೆಗಳಾಗಲೀ, ಯಾರು ಯಾವ ಸ್ಥಾನದಲ್ಲಿ ಇರುವರು ಎಂಬುದಾಗಲೀ ಮುಖ್ಯವಲ್ಲ.ಖಾಕಿ ಬಟ್ಟೆ ನನ್ನ ಮೈ ಮೇಲೆ ಇರುವವರೆಗೂ ನನಗೆ ಮೊದಲಿಗೆ ನೆನಪಾಗುವುದು ಕರ್ತವ್ಯ ಮತ್ತು ದೇಶ."
ಚೆಕ್ ನೀಡಲು ಬಂದಿದ್ದ ಮಂತ್ರಿಯ ಎದುರು ಪೇದೆಯನ್ನು ನಿಲ್ಲಿಸಿದ್ದ ಸಮ್ಮಿಶ್ರ. ಎದುರು ನಿಂತಿರುವ ಮಂತ್ರಿಗೆ ಪೇದೆ ದೊಡ್ಡ ಸಮಸ್ಯೆಯಲ್ಲ. ಆದರೆ ಆ ಪೇದೆಗೆ ಹಿಂದಿನಿಂದ ಬೆಂಬಲವಾಗಿ ನಿಂತ ಆನೆ, ಮಂತ್ರಿ, ಒಂಟೆಯ ಸಮಸ್ಯೆ ದೊಡ್ದದು. ಒಂದು ಪೇದೆಯನ್ನು ಹೊಡೆಯಲು ಮಂತ್ರಿಯನ್ನು ಉಪಯೋಗಿಸುವುದು ದಡ್ಡತನ.
ಆತ ಮುಂದುವರೆಸಿದ. "ಆತ ನಿಮ್ಮ ಮೇಲೆ ಗುಂಡು ಹಾರಿಸಿದ ಎಂಬ ಒಂದೇ ಕಾರಣಕ್ಕೆ ನಾನವನನ್ನು ಶೂಟ್ ಮಾಡಬೇಕಾಗಿ ಬಂತು. ನೋಡಿದರೆ ಆತನೂ ಭಾರತ ದೇಶದ ಪ್ರಜೆಯೇ. ಕೇವಲ ನಿಮ್ಮ ಮೇಲೆ ಗುಂಡು ಹಾರಿಸಿದ್ದಕ್ಕೆ ಆತ ಸತ್ತನೆಂದರೆ ಅದು ನಿಮ್ಮ ಮೇಲಿನ ಗೌರವಕ್ಕಲ್ಲ, ದೇಶದ ಮೇಲಿನ ಗೌರವಕ್ಕೆ. ಒಬ್ಬ ದೇಶ ಆಳುವ ವ್ಯಕ್ತಿಯನ್ನು ಕಾಯ್ದುಕೊಳ್ಳುವುದು ಪೋಲಿಸರಾದ ನಮ್ಮ ಕರ್ತವ್ಯ. 
ವಿಚಾರಣೆ, ವಿರೋಧ ಪಕ್ಷ, ಚುನಾವಣಾ, ಓಟು ಇವೆಲ್ಲ ನಮಗೆ ಸೆಕೆಂಡರಿ. ಜಗತ್ತಿನೆದುರು ದೇಶದ ಗೌರವ ಕುಂದಬಾರದು ಎಂಬುದಷ್ಟೇ ನನ್ನ ತಲೆಯಲ್ಲಿತ್ತು. 
ಭಾರತದಲ್ಲಿ ದೇಶ ಆಳುವಂಥ ದೊಡ್ದ ವ್ಯಕ್ತಿಗಳಿಗೆ ಸರಿಯಾದ ಸೆಕ್ಯುರಿಟಿ ಇಲ್ಲವೆಂದರೆ ಪ್ರಜೆಗಳ ಕಥೆಯೇನು ಎಂಬ ಭಾವ ಉಳಿದವರಲ್ಲಿ ಮೂಡುತ್ತದೆ. 
ಭಾರತದ ಮಿಲಿಟರಿಯಲ್ಲಾಗಲಿ, ಪೋಲಿಸರಲ್ಲಾಗಲೀ ಯಾರನ್ನೂ ರಕ್ಷಿಸುವ ಶಕ್ತಿ ಇಲ್ಲವೆಂದು ನಾವು ಪಾಕಿಸ್ತಾನಕ್ಕೆ ಹೇಳಿದಂತಾಗಬಹುದು.ಇಂಥವೆಲ್ಲ ಗಮನಿಸುತ್ತಲೇ ಇರುವ ಚೈನಾ ಟಿಬೆಟ್, ನಾಗಾಲ್ಯಾಂಡ್, ಲಡಾಕ್ ನಮ್ಮದು ಎಂದು ಯುದ್ಧ ಸಾರಬಹುದು. ನಮಗೆ, ನಮ್ಮ ಜೀವಕ್ಕೆ ರಕ್ಷೆ ಇಲ್ಲವೆಂದಾದರೆ ಬೆಳೆಯುತ್ತಿರುವ ಪ್ರವಾಸೋದ್ಯಮ ಕುಂಠಿತವಾಗಬಹುದು. ಇದನ್ನೆಲ್ಲಾ ಯೋಚಿಸಿದ್ದೀರಾ ನೀವು??" 
ಒಂದು ನಿಮಿಷದ ಸಂಪೂರ್ಣ ಮೌನವೇರ್ಪಟ್ಟಿತು. ಯಾವುದೋ ಗಲ್ಲಿಯ ಆಟಗಾರನೊಂದಿಗೆ ಆಟವಾಡುತ್ತಿದ್ದೇನೆ ಎಂದುಕೊಂಡು ಪ್ರಾರಂಭವಾದ ಆಟ, ಎದುರಾಳಿ ವಿಶ್ವನಾಥನ್ ಆನಂದ್ ಆಗಿ ಬದಲಾಗಿದ್ದ. ಅವಳ ಒಂದೊಂದು ಕಾಯಿಗಳನ್ನು ಎಲ್ಲಿಯೂ ಸರಿಯದಂತೆ ಮಾಡಿ ತನ್ನ ಕಾಯಿಗಳನ್ನು ಮಾತ್ರ ಮುಂದೆ ನಡೆಸುತ್ತಿದ್ದ. ತಾನು ಆತುರಪಟ್ಟು ದುಡುಕಿದೆ ಎಂಬ ಸತ್ಯ ತಿಳಿಯತೊಡಗಿತು ಪ್ರಿಯಾಳಿಗೆ. ರಾಜನ ಎದುರು ಓಪನ್ ಮನೆಗಳನ್ನು ಬಿಟ್ಟು ಚೆಕ್ ಕೊಡುವಂತೆ ಹುರಿದುಂಬಿಸಿದಂತಾಯಿತು ಎಂದು ನೊಂದಳು. ಈಗ ಗೆಲ್ಲುತ್ತಿದ್ದಾನೆ. ಅವನ ಮುಖ ನೋಡಿದಳು, ಅದೇ ನಗು. ತನ್ನೆದುರು ರಿವಾಲ್ವರ್ ಹಿಡಿದು ನಿಂತಿದ್ದ ಆಗುಂತಕನ ಎದುರು ತಾನೂ ಹಾಗೆಯೇ ನಕ್ಕಿದ್ದಳು. ಸಮ್ಮಿಶ್ರ ಸಾಮಾನ್ಯನಲ್ಲ ಎಂದು ತಿಳಿಯಿತು. 
ಇವನೇ ನನ್ನ ಮೇಲೆ ಹತ್ಯೆಯ ಸಂಚು ಮಾಡಿಸಿದ್ದನಾ? ಎಂಬ ಸಣ್ಣ ಸಂಶಯವೂ ಬಂತು. ಆದರೆ ಒಬ್ಬನನ್ನು ಕೊಂದಿದ್ದಾನೆ.ಇತನೇ ಸಂಚು ಮಾಡಿದ್ದರೆ ಜೀವ ತೆಗೆಯುವ ಉಪಾಯ ಮಾಡುತ್ತಿರಲಿಲ್ಲ.ಚತುರ ಇವನು ಎಂದುಕೊಂಡಳು.
ಈಗ ತನ್ನ ನಡೆ,ಉತ್ತರ ನೀಡಬೇಕು. ಎಲ್ಲ ಕಡೆಯಿಂದಲೂ ಬಂಧಿಯಾಗಿದ್ದೇನೆ. ಡ್ರಾ ಘೋಷಿಸಬೇಕು ಇಲ್ಲವೇ ಸೋಲಬೇಕು. ರಾಜಕೀಯದಲ್ಲಿ ಸೋಲಿಗಿಂತ ಡ್ರಾಗಳಿಗೆ ಹೆಚ್ಚು ಪ್ರಾಮುಖ್ಯತೆ. "ಭೇಷ್, ಭೇಷ್ " ಎಂದು ಸೋಲಿನ ನೋವನ್ನು ಮಾತಲ್ಲಿ ಮುಚ್ಚಿದಳು. ನಕ್ಕ ಸಮ್ಮಿಶ್ರ. ಅವಳಿಗೆ ಬೇರೆ ದಾರಿಯಿಲ್ಲ ಎಂದು ಗೊತ್ತವನಿಗೆ. ತಾನೂ ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರೆ ಸಮಬಲರಾಗಿಬಿಡುತ್ತೇವೆ. ಡ್ರಾ ಮಾಡಿಕೊಳ್ಳುವುದಾದರೆ ನನಗೆ ನಿನ್ನನ್ನು ಸೋಲಿಸಲೂ ಗೊತ್ತು ಎಂದು ತೋರಿಸಬೇಕು. ಸಮ್ಮಿಶ್ರ ಅದಕ್ಕೆಂದೇ ಮತ್ತೊಂದು ಕಾಯಿ ಮುನ್ನಡೆಸಿದ. 
"ನಾನು ತೆಗೆದುಕೊಂಡ ನಿರ್ಧಾರ ನಿಮಗೂ ಕೂಡ ಒಳ್ಳೆಯದೇ.."
ಆಶ್ಚರ್ಯಗೊಂಡಳು ಪ್ರಿಯಂವದಾ "ಅದು ಹೇಗೆ??" 
"ಇಂತಹ ಒಂದು ಹತ್ಯೆಯ ಪ್ರಯತ್ನ ನಡೆಯಿತು ಎಂದು ಜಗತ್ತಿಗೆ ತಿಳಿದರೆ ಇವಳ ಹತ್ತಿರ ಹೋಗುವುದು ಇಷ್ಟು ಸುಲಭವಾ ಎಂದೆನ್ನಿಸಿಬಿಡುತ್ತದೆ. ಗಲ್ಲಿ ಗಲ್ಲಿಯಲ್ಲಿ ನಿಮ್ಮ ಮೇಲೆ ಇಂತಹ ಪ್ರಯತ್ನಗಳು ನಡೆಯಬಹುದು. ಎಲ್ಲ ಸಮಯದಲ್ಲೂ ವಿಧಿ ನಿಮ್ಮ ಕಡೆಯೇ ನಿಲ್ಲಬೇಕೆಂದಿಲ್ಲ. ಎಲ್ಲೋ ಒಂದು ಕಡೆ, ಯಾವುದೋ ಸಣ್ಣ ತಪ್ಪು ಎಂತಹ ಅಚಾತುರ್ಯವನ್ನು ಕೂಡ ಸೃಷ್ಟಿಸಬಹುದು. ನಿಮ್ಮ ಜೀವಕ್ಕೆ ಅದು ಒಳ್ಳೆಯದಲ್ಲ. 
ಜೀವಿಗಳು ಭ್ರಮೆಯಲ್ಲಿ ಬದುಕುತ್ತವೆ. ಆನೆಯ ಮರಿಯನ್ನು ಸಣ್ಣದಿರುವಾಗಲೇ ಸರಪಳಿಯಲ್ಲಿ ಕಟ್ಟಿ ಬೆಳೆಸಿದರೆ ಮುಂದೆಂದು ಅದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾರದು. ಯಾಕೆಂದರೆ ಸರಪಳಿಯಿಂದ ಬಂಧಿಸುವಾಗಲೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿರುತ್ತದೆ. ಅದು ಸಾಧ್ಯವಾಗದಾಗ ತನ್ನಿಂದ ಸಾಧ್ಯವಿಲ್ಲವೆಂಬ ಭ್ರಮೆಗೆ ಬೀಳುತ್ತದೆ. ಮತ್ತೆ ಯಾವತ್ತೂ ಅದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾರದು. ಇದು ಕೂಡ ಹಾಗೆಯೇ. ನಿಮ್ಮಂತವರ ಸುತ್ತಲೂ ತುಂಬ ದೊಡ್ಡ ರಕ್ಷಣಾ ವಲಯ ಇರುತ್ತದೆ ಎಂಬ ಭ್ರಮೆಯಲ್ಲಿ ಜನರು ಬದುಕುತ್ತಿರುತ್ತಾರೆ. ಅದು ಸುಳ್ಳೆಂದು ತಿಳಿದು ಬಿಟ್ಟರೆ!?" ಮಾತು ನಿಲ್ಲಿಸಿದ ಸಮ್ಮಿಶ್ರ.
ನಿನ್ನನ್ನು ಹಾಗಲ್ಲದಿದ್ದರೆ ಹೀಗೆ ಮೀಟ್ ಮಾಡಬಹುದಿತ್ತು ಆದರೂ ತಾನು ಡ್ರಾ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಆತನ ದೊಡ್ಡತನ ಎಂದು ಮಾತಿನಲ್ಲೇ ಹೇಳಿ ಮುಗಿಸಿದ್ದ.
ಮತ್ತೆ ಆತನೇ ಮುಂದುವರೆಸಿದ "ನೀವು ಹೇಳುವುದು ಸರಿಯೇ, ಹತ್ಯೆಗೆ ಪ್ರಯತ್ನ ಮಾಡಿದವರನ್ನು ಹಿಡಿಯುವುದು ಬಿಟ್ಟು ಇಲ್ಲೇನು ಮಾಡುತ್ತಿರುವೆ ಎಂದು? ನಿಮ್ಮನ್ನು ಬದುಕಿಸಿದ ನೆಪ ಹೂಡಿ ಪ್ರತಿಫಲ ಪಡೆಯಲು ಬಂದಿರುವೆ ಎಂದು ನೀವಂದುಕೊಂಡಿದ್ದೀರಿ. ಅದು ಸಹಜವೂ ಕೂಡ. ಯಾಕೆಂದರೆ ಮನುಷ್ಯನ ಮನಸ್ಸೇ ಹಾಗೆ. ಆದರೆ ನಾನು ಸಮ್ಮಿಶ್ರ, ಪ್ರಿಯಂವದಾ... " ಮಾತು ಏಕವಚನಕ್ಕೆ ಇಳಿದಿತ್ತು. ಇಂಚಿಂಚಾಗಿ ಕಬಳಿಸುತ್ತಿದ್ದ ಆಕೆಯನ್ನು. 
"ಕಾರಣ ಹೇಳಿ ಹೋಗುವುದು ನನ್ನ ಕರ್ತವ್ಯ. ಅದಕ್ಕೆಂದೇ ಬಂದಿದ್ದೇನೆ. ಅದೀಗ ಮುಗಿಯಿತು. ಇಷ್ಟಾದ ನಂತರವೂ ನಿಮಗೆ ಇದನ್ನೇ ಸುದ್ಧಿ ಮಾಡಬೇಕೆಂದರೆ ಕಷ್ಟದ ಕೆಲಸವಲ್ಲ. ನಿಮ್ಮ ಪ್ರೈವೇಟ್ ಫೋಟೋಗ್ರಾಫರ್ಸ್ ಮಾಡಿದ ವಿಡಿಯೋದಲ್ಲಿ, ತೆಗೆದ ಫೋಟೋಗಳಲ್ಲಿ ಎಲ್ಲವನ್ನು ಸೆರೆ ಹಿಡಿದಿರುತ್ತಾರೆ. ಅದನ್ನು ಉಪಯೋಗಿಸಿ ಸುದ್ಧಿ ಮಾಡಿಕೊಳ್ಳಿ, ಅದಕ್ಕೇನು ಕಾಲ ಮಿಂಚಿಲ್ಲ."
ಈಗಲೂ ನಿನಗೆ ಹೇಗೆ ಗೆಲ್ಲಬೇಕು ಎಂಬ ನಡೆ ಸೂಚಿಸುತ್ತಿದ್ದೇನೆ, ಅದನ್ನು ಬಳಸಿ ಗೆಲ್ಲು. ಆದರೆ ನೀನು ಗೆದ್ದು ಸೋತಂತೆ ಎಂದು ನಿನಗೆ ತಿಳಿದಿರುತ್ತದಲ್ಲ ಎಂಬಂತಿತ್ತು ಅವನ ಮಾತಿನ ಧಾಟಿ. 
ಒಂದು ನಿಮಿಷದ ಮೌನದ ನಂತರ ಆತ ಹೊರಡಲನುವಾಗಿ "ಬರ್ತೀನಿ.." ಎಂದ.
ಅವಳೇ ಮೌನ ಮುರಿದಳು. "ಇದ್ದು ಬಿಡು."
"ವ್ಹಾಟ್??" ತಿರುಗಿ ನೋಡಿದ ಸಮ್ಮಿಶ್ರ.
"ಹೌದು, ನನ್ನ ಪ್ರೈವೇಟ್ ಸೆಕ್ಯುರಿಟಿಯಾಗಿ ಇದ್ದುಬಿಡು.." 
"ನಾನು ಪೋಲಿಸ್" ನಕ್ಕ ಸಮ್ಮಿಶ್ರ. ದೇಶ ಕಾಯುತ್ತೇನೆ ಹೊರತೂ ನಿನ್ನನ್ನಲ್ಲ ಎಂಬ ಸ್ಪಷ್ಟ ಸಂದೇಶವಿತ್ತು.
ಅವಳೂ ನಕ್ಕಳು. "ಗೊತ್ತು ನನಗೆ, ಆ ಕೆಲಸ ಬಿಡು. ನಾನೇ ನಿನ್ನನ್ನು ನೇಮಿಸಿಕೊಳ್ಳುತ್ತೇನೆ. ಅಲ್ಲಿಗಿಂತ ಚಾಲೆಂಜಿಂಗ್ ಜಾಬ್ ಇಲ್ಲಿ ಸಿಗುತ್ತದೆ.." 
ಎರಡು ನಿಮಿಷ ಯೋಚಿಸಿ ಷರತ್ತಿನೊಂದಿಗೆ ಎಂದ. 
"ಏನದು?" ಪ್ರಿಯಂವದಾ ಎಲ್ಲದಕೂ ಸಿದ್ಧಳಿದ್ದಳು.
"ನೀನು ನನ್ನ ಯಾವುದೇ ಮಾತಿಗೆ ಎದುರಾಡಬಾರದು ರಕ್ಷಣೆಯ ವಿಷಯದಲ್ಲಿ. ಮತ್ತೊಂದೆಂದರೆ ನನ್ನ ಹಿಂದೆ ಯಾವತ್ತೂ ಗೂಢಾಚಾರಿಗಳನ್ನು ನೇಮಿಸಬಾರದು.ಇವೆರಡರಲ್ಲಿ ಯಾವುದನ್ನು ಮುರಿದರೂ ಅದೇ ಕೊನೆ" 
"ಡೀಲ್" ಎಂದಳು.
ಅಂದಿನಿಂದ ಹತ್ತು ವರ್ಷ ಕಳೆದು ಹೋಗಿತ್ತು. ಸಮ್ಮಿಶ್ರ ಅವಳನ್ನು ಕಣ್ರೆಪ್ಪೆಯಂತೆ ಕಾಯ್ದುಕೊಂಡಿದ್ದ. 
ಪ್ರಿಯಂವದಾ ಎಂದಿಗೂ ತನ್ನ ಷರತ್ತುಗಳನ್ನು ಮುರಿಯುವ ಯೋಚನೆ ಕೂಡ ಮಾಡಿರಲಿಲ್ಲ. ಎದುರಿಗಿದ್ದ ವ್ಯಕ್ತಿ ತನಗಿಂತ ಬಲಶಾಲಿ ಎಂಬ ಕಲ್ಪನೆ ಒಮ್ಮೆ ಮೂಡಿದರೆ ತಲೆಯಿಂದ ಅದನ್ನು ತೆಗೆಯುವುದು ಬಹಳ ಕಷ್ಟ. ಅವರ ಮೊದಲ ಭೇಟಿಯಲ್ಲಿಯೇ ಸಮ್ಮಿಶ್ರ ಅವಳಿಗಿಂತ ಶಕ್ತಿವಂತ ಮತ್ತು ಬುದ್ಧಿವಂತ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದ. ಅದು ಅವಳ ತಲೆಯಲ್ಲಿ ಹಾಗೆಯೇ ಉಳಿದುಬಿಟ್ಟಿತ್ತು. 
ಸಮ್ಮಿಶ್ರ ಅವಳ ರಕ್ಷಣಾವಲಯಕ್ಕೆ ಬಂದ ನಂತರ ಹಲವಾರು ಹುಳುಕುಗಳು ಅವನಿಗೆ ತಿಳಿದಿದ್ದವು. ಅದರ ಬಗ್ಗೆ ಆತ ತಲೆ ಕೆಡಿಸಿಕೊಂಡಿರಲಿಲ್ಲ. ರಾಜಕೀಯ ಎಂದ ಮೇಲೆ ಇದು ಸಾಮಾನ್ಯ ಎಂಬುದು ಗೊತ್ತಿತ್ತು. ಸಮ್ಮಿಶ್ರ ಒಂಟಿಯಾಗಿಯೇ ಇದ್ದ. ಪ್ರಿಯಂವದಾ ಕೂಡ ಮದುವೆಯಾಗುವಂತೆ ಸೂಚಿಸಿದ್ದಳು. ಮನೆಯವರ ಬಗ್ಗೆ ಕೇಳಿದರೆ ತನಗಾರು ಇಲ್ಲವೆಂದು ಹೇಳಿದ್ದ. ಮದುವೆಗೂ ಮನಸ್ಸು ಮಾಡಿರಲಿಲ್ಲ. ಹಾಗೆಯೇ ಕಳೆದಿತ್ತು ದಿನಗಳು.. ಪ್ರಿಯಂವದಾ ಸಮ್ಮಿಶ್ರನ ಭದ್ರ ಕೋಟೆಯಲ್ಲಿ ಸುರಕ್ಷಿತವಾಗಿದ್ದಳು.
ರಣಹದ್ದಿನ ಕಣ್ಣೊಂದು ಅವಳ ಮೇಲೆ ಬೀಳುವವರೆಗೆ...
ಗರುಡ ಭಾರತಕ್ಕೆ ಬಂದಿದ್ದ.. ಪ್ರಿಯಂವದಾಳ ಪೂರ್ತಿ ಡಿಟೇಲ್ಸ್ ಅವನ ಬಳಿಯಿತ್ತು... ಸಮ್ಮಿಶ್ರನದೂ ಸೇರಿಸಿ.....

                                   ...............................ಮುಂದುವರೆಯುತ್ತದೆ..............................

 

ಖತರ್ನಾಕ್ ಕಾದಂಬರಿ ಅಧ್ಯಾಯ 6

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                               ಅಧ್ಯಾಯ 6

"ಕ್ರಾಂತಿ, ದೊಡ್ಡ ಮಟ್ಟದ ಕ್ರಾಂತಿ ಆಗಬೇಕು" ಎಂದ ಶಾಸ್ತ್ರಿ.ಎದುರಿಗೆ ಕುಳಿತಿದ್ದ ಸರೋವರಾ ಕಕ್ಕಾಬಿಕ್ಕಿಯಾಗಿ ಶಾಸ್ತ್ರಿಯನ್ನೇ ನೋಡುತ್ತ ಕುಳಿತಿದ್ದಳು. ಸೂರ್ಯ ದಿಗಂತದಂಚಿನಲ್ಲಿ ಇಣುಕುತ್ತಿದ್ದ. ಸಮುದ್ರದಲೆಗಳು ದಡಕ್ಕೆ ಬಡಿದು, ಮರಳಿ ಮರೆಯಾಗಿ, ತೆರಳಿ ತೆರೆಯಾಗುತ್ತಿದ್ದವು. ಸರೋವರಾಳ ನೀಳ ಕೈಬೆರಳುಗಳು ಮರಳಿನಲ್ಲಿ ಚಿತ್ತಾರ ಬಿಡಿಸಿ, ಅಳಿಸಿ, ಪುನಃ ಬಿಡಿಸಿ ಅವಳ ಮನಸ್ಥಿತಿಯನ್ನು ಚಿತ್ರಿಸುತ್ತಿದ್ದವು. 
ಶಾಸ್ತ್ರಿ ಅರ್ಧ ಘಂಟೆಯಿಂದ ಅವಳಿಗೆ ವಿವರಿಸುತ್ತಲೇ ಇದ್ದ. ಸರೋವರಾಳಿಗೆ ಅವೆಲ್ಲ ದೊಡ್ಡ ವಿಷಯಗಳು. ಸರೋವರಾ ಅವಳ ಹೆಸರಿನಂತೆಯೇ. ಸಮುದ್ರದಂತೆ ಆಕೆ ದಡಕ್ಕೆ ಬಡಿದು ಸದ್ದು ಮಾಡುವವಳಲ್ಲ.ತಾನಾಯಿತು, ತನ್ನ ಪ್ರಪಂಚವಾಯಿತು ಅಷ್ಟೆ. ದೇಶದಲ್ಲಿ ಏನಾಗಬೇಕು? ದೇಶವನ್ನು ಯಾರು ಆಳಬೇಕು? ಯಾರು ಆಳಿದ್ದರು? ಇದೆಲ್ಲ ಅವಳಿಗೆ ಬೇಡದ ವಿಷಯ. ಶಾಸ್ತ್ರಿಗೆ ಬೇಸರವಾಗದಿರಲೆಂದು ಆತ ಹೇಳುವುದನ್ನು ಕೇಳುತ್ತ ಕುಳಿತಿದ್ದಳು. ಶಾಸ್ತ್ರಿಯ ವಿವರಣೆ, ಆತನ ಉಪಾಯಗಳು ಒಮ್ಮೊಮ್ಮೆ ಅವಳಲ್ಲಿ ಭಯ ಹುಟ್ಟಿಸುತ್ತಿತ್ತು. ಹುಲಿ ಕಂಡ ಚಿಗರೆಯಂತೆ ಮುದ್ದೆಯಾಗಿ ಕುಳಿತು ಶಾಸ್ತ್ರಿಯ ಮಾತಿನ ಭರಾಟೆ ಸಹಿಸುತ್ತಿದ್ದಳು. ಮಾತನಾಡುತ್ತಿರುವ Topic ಬದಲಾದರೆ ಸಾಕಿತ್ತು ಅವಳಿಗೆ. 
"ಈ ಕ್ರಾಂತಿ, ಹೋರಾಟ ಇವೆಲ್ಲ ನಮ್ಮಂಥ ಸಾಮಾನ್ಯ ಜನರಿಗಲ್ಲ ಶಾಸ್ತ್ರಿ." ಬಾಯ್ಬಿಟ್ಟಳು ಸರೋವರಾ. 
ಏನೋ ಹೇಳುತ್ತಿದ್ದ ಶಾಸ್ತ್ರಿ ಅಲ್ಲಿಗೇ ನಿಲ್ಲಿಸಿ ಅವಳ ಮುಖ ನೋಡಿದ. ಅವನಿಗೆ ನಗು ಬಂತು. "ಅಯ್ಯೋ ಮಂಕೆ!! ಕ್ರಾಂತಿ, ಹೋರಾಟ, ಧರಣಿ ಇಂತವನ್ನೆಲ್ಲ ನನ್ನಂತ, ನಿನ್ನಂತ ಸಾಮಾನ್ಯರೇ ಮಾಡಬೇಕು!!
ಯಾಕೆ ಹೇಳು?? ನಾನೇ ಹೇಳುತ್ತೇನೆ ಕೇಳು. ನೀನು Business Man ಆಗಿರುವೆ ಎಂದುಕೋ, ನಿನ್ನ ಒಂದು ತಾಸಿನ ಬೆಲೆ ಸಾವಿರವೋ, ಹತ್ತು ಸಾವಿರವೋ, ಲಕ್ಷವೋ ಆಗಿರುತ್ತದೆ. ನಿನಗೇಕೆ ಬೇಕು ಕ್ರಾಂತಿ, ಧರಣಿ? Time Waste ಅಲ್ಲವಾ? ನಿನ್ನ ಒಂದು ತಾಸು ಹಾಳಾದರೆ ಅಷ್ಟು ದುಡ್ಡು ಕೈ ಬಿಡುತ್ತದೆ. 
ಇನ್ನು ನೀನು Government Employee ಆಗಿದ್ದರೆ ಕೆಲಸ ಮಾಡುತ್ತಿರುವ ಸರ್ಕಾರದ ವಿರುದ್ಧವೇ ಧರಣಿ ಕೂರಲು, ಕ್ರಾಂತಿ ಏಳಲು ಸಾಧ್ಯವಾ!?
ಇದಲ್ಲದೇ ಯಾವುದೋ MNC ಯಲ್ಲಿ ಕೆಲಸ ಮಾಡುತ್ತಿರುವೆ ಎಂದುಕೋ. ಅಲ್ಲಿ ನಿನಗೆ ಕೊಡುವ ಸಂಬಳಕ್ಕೆ ನಿನಗೆ ಎಷ್ಟು ಕೆಲಸ ಕೊಡುತ್ತಾರೆ ಎಂದರೆ ನೀನು ಯಾವುದೇ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಯೋಚಿಸಲಾರೆ ಕೂಡಾ. ವಾರ್ತೆಯಲ್ಲಿ ನೋಡಿ ತಪ್ಪಿದ್ದವರಿಗೆ ಬಯ್ಯುವುದೇ ಅವರಿಗೆ ಸಿಗುವ ಅವಕಾಶ, ಅವರು ಮಾಡುವ ದೊಡ್ಡ ದೇಶ ಹಿತ. 
ಇನ್ನು ದಿನಗೂಲಿ ಮಾಡುವವರು.. ಅವರಿಗೆ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಸಂಪಾದಿಸಿದರೆ ರಾತ್ರಿ ಊಟ, ನಿದ್ದೆ. ಇಷ್ಟೆ ಅವರ ಬದುಕು. ಧರಣಿ, ಕ್ರಾಂತಿಗೆಲ್ಲಿ ಸಮಯ?
ಮಕ್ಕಳು, ಮುದುಕರು ಸಮಾಜದಲ್ಲಿ ಗೌರವದಿಂದ, ನೆರೆಹೊರೆಯವರೊಂದಿಗೆ ಸ್ಪಂದಿಸಿ ಬದುಕುತ್ತಿರುವ ಜನಗಳು. ಅವರು ಧರಣಿ ಕ್ರಾಂತಿಯಿಂದ ದೂರವೇ. 
ಆದರೂ ನಮ್ಮ ದೇಶದಲ್ಲಿ ರೋಡ್ ಬಂದ್ ಗಳು, ಬ್ಲ್ಯಾಕ್ ಡೇಗಳು, ದೊಂಬಿ, ಗಲಾಟೆ ದಿನಾಲೂ ನಡೆಯುತ್ತಲೇ ಇರುತ್ತದೆ, ಇದನ್ನು ಮಾಡುವವರು ನನ್ನ, ನಿನ್ನಂಥ ಸಾಮಾನ್ಯರೇ. ಕೆಲವೊಬ್ಬರಿಗೆ ನಿಜವಾಗಲೂ ಮಾಡುವ ಪರಿಸ್ಥಿತಿ ಇರುತ್ತದೆ. ಇಲ್ಲ್ಲವೇ ಏನೂ ಕೆಲಸವಿಲ್ಲದ ಸಾಮಾನ್ಯರಿಗೆ ದುಡ್ಡು ಕೊಟ್ಟು ದುಡ್ಡು ಕೊಟ್ಟು ತಲೆ ತಿರುಗಿಸಿ ಆಟವಾಡಿಸುವ ದೊಡ್ಡ ತಲೆಗಳು ಹಿಂದಿರುತ್ತವೆ.
ಹಾಗಾಗಿ ಸರೋವರಾ ನೀನು ನಾನು ಕ್ರಾಂತಿ ಪ್ರಾರಂಭಿಸಲು ಯೋಗ್ಯ ಜನ. ಈ ದೇಶಕ್ಕೆ ಒಂದು ದೊಡ್ಡ ಕ್ರಾಂತಿಯ ಅವಶ್ಯಕತೆಯಿದೆ. ಡೆಮಾಕ್ರಸಿಯನ್ನು ಕಿತ್ತೆಸೆದು ಕಮ್ಯುನಿಸಂ ತಂದು ಈ ಜನರನ್ನು ತುಳಿದರೆ ಮಾತ್ರ ಎಲ್ಲರಿಗೂ ತಿಳಿಯುತ್ತದೆ ಸ್ವಾತಂತ್ರ್ಯ ಎಂದರೆ ಏನು ಎಂದು...." ಬಡಬಡಿಸುತ್ತಿದ್ದ ಶಾಸ್ತ್ರಿ.
ಅದು ಶಾಸ್ತ್ರಿಯ ಸ್ವಭಾವವೋ? ಅಥವಾ ದೇಶದ ಮೇಲಿನ ಅಪ್ಪಟ ಪ್ರೀತಿ ಆತನನ್ನು ಅಷ್ಟು ಬಡಿದೆಬ್ಬಿಸುತ್ತದೋ ತಿಳಿಯದಾಗಿದ್ದಳು ಸರೋವರಾ. ಆದರೆ ತಿಂಗಳಲ್ಲಿ ಎರಡು ಬಾರಿಯಾದರೂ ಶಾಸ್ತ್ರಿಯ ಆ ಮುಖ ನೋಡುತ್ತಿದ್ದಳವಳು. ಕಾಲೇಜಿನ ದಿನಗಳಿಂದಲೂ ಶಾಸ್ತ್ರಿ ಅವಳಿಗೆ ಪರಿಚಯ. ಶಾಸ್ತ್ರಿಯನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆ ಅದು ತಾನೇ ಎಂದುಕೊಳ್ಳುತ್ತಾಳೆ ಅವಳು. ತುಂಬ ಮಾತನಾಡುವ, ನಗಿಸುತ್ತಲೇ ಇರುವ ಶಾಸ್ತ್ರಿ ಮನಸ್ಸಿನಲ್ಲಿ ಯಾವಾಗಲೂ ಒಂಟಿಯಾಗಿಯೇ ಇರುತ್ತಾನೆ ಎಂದು ಗೊತ್ತು ಅವಳಿಗೆ. ಒಂಟಿತನವನ್ನು ಸರೋವರಾಳಿಗಿಂತ ಚೆನ್ನಾಗಿ ಯಾರು ಅರ್ಥ ಮಾಡಿಕೊಳ್ಳಬಲ್ಲರು!? ಅವಳು ಬೆಳೆದಿದ್ದೇ ಅನಾಥಾಶ್ರಮದಲ್ಲಿ. ಆದರೆ ಅವಳಿಗೆ ಅನಾಥ ಪ್ರಜ್ಞೆ ಯಾವತ್ತೂ ಕಾಡಿದ್ದಿಲ್ಲ. ಯಾಕೆಂದರೆ ಕುಟುಂಬ ಸುಖವೆಂದರೆ ಏನು ಎಂದು ಆಕೆ ಕಂಡವಳಲ್ಲ. ಆದರವಳಿಗೆ ಒಂಟಿತನವೆಂದರೇನು ಎಂಬುದು ಗೊತ್ತು. 
ಹೀಗೆರಡು ಒಂಟಿ ಹೃದಯಗಳನ್ನು ಹತ್ತಿರವಾಗಿಸಿತ್ತು ಸಮಯ. ಅವರಿಬ್ಬರ ನಡುವೆ ಅದ್ಯಾವ ಸಂಬಂಧ ಬೆಸುಗೆಯು ಇಲ್ಲ. ಒಮ್ಮೆ ಸರೋವರಾ ಬಾಯ್ಬಿಟ್ಟು ಕೇಳಿದ್ದಳು ಕೂಡಾ. "ಶಾಸ್ತ್ರಿ ನಾವಿಷ್ಟು ಮಾತನಾಡುತ್ತೇವೆ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತೇವೆ, ಕಣ್ಣೀರಿಗೆ ಕಣ್ಣೀರು, ನಲಿವಿಗೆ ನಲಿವು, ಈ ಸಂಬಂಧಕ್ಕೊಂದು ಹೆಸರು ಬೇಡವಾ??" ಅಂದು ಶಾಸ್ತ್ರಿ ಹೇಳಿದ ಸಾಲೊಂದು ಇಂದಿಗೂ ನೆನಪಿದೆ ಅವಳಿಗೆ.
"ಕಣ್ಣೀರಾಗದ ದುಃಖದ ನಡುವಿನ ಸಂತೋಷಕ್ಕೆ ಹೆಸರೊಂದು ಬೇಕಾ ಹುಚ್ಚು ಹುಡುಗಿ??" 
ಆತ ಹೇಳಿದ ಮಾತು ಅರ್ಥವಾದಲ್ಲಿಂದ ಅವಳು ಮತ್ತೆ ಆ ಸಂಬಂಧವನ್ನು ಪ್ರಶ್ನಿಸಿಕೊಂಡಿರಲಿಲ್ಲ. ಇಂದು ಮತ್ತೆ ಮತ್ತೆ ಶಾಸ್ತ್ರಿ ಕ್ರಾಂತಿ, ಹೋರಾಟದಲ್ಲಿ ಕಳೆದುಹೋಗುತ್ತಿದ್ದ. ಸರೋವರಾ ಹಟ ಬಿಡದ ತ್ರಿವಿಕ್ರಮನಂತೆ ವಿಷಯ ಬದಲಿಸಲು "ಶಾಸ್ತ್ರಿ! ದುಡ್ಡಿರುವವರು, ದುಡಿಯುತ್ತಿರುವವರಿಗೆ ಈ ಕ್ರಾಂತಿ, ಧರಣಿ ಬೇಡ ಎಂದಾದ ಮೇಲೆ ನೀನೇಕೆ ಕ್ರಾಂತಿ ಮಾಡಬೇಕು? ದುಡ್ಡೇ ಮಾಡು. ಅದಾಗದು ನಿನ್ನ ಕೈಯಲ್ಲಿ." ಎಂದು ಹಂಗಿಸಿದಳು.
"ಮೋಸ ಮಾಡಿ ಬದುಕಲು ನನಗೆ ಇಷ್ಟವಿಲ್ಲ" ಎಂದ ಗಂಭೀರವಾಗಿ. 
"ನಿನಗೆ ಮೋಸ ಮಾಡಿ ದುಡ್ಡು ಸಂಪಾದಿಸು ಎಂದವರಾರು?? ಒಳ್ಳೆಯ ದಾರಿಯಿಂದಲೇ ಹಣ ಸಂಪಾದಿಸು, ಅದೇ ತಾನೇ ನಿಜವಾದ ಬುದ್ಧಿವಂತಿಕೆ." ಅಂತೂ ಕ್ರಾಂತಿಯಿಂದ ಹೊರತಂದೆನಲ್ಲ ಎಂದುಕೊಂಡು ಆತನನ್ನೇ ನೋಡುತ್ತ ಕುಳಿತುಕೊಂಡಿದ್ದಳು ಸರೋವರಾ. 
ನಕ್ಕ ಶಾಸ್ತ್ರಿ!! "ಮೋಸ ಮಾಡದೆ ದುಡಿದರೆ ನನ್ನ ನಿನ್ನ ಜೀವನ ಇದಕ್ಕೂ ಚೆನ್ನಾಗೇನೂಇರಲು ಸಾಧ್ಯವಿಲ್ಲ ಸರೂ.. ಮಿಡಲ್ ಕ್ಲಾಸ್ ಜೀವನಕ್ಕಾಗಿ ಕೆಲಸವೇಕೆ ಮಾಡಬೇಕು? ಇದ್ದರೆ ಪೂರ್ತಿ ಮೇಲಿರಬೇಕು. ಇಲ್ಲದಿದ್ದರೆ ಹಾದಿಯ ಬದಿಯಲ್ಲಿ ಬಿದ್ದಿರಬೇಕು. ಪೂರ್ತಿಯಾಗಿ ನನ್ನ ಬಳಿ ಏನೂ ಇಲ್ಲ, ಆಲೋಚನೆಗಳೇ ಇಲ್ಲ. ಕೊಳಚೆ ನೀರಿಗೂ, ಬಿಸ್ಲೇರಿ ನೀರಿಗೂ ವ್ಯತ್ಯಾಸ ತಿಳಿಯುವುದು ಯಾವಾಗ ಗೊತ್ತಾ?? Compare ಮಾಡಿದಾಗ. Compare ಮಾಡದೆ ಬದುಕಿದೆವೆಂದುಕೋ ಸರೂ, ಆಗ ಎಲ್ಲವೂ ಒಂದೇ. 
ಹಾಗಿಲ್ಲ, ಒಂದು ವೇಳೆ ನಿನಗೆ ಅವೆರಡರ ನಡುವಿನ ವ್ಯತ್ಯಾಸ ಗೊತ್ತಿದೆ ಎಂದಾದರೆ ಮತ್ತೆಂದೂ ಕೊಳಚೆ ನೀರಿನ ಬಗ್ಗೆ ಯೋಚಿಸಲೂಬಾರದು. ಬಿಸ್ಲೇರಿ ನೀರಿನಲ್ಲೆ ಸ್ನಾನ ಕೂಡಾ. ಆ Level ಬದುಕು ಬದುಕಬೇಕು. ಕನಸುಗಳು ಹುಟ್ಟಿದರೆ ಅದು ತೀರಲೇಬೇಕು. 
ಬೆಳಿಗ್ಗೆ ಇಂಡಿಯಾದಲ್ಲಿ Coffee ಕುಡಿದು, ಮಧ್ಯಾನ್ನ ಲಂಡನ್ ನಲ್ಲಿ ಊಟ ಮಾಡಿ, ಸಂಜೆ ರೋಮ್ ನ ಬೀದಿಗಳಲ್ಲಿ ಶಾಪಿಂಗ್ ಮಾಡಿ, ರಾತ್ರಿ ಸ್ವಿಡ್ಜರ್ಲೆಂಡಿನ ತಂಪು ರಾತ್ರಿಯಲ್ಲಿ ಬೆಚ್ಚನೆಯ ಹಾಸಿಗೆಯಲ್ಲಿ ಬೆರೆಯುವಂತಿರಬೇಕು.
ಅದಕ್ಕೇ ಮೋಸ ಮಾಡಬೇಕು." ಶಾಸ್ತ್ರಿಯ ಮಾತಿನ ಭರಾಟೆ ಶಾಂತವಾಯಿತು.
ಸರೋವರಾ ಜಾಣೆ! ತರ್ಕಬದ್ಧವಾಗಿ ಯೋಚಿಸಬಲ್ಲಳು. ಎದುರಿಗಿರುವವನ ಕಣ್ಣಲ್ಲಿ ಕಣ್ಣಿಟ್ಟು ತಣ್ಣನೆಯ ಸ್ವರದಲ್ಲಿ ಪ್ರಶ್ನಿಸಬಲ್ಲಳು ಎದುರಿನವನ ಬುದ್ಧಿಗೆ ಸವಾಲೆಸೆಯುವಂತೆ.
"ಹಾಗಾದರೆ ಕಾರಿನಲ್ಲಿ ಓಡಾಡುವವರು, ವಿಮಾನದಲ್ಲಿ ಹಾರುವವರು ಎಲ್ಲರೂ ಮೋಸಗಾರರು ಎಂಬುದು ನಿನ್ನ ಅಭಿಪ್ರಾಯವಾ!?
ಕಂಪನಿಗಳನ್ನು ನಡೆಸುತ್ತಿರುವವರು, ಉದ್ಯಮಗಳನ್ನು ನಡೆಸುವವರು ಮೋಸ ಮಾಡುತ್ತಿರುವವರಾ!?"
"ಹೌದು" ಧೃಢತೆಯಿತ್ತು ಧ್ವನಿಯಲ್ಲಿ.
ಅವನಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ ಅವಳು. ಶಾಸ್ತ್ರಿ ಅಲ್ಲಿಗೇ ನಿಲ್ಲಿಸಲಿಲ್ಲ "ನಿನಗೇನು ಗೊತ್ತು ಸರೂ? ಮಲ್ಟಿ ನ್ಯಾಷನಲ್ ಕಂಪನಿಗಳು, ಉದ್ಯಮಗಳು ಮೇಲೇರಲು ಕಾರಣ ಅದರ ಮುಖ್ಯಸ್ಥರಲ್ಲ. ಹೊತ್ತು ಗೊತ್ತಿಲ್ಲದೇ, ಕೊಡುವ ಸ್ವಲ್ಪ ದುಡ್ಡಿಗೆ ನಿದ್ರೆಗೆಟ್ಟು ದುಡಿಯುವ ಮಿಡಲ್ ಕ್ಲಾಸ್ ಜನರು. ಅವರಿಂದ ತೆಗೆದುಕೊಳ್ಳುವ ಕೆಲಸಕ್ಕೂ, ಕೊಡುವ ದುಡ್ಡಿಗೂ ಸಂಬಂಧವೇ ಇರುವುದಿಲ್ಲ ಸರೂ. ಮೋಸವಲ್ಲವಾ ಅದು?? ಅದಕ್ಕಿಂತ ದೊಡ್ಡ ಮೋಸ ಏನು ಗೊತ್ತಾ? ನಮ್ಮ ಜೀವನದ ಉತ್ತಮ ಸಮಯ ಯಾವುದು ಗೊತ್ತಾ? 20 ರಿಂದ 40, ಹರೆಯ. ಮೆದುಳು ಮತ್ತು ದೇಹ ಎರಡು ಸ್ಪರ್ಧೆಗಿಳಿದಂತೆ ಕೆಲಸ ಮಾಡುವ ದಿನಗಳವು. ಇಂತಹ ವಯಸ್ಸನ್ನು ಇನ್ಯಾರೋ ದುಡ್ಡು ಕೊಡುತ್ತಾರೆ ಎಂದ ಕೂಡಲೇ ಜನರು ಮಾರಿಕೊಂಡು ಬಿಡುತ್ತಾರೆ. 
ಒಬ್ಬ ಮಿಡಲ್ ಕ್ಲಾಸ್ ಮನುಷ್ಯನಿಗೆ ಇಪ್ಪತ್ತು ಸಾವಿರ ಎಂದರೆ ದೊಡ್ಡ ವಿಷಯವೇ. ಆದರೆ ಆತ ತನ್ನ ಯೌವ್ವನದಲ್ಲಿ ಬೇರೆಯವರಿಗಾಗಿ ದುಡಿಯುವ ಬದಲು ತನಗಾಗಿ ದುಡಿದರೆ ಬೇರೆಯವರಿಗೆ ಕೆಲಸ ಕೊಡುವಷ್ಟು ಬೆಳೆದುಬಿಡಬಹುದು ಸರೂ. ಮೋಸವಲ್ಲವಾ ಇದು?? ಜನ ತಿಳಿಯದೇ ಮೋಸ ಹೋಗುತ್ತಿದ್ದಾರೆ. ನನಗೆ ತಿಳಿಯಿತು ಅದಕ್ಕೆ ಬಿಟ್ಟುಬಂದುಬಿಟ್ಟೆ" ನಿರಾಳವಾದ ಒಮ್ಮೆ.
ಕೆಲಸಕ್ಕೆ ಸೇರಿ ಮೂರು ದಿನವಾಗಿತ್ತು ಅಷ್ಟೆ, ಬಿಟ್ಟು ಬಂದಿದ್ದ. ಹೀಗೆ ಕೆಲಸ ಬಿಟ್ಟು ಬಂದೆ ಎಂದು ಅವಳಿಗೆ ತಿಳಿಸಲು ಕರೆದಿದ್ದ. ಅವನಿಗೂ ಕೂಡ ಅವಳೊಬ್ಬಳೆ ಸ್ನೇಹಿತೆ. ಮನೆಯಿಂದ ದೂರಾಗಿದ್ದಾನಾ? ಮನೆಯೇ ಇರಲಿಲ್ಲವೋ? ಆತ ಯಾವತ್ತೂ ಹೇಳಿರಲಿಲ್ಲ, ಅವಳೂ ಕೇಳಿರಲಿಲ್ಲ. 
"ಅದು ಮೋಸವಾ!?" ಅರ್ಥವಾಗಿರಲಿಲ್ಲ ಅವಳಿಗೆ.
"ಇನ್ನೂ ಸೂಕ್ಷ್ಮವನ್ನು ಹೇಳುತ್ತೇನೆ ಕೇಳು, ಈಗ ನಾನು ಸೇರಿದ ಕಂಪನಿಯನ್ನೇ ತಗೋ...."
"ಯಾರು ಕೊಡುತ್ತಾರೆ?" ಹುಸಿ ನಕ್ಕಳು.
"ಹಾಗಲ್ಲ, ನಾನು ಸೇರಿದ ಕಂಪನಿಯಲ್ಲಿ ಒಂದು ಸ್ಕೀಮ್ ಇದೆ. ಪ್ರತಿ ವರ್ಷ ಒಬ್ಬ ಕೆಲಸಗಾರನ ಪ್ಯಾಕೇಜ್ 325000 ಎಂದು ಸೇರಿಸಿಕೊಳ್ಳುವಾಗಲೇ ಹೇಳಿರುತ್ತಾರೆ. ನಂತರ ಪ್ರತಿ ತಿಂಗಳು ಆತನ ಕೈಗೆ ಬರುವ ಸಂಬಳ 20400. ಅಂದರೆ ವರ್ಷಕ್ಕೆ 244800. ಉಳಿದ ಹಣ ಏನಾಯಿತು? 
ಪ್ರತೀ ಕಂಪನಿಯಲ್ಲೂ ಕೆಲಸ ಮಾಡುವವರಿಗೆ ಬೋನಸ್ ಕೊಡಬೇಕೆಂದು ಸರ್ಕಾರದ ನಿಯಮವಿದೆ. ಯಾವುದೇ ಕಂಪನಿ ತನ್ನ ಷೇರ್ ಮಾರಿಕೊಂಡಿದ್ದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂಪನಿ ಗಳಿಸಿದ ಲಾಭವನ್ನು ಜನರೆದುರು ಇಡಬೇಕು. ಲಾಭ ಹೆಚ್ಚಿದಂತೆಲ್ಲ ಷೇರಿನ ಬೆಲೆ ಹೆಚ್ಚುತ್ತದೆ. 
ಹೀಗೆ ತೋರಿಸಿದ ಲಾಭಕ್ಕೆ ಅವರು ಸರ್ಕಾರಕ್ಕೆ ಸುಂಕ ಕಟ್ಟಬೇಕಲ್ಲವಾ?"
ಹೌದೆಂಬಂತೆ ತಲೆಯಾಡಿಸಿದಳು ಸರೋವರಾ.
"ಅವರು ತಲೆ ಉಪಯೋಗಿಸುವುದು ಇಲ್ಲೇ. ಬಂದ ಲಾಭದಲ್ಲಿ ತಮ್ಮ ಎಂಪ್ಲಾಯಿಗಳಿಗೆ ಬೋನಸ್ ಕೊಡುತ್ತೇವೆ ಎಂದು ತೋರಿಸುತ್ತಾರೆ. ಇದರಿಂದ ಬಹು ಪ್ರಮಾಣದ ಟ್ಯಾಕ್ಸ್ ಕಡಿಮೆಯಾಗುತ್ತದೆ. ಆದರೆ ಈ ಬೋನಸ್ ಎಂಬುದನ್ನು 325000 ಪ್ಯಾಕೇಜ್ ಹಣದಲ್ಲೇ ಹಿಡಿದಿಟ್ಟಿರುತ್ತಾರೆ. ಅದರ ಜೊತೆ ಮತ್ತೆ ಪರ್ಫಾರ್ಮೆನ್ಸ್ ಎಂದು ಹೇಳಿ ಕೆಲಸಗಾರರಿಗೆ ಗ್ರೇಡ್ ಕೊಟ್ಟು ಅವರ ಹಣದಲ್ಲಿಯೇ ಕಡಿತಗೊಳಿಸುತ್ತಾರೆ. 
ಮೋಸವಲ್ಲವಾ!? ಅವನ ದುಡ್ಡನ್ನು ಅವನೂ ಕೇಳುವ ಸ್ವಾತಂತ್ರ ಇಲ್ಲದಂತೆ ಮಾಡಿಬಿಡುತ್ತಾರೆ."
ಹೌದು ಎನ್ನಬೇಕೋ, ಇಲ್ಲ ಎನ್ನಬೇಕೋ ಎಂಬ ಸಂದಿಗ್ಧದಲ್ಲಿದ್ದಳು ಸರೋವರಾ. 
ಅಷ್ಟರಲ್ಲಿಯೇ ಶಾಸ್ತ್ರಿ "ಇನ್ನೂ ಹೇಳುತ್ತೇನೆ ಕೇಳು, ಪ್ರತೀ ಕಂಪನಿಯು ಪ್ರಾವಿಡೆಂಟ್ ಫಂಡ್ ಎಂಬ ಸ್ಕೀಮ್ ಹೊಂದಿರುತ್ತದೆ. ಕಂಪನಿಯನ್ನು ಬಿಡುವ ಸಮಯದಲ್ಲಿ ಅಂದರೆ ಜೀವನದ ಕೊನೆಯ ಅವಧಿಗೆ ಒಂದು ಮೊತ್ತದ ಹಣ ಕೈ ಸೇರುವ ಒಂದು ಪ್ಲಾನ್ ಅದು. ಒಬ್ಬ ಕೆಲಸಗಾರ ಒಂದುಸಾವಿರದಷ್ಟನ್ನು ಕಂಪನಿಗೆ ಬಿಟ್ಟರೆ, ಕಂಪನಿಯು ಅದಕ್ಕೆ ಇನ್ನೊಂದು ಸಾವಿರ ಸೇರಿಸಿ ಇಡುತ್ತ ಬರುತ್ತಾರೆ. ನಿವೃತ್ತಿಯ ವೇಳೆಯಲ್ಲಿ ಆ ಹಣ ಅವನ ಕೈ ಸೇರುತ್ತದೆ."
ಅಯ್ಯೋ, ಪಾಪಾತ್ಮ! ಇದರಲ್ಲಿ ಮೋಸವೆಲ್ಲಿ ಬಂತಯ್ಯಾ?? ಕೊನೆಗಾಲದಲ್ಲಿ ಒಳ್ಳೆಯದೇ ಆಗುತ್ತದೆ ತಾನೇ ಅದರಿಂದ.." ಎಂದಳು.
"ಅದೇ ನನಗೂ, ನಿನಗೂ ಇರುವ ವ್ಯತ್ಯಾಸ ಸರೂ."
"ಯಾವುದೋ?" ಅವನ ಮುಖ ನೋಡಿದಳು. ಅವಳ ಕಣ್ಣುಗಳಲ್ಲಿ ತುಂಟತನ ಕಂಡಿತು. ಅದನ್ನು ಗಮನಿಸಿದ ಆತ ಅವಳ ಕುತ್ತಿಗೆಯಿಂದ ಕೆಳಗೆ ದೃಷ್ಟಿ ಹರಿಸಿ ಕಣ್ಣಿನಲ್ಲೇ ನಗುತ್ತ "ನಾನು ತುಂಬ ಸೀರಿಯಸ್ ಆಗಿ ಮಾತನಾಡುತ್ತಿದ್ದೇನೆ" ಎಂದ. ಆತ ಇನ್ನೂ ಕೆಳಗೆ ದೃಷ್ಟಿ ಹರಿಸಿಬಿಡಬಹುದೆಂಬ ಯೋಚನೆಯಿಂದಲೇ ತಬ್ಬಿಬ್ಬಾದ ಅವಳು ಮುಂದುವರೆಸು ಎಂದಳು.
ಕಡೆದ ಕಲಾಕೃತಿಯಂತಿದ್ದಳು ಅವಳು. ಕಣ್ಣಲ್ಲಿ ಕಣ್ಣು ಸೇರಿದರೆ ಕೆಳಗೆ ದೃಷ್ಟಿ ಹರಿಸಲಾರದಷ್ಟು ಆಕರ್ಷಣೆ ಅವಳ ಕಂಗಳಲ್ಲಿತ್ತು.
"ಸರಿ, ನಾ ಎಲ್ಲಿದ್ದೆ??" ಎಂದು ಕಣ್ಣು ಪಕ್ಕ ಹೊರಳಿಸಿದ. ಅದು ನಿನಗೂ ಗೊತ್ತು ಎಂದು ಸಿಡಿದಳವಳು. ಅವಳ ಸಿಡಿಮಿಡಿಗೆ ತಲೆ ಕೆಡಿಸಿಕೊಳ್ಳದೆ ಸರಿ, ಸರಿ, ಮುಟ್ಟಿಕೊಂಡೆ ಎಂದ. ಮತ್ತೆ ಏನನ್ನು? ಎಂದು ಕೇಳಿದರೆ ಆಸಾಮಿ ಏನು ಹೇಳಿಯಾನೋ ಎಂದು ಸುಮ್ಮನೆ ಇದ್ದಳು.
"ಈಗ ನೋಡು...." ತುಂಟತನ ಮಾಡುತ್ತಲೇ ಪ್ರಾರಂಭಿಸಿದ ಆತ. ಮನಸ್ಸಿನಲ್ಲಿ ನಗುತ್ತಲೇ ಕೇಳಲನುವಾದಳು. 
"ನನಗೀಗ ಇಪ್ಪತ್ತನಾಲ್ಕು. ನನ್ನ ನಿವೃತ್ತಿಯೆಂದರೆ 58. ಅಲ್ಲಿಗೆ ಇನ್ನೂ 34 ವರ್ಷಗಳು. ನಾನು ಪ್ರತೀ ತಿಂಗಳು ಕಂಪನಿಗೆ ಒಂದುಸಾವಿರ ಕಟ್ಟಿದೆ ಎಂದುಕೋ ಕಂಪನಿಯ ಕಡೆಯಿಂದ ಒಂದುಸಾವಿರ. ಮೂವತ್ನಾಲ್ಕು ವರ್ಷಕ್ಕೆ 408 ತಿಂಗಳುಗಳು. ತಿಂಗಳಿಗೆ ಎರಡು ಸಾವಿರವೆಂದರೆ 816000 ಖಾತೆಯಲ್ಲಿರುತ್ತದೆ. ಅದಕ್ಕೆ ಬಡ್ಡಿ ಹಿಡಿದರೂ ಹೆಚ್ಚೆಂದರೆ ಹನ್ನೆರಡರಿಂದ ಹದಿನೈದು ಲಕ್ಷ."
ಮಧ್ಯದಲ್ಲಿಯೇ "ಇದರಲ್ಲಿ ಮೋಸವೆಲ್ಲಿ?" ಎಂದು ಶುರುವಿಟ್ಟುಕೊಂಡಳು. 
"ಅಯ್ಯೋ ಮಂಕೇ! ಮೂವತ್ತೈದು ವರ್ಷಗಳ ನಂತರ ನೀನು ಮೊದಲು ಕಟ್ಟಿದ ಸಾವಿರ ರೂಪಾಯಿಯ ಬೆಲೆ ಎಷ್ಟಿರಬಹುದು ಯೋಚಿಸು" ಎಂದ ಶಾಸ್ತ್ರಿ.
ಅರ್ಥವಾಗಲಿಲ್ಲ ಅವಳಿಗೆ.
"ನಾನು ಹುಟ್ಟಿದಾಗ ಅಂದರೆ ಇಪ್ಪತ್ತೈದು ವರ್ಷಗಳ ಮೊದಲ ನೂರು ರೂಪಾಯಿ ಈಗಿನ ಸಾವಿರ ಸಾವಿರ ರೂಪಾಯಿಗೆ ಸಮವಾಗಿತ್ತು. ಬಸ್ಸು, ಹಾಲಿನ ದರದಿಂದ ದಿನ ಉಪಯೋಗಿ ಎಲ್ಲ ವಸ್ತುಗಳ ಬೆಲೆ ಈಗ ಐದರಿಂದ ಆರು ಪಟ್ಟಾಗಿದೆ. 
ಅಂದರೆ ಇಂದಿನಿಂದ 34 ವರ್ಷಗಳ ನಂತರದ 15 ಲಕ್ಷ /10= 1.5 ಲಕ್ಷ ಇರುವುದು. ಉಳಿದವುಗಳ ಬೆಲೆ ಐದು ಪಟ್ಟು ಜಾಸ್ತಿ, ಅಂದರೆ ಅಲ್ಲಿಗೆ 150000/5=30000. ದುಡಿದ ದಿನವೇ ಕಟ್ಟಿದ್ದರಿಂದ ಪ್ರತೀ ತಿಂಗಳು ಕಟ್ಟಿದ್ದು ಒಂದು ಸಾವಿರವೇ. ಕಟ್ಟಿದ ಹಣ 480000 ಆದರೆ ಕೊನೆಯಲ್ಲಿ ಸಿಕ್ಕಿದ್ದು 30000 ಅಷ್ಟೆ." 
ಅವಳ ಮುಖದಲ್ಲಿ ಬೆವರಿನ ಹನಿಗಳು ಸಾಲಾಗಿ ನಿಂತಿದ್ದವು. 
"ಲೈಫ್ ಇನ್ಸುರೆನ್ಸ್ ಪಾಲಿಸಿಗಳು, ಬ್ಯಾಂಕ್ ಗಳು ಅನುಸರಿಸುವುದು ಇದೇ ನೀತಿಯನ್ನು. ಎಲ್ಲ ಲಾಂಗ್ ಟರ್ಮ್ ಗಳ ಹರಿಯುವಿಕೆಯೂ ಇಷ್ಟೇ. ಆದದ್ದರಿಂದ ಇಂದು ದುಡಿದಿದ್ದನ್ನು ಇಂದೇ ತಿನ್ನಬೇಕು. ಅಂದರೆ ಮಾತ್ರ ಮೋಸ ಹೋಗದಿರಲು ಸಾಧ್ಯ. "
ಆತನ ಲೆಕ್ಕಾಚಾರಕ್ಕೆ ಅವಳು ವಿರೋಧ ಹೇಳಲು ಸಾಧ್ಯವಿರಲಿಲ್ಲ. ಅವಳ ಎದುರಿನಲ್ಲೇ ಸಾಕ್ಷಿಯಿತ್ತು. ಅವಳು ಹುಟ್ಟುವಾಗಿನ ದುಡ್ಡಿನ ಮೌಲ್ಯಕ್ಕು, ಈಗಿನ ಮೊಉಲ್ಯಕ್ಕೂಅಜಗಜಾಂತರ ವ್ಯತ್ಯಾಸವಿತ್ತು. 
ಆತ "ಮೋಸವಲ್ಲವಾ!?" ಎನ್ನುತ್ತಾ ನಕ್ಕು, ಮತ್ತೆ" ಹೀಗೆ ಮೋಸ ಮಾಡೆನ್ನುತ್ತೀಯಾ? ಹೀಗೆ ಬದುಕುವುದಾದರೆ ಎರಡು ದಿನಗಳಲ್ಲಿ ನಿನಗೆ ಲಕ್ಷವನ್ನು ಸಂಪಾದಿಸಿಕೊಡುತ್ತೇನೆ" ಎಂದ.
ಇವನೆದುರು ತಾನು ಸೋತೆ ಎಂಬ ಅಹಂ ಕಾಡುವ ಮುನ್ನವೇ ಆ ಮಾತು ಬಂದಿತ್ತು.
ಸಿಕ್ಕಿ ಬಿದ್ದ ಈತ ಎಂದುಕೊಂಡು " ಬರೀ ಮಾತಿನಲ್ಲಿ ಹೇಳುವುದಲ್ಲ... ಮಾಡಿ ತೋರಿಸು ನೋಡೋಣ. ಆದರೆ ಒಂದು ಷರತ್ತು, ನೀನು ಮೋಸ ಮಾಡಬಾರದು. ಎಲ್ಲರಂತೆ ಬಿಸಿನೆಸ್ ಮಾಡಬೇಕು" ಎಂದಳು. 
"ಮೋಸಕ್ಕೂ , ಬಿಸಿನೆಸ್ ಗೂ ವ್ಯತ್ಯಾಸವೆನಿಲ್ಲ" ಎಂದ ಶಾಸ್ತ್ರಿ.
"ಯಾಕಿಲ್ಲ? ಮೋಸ ಎಂಬುದು ತಿಳಿದರೆ ಪೊಲೀಸರು ಹಿಡಿದೊಯ್ಯುತ್ತಾರೆ. ಬಿಸಿನೆಸ್ ನಲ್ಲಿ ಅದಿಲ್ಲ" ಗೆಲ್ಲುವ ಹಟ ಅವಳಿಗೆ ಅವನೆದುರು. 
ಆತ ಒಂದು ನಿಮಿಷ ಯೋಚಿಸಿ, "ಕೇವಲ ನಿನಗೆ ಇದು ಸಾಧ್ಯ ಎಂದು ತೋರಿಸಲು ಮಾಡುತ್ತಿದ್ದೇನೆ. ಇಂದು ಸೋಮವಾರ ಮುಗಿಯಿತು. ಬುಧವಾರ ಸಂಜೆಗೆ ನಿನ್ನ ಕೈಲಿ ಒಂದು ಲಕ್ಷ ಇಡುತ್ತೇನೆ" ಎಂದ.
"ಸೋತರೆ??" ಎಂದಳವಳು. "ಇನ್ಯಾವತ್ತೂ ಕ್ರಾಂತಿಯ ಬಗ್ಗೆ ನಿನ್ನೆದುರು ಮಾತನಾಡಲಾರೆ, ಇಲ್ಲವೇ ನಿನಗೆ ಮುಖ ತೋರಿಸದೆಯೇ ಬದುಕಿ ಬಿಡುತ್ತೇನೇನೋ!!" ಎಂದ.
ಬೇಡ, ಬೇಡ ಎಂದುಕೊಂಡಳು ಮನಸ್ಸಿನಲ್ಲಿಯೇ. 
ಆತ ಸುಮ್ಮನಿರುವವನಲ್ಲ. "ಗೆದ್ದರೆ??" ಎಂದ.
"ನನ್ನ ಜೀವನದಲ್ಲಿ ಯಾರಿಗೂ ನೀಡದಿರುವುದನ್ನು ನಿನಗೆ ಕೊಡುತ್ತೇನೆ." ಎಂದಳವಳು.
ಮೆಲ್ಲನೆ ಸೀಟಿ ಹೊಡೆದ ಆತ. ಜೇಬು ಸವರಿಕೊಂಡರೆ ಒಂದು ರೂಪಾಯಿ ಇತ್ತು ಅಷ್ಟೆ. ಬ್ಯಾಂಕ್ ಖಾತೆ ಅವನ ಬಳಿಯಿರಲಿಲ್ಲ. 
ಆತ ಆಕೆಯ ಕಡೆ ತಿರುಗಿ ಅವಳ ಕುತ್ತಿಗೆಯಲ್ಲಿದ್ದ ಬಂಗಾರದ ಚೈನಿನ ಎಳೆಯ ಕಡೆ ನೋಡಿ "ನಿನ್ನ ಕತ್ತಿನಲ್ಲಿರುವ ಸರವನ್ನು ಕೊಡು" ಎಂದ.
ಅದನ್ನು ತೆಗೆದು ಅವನ ಕೈಲಿಡುತ್ತ "ಅಡವಿಟ್ಟರೆ ಕೇವಲ ಮೂವತ್ತು ಸಾವಿರ ಬರುತ್ತದಷ್ಟೆ" ಎಂದು ನಕ್ಕಳು. 
"ಇದರ ಇಂದಿನ ಬೆಲೆ 28400. ನನಗೆ ಸಿಗುವುದು ಕೇವಲ 22000 ಅಷ್ಟೆ. ಯಾಕೆಂದರೆ ಇದನ್ನು ತೆಗೆದುಕೊಳ್ಳುವವರು ಕೂಡ ಬಿಸಿನೆಸ್ ಮಾಡುವವರೇ. ಆದರೆ ನಾನು ನಿನ್ನ ಜೊತೆ ಹಾಗೆ ಮಾಡಲಾರೆ. ಬುಧವಾರ ಸಂಜೆ ನಿನ್ನ ಕೈಲಿ ಒಂದು ಲಕ್ಷದ ಇಪ್ಪತ್ತೆಂಟು ಸಾವಿರದ ನಾಲ್ಕು ನೂರು ಇಡುತ್ತೇನೆ." ಎಂದ.
ಅದು ಅಸಾಧ್ಯ ಎಂದುಕೊಂಡು "ಸರಿ ನೋಡೋಣ ಕತ್ತಲಾಯಿತು ನಡೆ" ಎನ್ನುತ್ತಾ ಎದ್ದಳು. 
ಆಗಷ್ಟೆ ಹುಣ್ಣಿಮೆಯ ಚಂದ್ರ ಉದಯಿಸುತ್ತಿದ್ದ. ಇಬ್ಬರ ಮುಖದಲ್ಲೂ ಪ್ರಶಾಂತತೆ ಎದ್ದು ಕಾಣುತ್ತಿತ್ತು.
ಶಾಸ್ತ್ರಿಯ ಕಣ್ಣುಗಳಲ್ಲಿ ಛಲ ಎದ್ದು ತೋರುತ್ತಿತ್ತು. ಅವನ ಮೆದುಳು ಸಮುದ್ರದ ಅಲೆಗಳಿಗಿಂತಲೂ ಜೋರಾಗಿ ಸದ್ದು ಮಾಡುತ್ತಾ ಅವನಂತರಂಗವನ್ನು ಬಡಿಯುತ್ತಿತ್ತು.
ಕವಲು ದಾರಿಯು ಇಬ್ಬರನ್ನೂ ಬೇರಾಗಿಸಿತು. 

ಖತರ್ನಾಕ್ ಕಾದಂಬರಿ ಅಧ್ಯಾಯ 5

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                           ಅಧ್ಯಾಯ 5


ಅನ್ವೇಷಣಾ,
ಅನ್ವೇಷಣೆ ಎಂದರೆ ಏನು ಗೊತ್ತಾ ಹುಡುಗಿ? ಹಿಮಾಚ್ಛಾದಿತ ಪರ್ವತಗಳು ಮುಗಿಲಿನತ್ತ ಮೈ ಚಾಚಿ, ಮಂಜು ಕವಿದು, ಬಿಳುಪನ್ನು ಹೊರಸೂಸುವ ಮಂದ್ರ ಶಿಖರಗಳನ್ನು ಶರದ್ ಋತುವಿನ ಹುಣ್ಣಿಮೆಯ ರಾತ್ರಿಯಲ್ಲಿ ನೀನೆಂದಾದರೂ ಕಂಡಿದ್ದೀಯಾ? ಹಿಮಾಲಯವೆಂದರೆ ಹಾಗೆ.. ಸಹಸ್ರ ಶಿಖರಗಳು.. ಸಹಸ್ರ ಶಿಖರಗಳ ಮಡುವಿನಿಂದ ವಯ್ಯಾರವಾಗಿ ಹರಿಯುವ ಸಹಸ್ರ ನದಿಗಳು. ಪ್ರತಿಯೊಂದೂ ಶಿಖರವನ್ನು ಬಳಸಿ ಹರಿಯುವಾಗ ಗಂಗೆಯ ಮೆರಗು, ಯಮುನೆಯ ಮಿನುಗು, ಮೂಲ ಹುಡುಕಿ ಹೊರಟರೆ ಯಾವ ದಾರಿ, ಯಾವ ತಿರುವು.. ಅನ್ವೇಷಣೆ ಹುಡುಗಿ.
ಹುಣ್ಣಿಮೆಯ ಹಸನ್ಮುಖ ಚಂದ್ರ ಮೇಲೇರಿ ಬಂದಾಗ ಸ್ವಚ್ಛತೆಯ ಸೆರಗಾದ ನೀರು ಹೇಗೆ ಹೊಳೆಯುತ್ತದೆ ಗೊತ್ತಾ..!?
ನಾನು ನೋಡಿದ್ದೇನೆ ಹುಡುಗಿ ಅದರ ವೈಭವವನ್ನು. ಅದೆಂತಹ ಚಳಿ ಅಲ್ಲಿ!? ಮೈ ಕೊರೆಯುತ್ತದೆ. ಎಂತಹ ತಪಸ್ವಿಯ ಬೆನ್ನಿನಲ್ಲಿ ಕೂಡಾ ನಡುಕ ಹುಟ್ಟಿಸುವ ಮಾಯಾವಿ ನಗ್ನ ಸತ್ಯವದು. 
ಅನ್ವೇಷಣೆ ಎನ್ನುವುದು ಒಂದು ಹುಚ್ಚು, ಹುಡುಗಿ. ಹಾಗೊಂದು ಹುಚ್ಚು ಹತ್ತಿಸಿಕೊಂಡ ನಾನು ಹಗಲು, ರಾತ್ರಿಯೆನ್ನದೆ ಹಿಮಾಲಯದ ಪುಟ್ಟ ಪುಟ್ಟ ದಾರಿಗಳಲ್ಲಿ ಅಲೆಯುತ್ತಾ, ದೊಡ್ಡ, ದೊಡ್ಡ ಏರುಗಳನ್ನು ಬಳಸಿ ನಡೆದಾಗ... ಏನು ಸಿಕ್ಕಿತ್ತು..!? ಅಥವಾ ಸಿಗುವುದಿತ್ತಾ? ಎಂದರೆ ಉತ್ತರ ಸಿಗುವುದಿಲ್ಲ ಗೆಳತಿ.
ಆದರೆ ಆ ಹುಚ್ಚು ಒಮ್ಮೆ ಹಿಡಿಯಿತೆಂದರೆ ಮುಗಿಯಿತು. ಮರಳುಗಾಡಿನ ಮರೀಚಿಕೆಗೂ, ಹಿಮಾಲಯದಲ್ಲಿ ಮೈದುಂಬಿ ಹರಿಯುವ ನದಿಗಳಿಗೂ, ಬಿಳುಪನ್ನೆ ಹೊದ್ದು ನಿಲ್ಲುವ ನೀರ್ಗಲ್ಲುಗಳೆಂಬ ಮಾಯಾಮೃಗಕ್ಕೂ ಬಹಳ ಸಾಮ್ಯತೆಯಿದೆ. 
ಶರದ್ ಕಳೆದು ಹೇಮಂತ ಬಂತೆಂದರೆ ಆಗಸದಿಂದ ಬಿಳುಪಿನ ಮಲ್ಲಿಗೆಯ ಸರವೇ ಮಂಜಾಗಿ ಹಸಿರಿಲ್ಲದೆ ಬೋಳಾಗಿ ನಿಂತ ಕಣಿವೆಗಳನ್ನು, ಗಿರಿಗಳನ್ನೂ ಮುತ್ತಿಕ್ಕುವ ದೃಶ್ಯವಿದೆಯಲ್ಲ ಅದೆಂತಹ ಸಮ್ಮೋಹಿನಿ ಗೊತ್ತಾ? ಈ ಸುಂದರತೆಗೆ ಕೊನೆಯಿದೆಯಾ!? ಮುಂದೆ ಸಾಗಿದಂತೆಲ್ಲ ಸುಂದರತೆಯನ್ನು ತೆರೆದಿಡಲು ಹಿಮಾಲಯಕ್ಕೆ ಹಿಮಾಲಯವೇ ಸಾಟಿಯೇನೋ ಎಂದೆನ್ನಿಸಿಬಿಡುತ್ತದೆ ಗೆಳತಿ. ನನ್ನ ಭಾವನೆಗಳಿಗೆ ಭಾವುಕತೆಯ ಪಕ್ವ ಬಂದಿದ್ದು ಅಲ್ಲೇ ಏನೋ!! ಎಂತಹ ಕಲ್ಲೆದೆಯು ಕೂಡ ಕವಿಯಾಗಿ ಹೊರಬಂದು ಬಿಡುತ್ತವೇನೋ ಆ ಶ್ರೇಣಿಗಳಲ್ಲಿ.
ಶ್ವೇತ ತಪಸ್ವಿನಿಯ ಮಡಿಲಲ್ಲಿ ನಾನು ಮಗುವಾಗಿ ಓಡಾಡಿದ ದಿನಗಳು ಈಗ ಮತ್ತೆ ನೆನಪಾಗುತ್ತಿವೆ ಗೆಳತಿ. ಯಾಕೆ ಗೊತ್ತಾ..?? ನಿನ್ನ ಹೆಸರಿನಂತೆ, ನೀನು ಒಂದು "ಅನ್ವೇಷಣೆ" ನನಗೆ. ನಿನ್ನ ಮಡಿಲಿನಲ್ಲಿ ಮಗುವಾಗಿ ಬಿಡುತ್ತೇನೆ ನಾನು. ನೀ ಜೊತೆಗಿದ್ದರೆ ನಾ ಮತ್ತದೇ ಹಿಮದ ಮಡಿಲಿನ "ವಿಹಾರಿ".
ನಿನಗೂ, ಆ ಎತ್ತರದ ಹಿಮಾಲಯಕ್ಕೂ ಮತ್ತದೇ ಮರೀಚಿಕೆ ಮತ್ತು ಮಾಯಾಮೃಗದ ನಡುವಿನ ಸಾಮ್ಯತೆಯಿದೆ ಅನ್ವೇಷಣಾ. ಪ್ರೀತಿಯ ಅಮಲಿನಲ್ಲಿ ಬಡಬಡಿಸುತ್ತಿರುವೆನೆಂಬ ಭಾವ ಬೇಡ ನಿನಗೆ. 
ಕೊಲ್ಲುವ ತಂಪು ಗಾಳಿ.. ಗೊತ್ತಿಲ್ಲದೇ ಸುಡುವ ಹಿಮದ ತಣ್ಣನೆಯ ಬಿಳುಪು.. ಅದರ ಮೇಲೆ ಬೆನ್ನು ತಾಗಿಸಿ ಮಲಗಿದಾಗ ಅದೆಂತಹ ಭಾವ ಗೊತ್ತಾ..!! ನಾ ನಿನ್ನ ಹಣೆಗೆ ಮುತ್ತಿಡುವಾಗ ಅದೇ ಭಾವ ನನ್ನಲ್ಲಿ ಮೂಡುತ್ತದೆ. 
ಸ್ವಪ್ನ ತಾವರೆಯೊಂದು ಅರಳಿ, ಹೇಮಂತದ ಚಳಿಯನು ತಾಳದೆ ಸ್ವಲ್ಪ ನಲುಗಿ, ತನ್ನ ಮನಸ್ಸಿನ ಬೆಚ್ಚನೆಯ ಭಾವವನ್ನು ಹಂಚಿಕೊಳ್ಳಲು ಸಂಗಾತಿಯನ್ನು ಅರಸುತ್ತಿದ್ದಾಗ...
ಕಾಮನಬಿಲ್ಲೆಂಬ ಏಳು ಬಣ್ಣಗಳ ಚಿತ್ತಾರವೊಂದು ಮೂಡಿ ಮಳೆಯ ಚಳಿಗೂ, ಸೂರ್ಯ ಕಿರಣ ಬಿಸಿಗೂ ನಾ ಬೆಸುಗೆ ಎಂದು ಉತ್ತರಿಸಿದಾಗ...
ಸ್ವಪ್ನ ತಾವರೆಯೂ, ಕಾಮನಬಿಲ್ಲಿನ ಏಳು ಬಣ್ಣಗಳು ಸೇರಿದಾಗ ಮೂಡುವ ಒಂದು ಅದ್ಭುತ ಕಲಾಕೃತಿಯಿದೆಯಲ್ಲ ಅನ್ವೇಷಣಾ... ಅಂತಹ ಪರಿಪೂರ್ಣ ಕನಸು ನೀನು...
ಒಮ್ಮೊಮ್ಮೆ ಕಾವ್ಯವಾಗಿ ನಿಂತರೆ... ಮರುನಿಮಿಷ ಗಂಗೆಯಂತೆ ಕವನವಾಗಿ ಹರಿಯುವೆ... 
ತಪ್ಪಿ ಹೋಗುವೆಯೆನೋ ಎಂದುಕೊಂಡರೆ ಕಣ್ಣಾಲಿಗಳ ಭಾವವಾಗಿ ಬತ್ತುತ್ತಿಯಾ... ಸಂಗಾತಿ ಎಂದುಕೊಂಡರೆ ಆನಂದ ಭಾಷ್ಪವಾಗಿ ಹರಿಯುತ್ತೀಯಾ... 
ನೀನೊಂದು ಅನ್ವೇಷಣೆ ನನಗೆ. ಎಷ್ಟು ಹುಡುಕಿದರೂ ಮುಗಿಯದ ಮಹಾಶ್ವೇತೆ. ನಿನ್ನ ನೀಲ ಕಂಗಳಲ್ಲಿ ಸ್ವಚ್ಛವಾಗಿ ಹರಿಯುವ ಹಿಮ ನೀರಿನ ನಿರ್ಮಲತೆಯನ್ನು ಕಾಣುತ್ತೇನೆ ನಾನು... ನಿನ್ನ ಮೈ ಸ್ಪರ್ಶ ನನಗೆ ಬೇಸಿಗೆಯಲ್ಲಿ ಬೆಂದು ನಿಂತ ಭೂಮಿಗೆ ಮಳೆಯ ಹನಿ ತಾಗಿದಾಗ ಉಂಟಾಗುವ ಸಿಹಿಯ ಸುವಾಸನೆಯಂತೆ. ನೀನೊಂದು ಕಲಾಕೃತಿ ಹುಡುಗಿ.. ನಾನೆಂದೂ ಕಳೆದುಕೊಳ್ಳಲು ಇಷ್ಟಪಡದ ಕಲಾಕೃತಿ. ಭಾವ ಸಿಂಧುವಿನ ಸೆರಗಿನಲ್ಲಿ, ಸಹ್ಯ ಶ್ರೇಣಿಗಳ ಹಸಿರಿನ ಸೊಬಗಿನಲ್ಲಿ ಮನಸ್ಸು ಮೈ ತುಂಬಿ ನಲಿಯುವಾಗ ತೆಗೆದುಕೊಳ್ಳುವ, ತೆರೆದುಕೊಳ್ಳುವ ಉಸಿರಾಟದ ಶಕ್ತಿಯಿದೆಯಲ್ಲ ಹಾಗನ್ನಿಸಿಬಿಡುತ್ತೀಯಾ ನೀನು. ನಿನ್ನೊಂದಿಗೆ ಇರುವ ವರ್ಷಗಳು ನಿಮಿಷಗಳಾಗಿ ಕಳೆದು ಬಿಟ್ಟರೆ ಎಂಬುದೊಂದೇ ನನ್ನ ಭಯ. 
ಅನ್ವೇಷಣಾ..
"ನಾಲ್ಕೈದು ವರ್ಷ ಜೈಲಿಗೆ ಹೋಗಿ ಬಂದರೆ ತಪ್ಪಾ!?" ದಿಢೀರನೆ ಬಂದ ಅಸಂಬದ್ಧ ಪ್ರಶ್ನೆಗೆ ಏನು ಹೇಳಬೇಕು ಎಂದು ತಿಳಿಯದೆ ವಿಹಾರಿಯ ಕಣ್ಣುಗಳನ್ನೇ ನೋಡಿದಳು ಅನ್ವೇಷಣಾ!! ಕೈಯಲ್ಲಿರುವುದು ಆತ ಬರೆದ ಪ್ರೇಮಪತ್ರವೋ? ಅಥವಾ ತಪ್ತ ವ್ಯಾಮೋಹಿಯೊಬ್ಬ ಹಿಮಾಲಯದ ಬಗ್ಗೆ ಬರೆದ ಅಖಂಡ ಪ್ರಬಂಧವೋ ಎಂದು ತಿಳಿಯದೇ ಮೊದಲೇ ಗೊಂದಲದಲ್ಲಿದ್ದಳು. 
ವಿಹಾರಿ ಬರೆದ ಪ್ರತಿಯೊಂದೂ ವಾಕ್ಯದಲ್ಲೂ ಆತ ನನ್ನನ್ನು ಹಿಮಾಲಯಕ್ಕೆ ಹೋಲಿಸಿ ಬರೆದಿದ್ದಾನೆ ಎಂಬುದು ಅವಳಿಗೆ ಸ್ಪಷ್ಟವಿತ್ತು. ಆದರವಳು ಹಿಮಾಲಯವನ್ನು ಹೋಗಿ ನೋಡಿರದ ಕಾರಣ ಆತನ ವಿವರಣೆ ಅವಳಿಗೆ ವಿವರಣೆಯಾಗಿ ಉಳಿದಿತ್ತೇ ಹೊರತು ಭಾವಗಳಲ್ಲಿ ಅವಳು ಬಂಧಿಯಾಗಿರಲಿಲ್ಲ. ಅಷ್ಟರಲ್ಲಿ ಈ ಅಸಂಬಂದ್ಧ ಪ್ರಶ್ನೆ. ಉಗಿಸಿಕೊಳ್ಳಬೇಕಾಗುತ್ತದೆ ಎಂಬುದು ಮೊದಲು ಗೊತ್ತಿದ್ದವನಂತೆ ಅವಳನ್ನೇ ನೋಡುತ್ತಿದ್ದ ವಿಹಾರಿ. 
"ಯಾವ ಪುಣ್ಯದ ಕಾರ್ಯ ಮಾಡಿ ಒಳ ಸೇರುವೆ ಎಂಬುದರ ಮೇಲೆ ತಪ್ಪು ಸರಿ ನಿರ್ಧಾರವಾಗುತ್ತದೆ. " ಅನ್ಯಮನಸ್ಕಳಾಗಿ ನುಡಿದಳವಳು. 
ಮೂರು ಘಂಟೆಯ ಸುಡುಬಿಸಿಲು ಸುಡುತ್ತಿತ್ತು. ಭಾಗಶಃ ಪಾರ್ಕ್ ಖಾಲಿ ಹೊಡೆಯುತ್ತಿತ್ತು. ಮರದ ನೆರಳಿನಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತಿದ್ದರು ವಿಹಾರಿ ಅನ್ವೇಷಣಾ. 
ಯಾವಾಗಲೂ ಚೆಲ್ಲು ಚೆಲ್ಲು, ಮೌನ ಕಮ್ಮಿ, ಮಾತು ಜಾಸ್ತಿ ಹುಡುಗಿ ಅನ್ವೇಷಣಾ. ಇಂದೇಕೋ ಸುಮ್ಮನೆ ಇರುವುದನ್ನು ಕಂಡು ಅವಳನ್ನು ದಾರಿಗೆ ತರಲು ನಾನಾ ಚೇಷ್ಟೆ ಮಾಡಿ ಮುಗಿಸಿದ್ದ ವಿಹಾರಿ. ಹೆಣ್ಣನ್ನು ಅರಿತುಕೊಳ್ಳುವುದು ಕಷ್ಟ. ಕೆಲವೊಮ್ಮೆ ಅರಿತ ಹೆಣ್ಣೂ ಅರ್ಥವಾಗುವುದಿಲ್ಲ. ಸಂದಿಗ್ಧದಲ್ಲಿದ್ದ ವಿಹಾರಿ. 
ಅನ್ವೆಷಣಾಳ ಮನದಲ್ಲಿ ಬೇರೆಯೇ ಯೋಚನೆ ಓಡುತ್ತಿತ್ತು. ವಿಹಾರಿಯ ಕುಚೇಷ್ಟೆಯಾಗಲಿ, ಆತನ ಪ್ರೇಮ ಪ್ರಬಂಧವಾಗಲೀ, ಅವಳ ಮೇಲೆ ಪ್ರಭಾವ ಬೀರಲಿಲ್ಲ. 
office ನಲ್ಲಿ ನೆಪ ಹೇಳಿ ಬಂದು ಹೀಗೆ ಇವನ ಜೊತೆ ಕುಳಿತು ಪ್ರೇಮ ಪ್ರಣಯ ತನಗೆ ಬೇಕಿತ್ತಾ?? ವಿಹಾರಿಗಾಗಿ ನಾನು ಬಹು ದೊಡ್ಡ ತ್ಯಾಗ ಮಾಡುತ್ತೀದ್ದೀನಾ? ಹಿಂದೆ ಮುಂದೆ ಏನನ್ನೂ ಅರಿಯದೇ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತೀದ್ದೀನಾ? 
ಪ್ರೇಮದ ಮುಂದೆ ಕಾಣದೇ ನಿಂತ ಎಷ್ಟೋ ಜೀವನದ ಮೆಟ್ಟಿಲುಗಳು ಸತ್ಯವಾಗಿ, ಪ್ರಶ್ನೆಯಾಗಿ ಅವಳೆದುರು ನಿಂತು ಕಾಡುತ್ತಿತ್ತು. 
ಯೋಚನೆಗಳ ಸುಳಿಯೇ ಅಂತಹದು. ಈ ಕ್ಷಣವನ್ನು ಅಳಿಸಿ, ಭೂತವನ್ನು ನೆನಪಿಸಿ, ಭವಿಷ್ಯವನ್ನು ಚಿತ್ರಿಸಬಲ್ಲದು. 
ಯಾಕೆಂದು ಇವನನ್ನು ಪ್ರೀತಿಸಿದೆ!? ನೋಡಲು ಸುಂದರ ಒಪ್ಪಿಕೊಳ್ಳೋಣ.! ನಾನೂ ಇದ್ದೇನೆ ಅಲ್ಲವೇ!? ಎಷ್ಟು ಓದಿಕೊಂಡಿದ್ದಾನೆ? ಆತ ಹೇಳುವ ಪ್ರಕಾರ ಅವನೆಂದು ಶಾಲೆಯ ಮೆಟ್ಟಿಲು ಹತ್ತಿದವನಲ್ಲ. ಹಾಗೆಂದು ದಡ್ಡನಾ?? ಖಂಡಿತಾ ಅಲ್ಲ. ಜಗತ್ತನ್ನೇ ಮೂರ್ಖ ಮಾಡಬಲ್ಲಂತ ಕಿಲಾಡಿ. 
ಒಂದು ದಿನ ಪೇಪರ್ ಮಾರುವ ಹುಡುಗನಾಗಿ, ಇನ್ನೊಂದು ದಿನ ಯಾರನ್ನೋ ಎರಪೋರ್ಟ್ ನವರೆಗೆ ಡ್ರಾಪ್ ಮಾಡಿ ಬರುವ ಟ್ಯಾಕ್ಸಿ ಡ್ರೈವರ್ ಆಗಿ, ಒಂದು ದಿನ ಕಂಪ್ಯೂಟರ್ ರಿಪೇರಿ ಮಾಡುವ ಅಂಗಡಿಯಲ್ಲಿ ಟೆಕ್ನಿಷಿಯನ್ ಆಗಿ, ಮತ್ತೊಂದು ದಿನ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪ್ರೋಗ್ರಾಮ್ ಹೇಳಿಕೊಡುವ ಕೋಚರ್ ಆಗಿ ಬದುಕಬಲ್ಲ ಪರಿಪೂರ್ಣ ಮನುಷ್ಯ. 
ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಗಾದೆ ಇವನಿಗೆ ಮಾಡಿದ್ದೋ ಎಂಬಂತೆ ಬದುಕುತಿದ್ದ. ಕೇಳಿದರೆ ನಂಬಿಕೆಯಿದ್ದರೆ ಜೊತೆ ನಿಲ್ಲು ಎಂದು ಹೇಳಿ ಎದ್ದು ಹೊರಟು ಬಿಡುತ್ತಿದ್ದ. ನನ್ನ ಮೇಲೆ ಪ್ರೀತಿ ಇಲ್ಲವಾ ಎಂದುಕೊಂಡರೆ ಅದಕ್ಕೂ ತದ್ವಿರುದ್ಧ. ಯಾವತ್ತೂ ನನ್ನ ಆತ ನೋಯಿಸಿಲ್ಲ. ಏನಾದರೂ ಬೇಕೆಂದುಕೊಳ್ಳುವ ಮೊದಲೇ ತಂದುಕೊಡುತ್ತಾನೆ. ಮನಸ್ಸಿನಲ್ಲಿ ಇರುವುದನ್ನು ಓದಲು ಕಲಿತವನಂತೆ ಇದ್ದಾನೆ. 
ಇದಾಗಿಯೂ ಏನೋ ಕೊರತೆ ಕಾಣುತ್ತಿದೆಯಲ್ಲ, ಏನಿರಬಹುದು. 
ಯೋಚನೆ ಹಾಗೆ ಮುಂದೆ ಸಾಗಿಯೇ ಇತ್ತು. ಕಣ್ಣುಗಳು ಆತ ಬರೆದ ಪ್ರೇಮ ನಿವೇದನೆಯ ಸಾಲುಗಳನ್ನು ಅನುಸರಿಸುತ್ತಿತ್ತು. ಅದೇ ಸಮಯಕ್ಕೆ ವಿಹಾರಿ ಕೇಳಿದ್ದ "ನಾಲ್ಕೈದು ವರ್ಷ ಜೈಲಿಗೆ ಹೋಗಿ ಬಂದರೆ ತಪ್ಪಾ!?" 
ಮತ್ತದೇ ಚೇಷ್ಟೆ ಈತನದು ಎಂದುಕೊಂಡು ಅವಳು ಕೊಂಕು ನುಡಿದಳು. 
"ಯಾವ ಪುಣ್ಯ ಕಾರ್ಯ ಮಾಡಿ ಒಳ ಸೇರುವೆ ಎಂಬುದರ ಮೇಲೆ ತಪ್ಪು ಸರಿ ನಿರ್ಧಾರವಾಗುತ್ತದೆ."
ವಿಹರಿ ಮಾತಿಗಾರಂಭಿಸಿದ ಈಗ. ಆತನ ಮಾತೇ ಹಾಗೇ ನಿರರ್ಗಳ.. ಸ್ಪಷ್ಟ.ಸ್ಪಷ್ಟ..
"ಅನು, ನನಗೆ ಬರದ ಉದ್ಯೋಗವಿಲ್ಲ. ಮಾಡದ ಕೆಲಸಗಳಿಲ್ಲ ಎಂದು ನಿನಗೂ ಗೊತ್ತು. ನಿನ್ನ ಪುಟ್ಟ ಪುಟ್ಟ ಆಸೆಗಳನ್ನು, ಅವು ನನ್ನದೇ ಕನಸುಗಳೆಂಬಂತೆ ಕಾದುಕೊಂಡು ನಾನೆಲ್ಲವನ್ನು ಪೂರೈಸಬಲ್ಲೆ. ಬುದ್ಧಿಯಿದ್ದವನಿಗೆ ಬದುಕುವುದು ಕಷ್ಟವಲ್ಲ. ದುಡ್ಡು ಎಂಬುದು ಕೂಡ ಒಂದು ಸಮಸ್ಯೆಯಲ್ಲ. ಈ ಜಗತ್ತಿನಲ್ಲಿ ಎಲ್ಲರಿಗಿಂತ ಹೆಚ್ಚಾಗಿ ನಾನು ಇಷ್ತಪಡುತ್ತೇನೆ. ನೀನು ಬದುಕಲಾಗಿ ನಾನು ಸತ್ತು ನಿಲ್ಲುತ್ತೇನೆ ಎಂಬ ದೊಡ್ಡ ದೊಡ್ಡ ಬಂಡವಾಳವಿಲ್ಲದ ಮಾತುಗಳನ್ನು ಆಡಲಾರೆ. ಆದರೆ ಬದುಕಿರುವವರೆಗೆ ನಿನ್ನ ಕನಸುಗಳ ಜೊತೆ ನಿಲ್ಲಬಲ್ಲೆ ಎಂಬಂಥ ಮನುಷ್ಯ ನಾನು.
"ನಾನು ನಿನ್ನ ಮನಸ್ಸನ್ನು ಓದಬಲ್ಲೆ ಅನಾ, ನಿನಗೆ ನನ್ನ ಮೇಲೆ ದುರಾಭಿಪ್ರಾಯವಿಲ್ಲ, ಪ್ರೀತಿ ಇಲ್ಲದೆಯೂ ಇಲ್ಲ. ನಿನ್ನ ಕೊರಗೆಲ್ಲ ಈ ಸಮಾಜದಲ್ಲಿ ನನಗೆ ಒಳ್ಳೆಯ ಸ್ಥಾನಮಾನ ಇಲ್ಲ ಎಂಬುದಷ್ಟೆ. ತನ್ನನ್ನು, ತನ್ನವರನ್ನು ಈ ಸಮಾಜವು ಒಳ್ಳೆಯವರೆಂದು ಗುರುತಿಸಲಿ ಎಂಬ ಸಹಜ ವಾಂಛೆ ನಿನ್ನದು. 
ಅದು ತಪ್ಪಲ್ಲ ಅನ್ವೇಷಣಾ, ಆದರೆ ನಿನಗೊಂದು ಗೊತ್ತಾ? ಈ ಸಮಾಜದ ಸ್ಥಾನಮಾನವೆಲ್ಲಾ ನೀನು ಏನು ಕಲಿತೆ ಅಥವಾ ನೀನೇನು ಮಾಡುತ್ತಿರುವೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಅದು ಕೇವಲ ದುಡ್ಡಿನ ಮೇಲೆ ಅವಲಂಭಿತವಾಗಿದೆ. ಸಣ್ಣ ಪುಟ್ಟ ಸುಲಿಗೆ, ಕಳ್ಳತನ ಮಾಡುವವರು ಮಾತ್ರ ನಮ್ಮ ಸಮಾಜದಲ್ಲಿ ಕಳ್ಳರು, ಮರ್ಯಾದಿ ಬಿಟ್ಟವರು. 
ಅದೇ ಕೋಟಿಗಳಲ್ಲಿ ಲಂಚ ತಿನ್ನುವವರು, ದುಡ್ಡು ವಸೂಲಿ ಮಾಡುವವರು ರಾಜರಾಗಿ ಮೆರೆಯುತ್ತಿದ್ದಾರೆ. ಎಷ್ಟು ರಾಜಕಾರಣಿಗಳು ಸಾವಿರ ಸಾವಿರ ಕೋಟಿಗಳ ಕಳ್ಳದಂಧೆ ಮಾಡಿ ಅದರ ಮೇಲೆಯೇ ಕುಳಿತು ದೇಶ ನಡೆಸುತ್ತಿಲ್ಲ. ನಮ್ಮ ವ್ಯವಸ್ಥೆ ಅಂತವರಿಗೆ ಕೋಟಿಗಳನ್ನು ಕರ್ಚು ಮಾಡಿ ಸೆಕ್ಯುರಿಟಿ ಕೊಡುತ್ತಿಲ್ಲವಾ?
ಈ ದೇಶದಲ್ಲಿ ನನ್ನ ನಿನ್ನಂತ ಮಧ್ಯಮ ವರ್ಗದ ಜನರು ಮಾತ್ರ ಕೊಂಡಿದ್ದಕ್ಕೆ, ಉಂಡಿದ್ದಕ್ಕೆ, ಕೆಲಸ ಮಾಡಿದ್ದಕ್ಕೆ, ಬಂದ ದುಡ್ಡಿಗೆ, ಎಲ್ಲದಕ್ಕೂ ಕಂದಾಯ ತೆರುತ್ತಿದ್ದೇವೆ. 
ಆದರೆ ದೊಡ್ಡ ತಿಮಿಂಗಲಗಳು ತಮಗೆ ಬೇಕಾದ ಹಾಗೆ ತಿರುಗಿಕೊಂಡಿಲ್ಲವೆ? ಸೆಲೆಬ್ರಿಟಿಗಳಾಗಿ ತಿರುಗುವ ಎಷ್ಟು ಜನ ನಿಜವಾದ ದಾಖಲೆ ತೋರಿಸಿ ಕಂದಾಯ ಕಟ್ಟುತ್ತಾರೆ? ಇವೆಲ್ಲವೂ ಗೊತ್ತಿದ್ದೂ ಕೂಡ ಜನರು ಅವರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಾರಲ್ಲಾ ಮೂರ್ಖರಲ್ಲವಾ?? ನಮ್ಮ ವ್ಯವಸ್ಥೆಯೇ ಹಾಗಿದೆ ಅನಾ!! 
ಇಲ್ಲಿ ದೊಡ್ಡ ಕಳ್ಳರಿಗೆ ರಕ್ಷಣೆಯಿದೆ. ಆದ್ದರಿಂದಲೇ ನಾನು ಯೋಚಿಸಿಯಾಗಿದೆ." ಮಾತು ನಿಲ್ಲಿಸಿ ಆಕೆಯ ಮುಖ ನೋಡಿದ. 
ಆತ ಭಾವೋತ್ಕರ್ಷದಲ್ಲಿ ತೇಲುತ್ತಾ ಮಾತನಾಡುತ್ತಿದ್ದ. ಅವನ ಮಾತುಗಳು ನಿಜವೂ ಆಗಿದ್ದವು. ನಮ್ಮ ದೇಶದಲ್ಲಿ ದೊಡ್ಡ ತಿಮಿಂಗಲಗಳೆಲ್ಲ ಕಂದಾಯ ಕಟ್ಟಿದ್ದರೆ, ರಾಜಕಾರಣಿಗಳು ದುಡ್ಡು ತಿನ್ನದೇ ಕೆಲಸ ಮಾಡಿದ್ದರೆ ದೇಶ ಹೀಗಿರುತ್ತಿತ್ತಾ? ಸರಿ ಎನಿಸಿತು ಅವಳಿಗೆ.
ಇದಕ್ಕೆ ಆತ ಇಷ್ಟವಾಗುತ್ತಿದ್ದ ಆಕೆಗೆ. ತಾನು ತುಂಬ ದೊಡ್ಡದು ಎಂದುಕೊಂಡ ವಿಷಯವನ್ನು ಕಗ್ಗಂಟು ಬಿಚ್ಚುವಂತೆ ಬಿಚ್ಚಿ ಸರಳವಾಗಿಸುತ್ತಿದ್ದ. ಆತನ ಮಡಿಲಲ್ಲಿ ಮಲಗಿದರೆ ಅದೊಂದು ರೀತಿಯ Comfort. ತನ್ನ ಮೊದಲಿನ ಯೋಚನೆಗಳಿಗೆ ತನಗೇ ನಗು ಬಂದು ನಕ್ಕು ಬಿಟ್ಟಳು. 
"ಈ ಹುಡುಗಿಯರೇ ಹೀಗೇ... ನಗಿಸಬೇಕೆಂದು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು. ಈಗ ನಾನೇನೋ ಸೀರಿಯಸ್ ಆಗಿ ಮಾತನಾಡಿದರೆ ಇವಳಿಗೆ ನಗು ಬರುತ್ತದೆ." ಎಂದು ಅವಳ ಸೊಂಟದತ್ತ ಕೈ ಜರುಗಿಸಿದ. 
"ಹಸಿ ತೋ ಫಸೀ ಡೈಲಾಗ್ ನಾ ಕೂಡ ಕೇಳಿದ್ದೇನೆ. ನಕ್ಕೆನೆಂದು ಎಕ್ಸಟ್ರಾ ಉಪಯೋಗ ಮಾಡಿಕೊಳ್ಳಲು ನೋಡಬೇಡ" ಎನ್ನುತ್ತಾ ಆತನ ಕೈ ತಗೆದಳು ಅಲ್ಲಿಂದ. 
"ಆದರೂ ಹುಡುಗಿಯರ ಸೊಂಟದಲ್ಲಿ ಏನೋ ಇದೆ" ಎಂದ ಮತ್ತೊಂದು ಕಡೆ ಕೈ ಇಡುತ್ತಾ.. ಆಕೆಯ ಮುಖ ಮಧ್ಯಾನ್ಹದ ಬಿಸಿಲಿಗೂ, ಈತನ ರಸಿಕತೆಗೂ ಎಂಬಂತೆ ಕೊಂಚವೇ ಗುಲಾಬಿ ಬಣ್ಣಕ್ಕೆ ತಿರುಗಿತು. 
"ಯಾವಾಗ ನೋಡಿದರೂ ಈ ಹುಡುಗಿಯರು, ಹುಡುಗಿಯರಿಂದ ಎಂದು ಬಹುವಚನದಲ್ಲೇ ಮಾತನಾಡುತ್ತಿರುವೆಯಲ್ಲಾ?? ಎಷ್ಟು ಹುಡುಗಿಯರ ಜೊತೆ ಪ್ರಣಯ ಪ್ರಬಂಧವೋ!?" ಎಂದಳು.
ಮೊದಲು ಕೈ ಬೆರಳುಗಳನ್ನು ನೋಡಿದ. ನಂತರ ಅವಳ ಕೈ ಬೆರಳುಗಳನ್ನು ಕೈಲಿ ತೆಗೆದುಕೊಂಡ. "ಏನು ಮಾಡುತ್ತಿರುವೆ ಮಹಾನುಭಾವ' ಎಂದಳು. 
"ಲೆಕ್ಕ ಕೇಳಿದೆಯಲ್ಲಾ, ಏಣಿಸುತ್ತಿರುವೆ.. "
ಮುನಿಸಿಕೊಂಡು "ಹಾಗಾದರೆ ಅವರ ಬಳಿಯೇ ಹೋಗು ನಾನೇಕೆ? " ಎಂದಳು.
"ನಿನಗೆ Fixed Deposit, Current Account ಎರಡರ ವ್ಯತ್ಯಾಸ ಗೊತ್ತಿರುವಂತೆ ಕಾಣುವುದಿಲ್ಲ" ಎಂದ. 
"ಏನು?" ಎನ್ನುತ್ತಾ ಎದ್ದು ಕುಳಿತಳವಳು. "ಅದೇ ನಾನು ಜೈಲಿಗೆ ಹೋಗುವ ವಿಷಯ" ಮಾತು ಬದಲಾಯಿಸಿದ. ತಾನು ಹೇಳಿದ ಮಾತಿನ ಅರ್ಥ ಕಾಮರ್ಸ್ ಮಾಡಿದ ಅವಳಿಗೂ ತಿಳಿಯಲು ಇನ್ನೂ ನಾಲ್ಕು ದಿನ ಬೇಕೆಂದು ಗೊತ್ತವನಿಗೆ. 
" ಹಾ.. ಹಾ.. ಹೌದು ಏನು ಮಾಡಿ ಜೈಲಿಗೆ ಹೋಗಬೆಕೆಂದಿರುವೆ? ಅಷ್ಟು ಹುಡುಗಿಯರ ಜೊತೆ ಫ್ಲರ್ಟ್ ಮಾಡಿದರೆ ಎಂದಾದರೊಂದು ದಿನ ಜೈಲೇ ಗತಿ ನಿನಗೆ" ಎಂದಿನ ಲಯಕ್ಕೆ ಬಂದಿದ್ದಳು.
"ಹಾಗೇನಿಲ್ಲಾ, ನಾ ಜೈಲು ಪಾಲಾದರೆ ಅವರಿಗೆಲ್ಲ ರಾತ್ರಿ ಹಾಡು ಹೇಳಿ ಮಲಗಿಸುವವರಾರು?"
ಓಹೋ! ಹಾಡಷ್ಟೇ ಹೇಳುತ್ತಿರೋ!! ಡಾನ್ಸ್ ಕೂಡಾ ಮಾಡುತ್ತಿರೋ??" ಒಳಗಡೆಯೇ ಕುದಿಯುತ್ತಿತ್ತು ಅವಳ ರಕ್ತ. ತಾನು ಏನಾದರೂ ಹೇಳಿದರೆ ನೀನು ಪೊಸೆಸ್ಸಿವ್ ಆಗಬಹುದು, ನಾನು ನಿನ್ನ ಬಾಸ್ ನಿಂದ ಸ್ವಲ್ಪ ದುರನಿಂತು ಮಾತನಾಡು, ಸಭ್ಯನಲ್ಲ ಎಂದರೆ ನಿನಗ್ಯಾವಾಗಲೂ ಅನುಮಾನ ಎನ್ನುತ್ತೀಯಾ ಎಂದು ಹೇಳುವನೆಂದು ಬಂದ ಕೋಪವನ್ನು ತಡೆದುಕೊಂಡಿಡ್ಡಳು. . 
ಅವನಿಗದು ಗೊತ್ತು.. ಒಳಗಿಂದೊಳಗೆ ಜ್ವಾಲಾಮುಖಿಯಾಗಿರುವಳೆಂದು. ಆದರೂ ಮುಂದುವರೆಸಿದ. 
"ಇಂಥವೇ ಹಾಡುಗಳೆಂದೇನೂ ಇಲ್ಲ. ಅದು ಮೂಡ್ ಗಳ ಮೇಲೆ ಡಿಪೆಂಡ್. For example ಕೆಲವರಿಗೆ ಲಾಲಿ ಲಾಲಿ ಸುಕುಮಾರ ಹಾಡಿ ಮಲಗಿಸಿದರೆ, ಇನ್ನು ಕೆಲವರಿಗೆ ಹೃದಯವು ಬಯಸಿದೆ ನಿನ್ನನೇ.. ಎನ್ನಬೇಕಾಗುತ್ತದೆ. ಇಂತಹ ಹಾಡಿನಲ್ಲಿ ಉತ್ಸಾಹ ಇರುವುದಿಲ್ಲವಾದರೂ ನಾಳೆ ಕೂಡ ಇದೇ ಹಾಡು ಬೇಕೆನ್ನುವುದಿಲ್ಲ ಅವರು. 
ಕೆಲವೊಂದು ದಿನ ಅವರಾಗೇ ಬಾ ಬಾರೋ ರಸಿಕ.. ನೋಡೆನ್ನ ಈ ತಳುಕ.. ಈ ಬಳುಕ .. ಎನ್ನುತ್ತಾರೆ. ಇನ್ನು ಕೆಲವೊಮ್ಮೆ Until I Get Satisfaction.." ಆತ ಹೇಳುತ್ತಿದ್ದಂತೆಲ್ಲ ಅವಳ ತುಟಿಗಳು ಅದುರಲು ಪ್ರಾರಂಭಿಸಿದವು. 
ಸಿಟ್ಟಿನ ಕೊನೆಯ ಹಂತದಲ್ಲಿದ್ದಳವಳು. ಕಣ್ಣೀನಿಂದ ನೀರು ಧಾರೆ ಧಾರೆಯಾಗಿ ಪ್ರವಹಿಸತೊಡಗಿತು. ತನ್ನದೇ ಸ್ವಲ್ಪ ಜಾಸ್ತಿಯಾಯಿತೇನೋ ಎಂದುಕೊಂಡು "ಅನ್ವೇಷಣಾ ಸಾರಿ ಕಣೋ, ನನ್ನ ಬಂಗಾರ ಅಲ್ವಾ.. ಮುದ್ದು ಅಲ್ವಾ.. ನೀರೂ.. ನೀರೂ.. "ಎನ್ನುತ್ತಾ ಸಂತೈಸತೊಡಗಿದ. ಆತ ಅವಳಿಗೆ ಹೇಳದ ಹೆಸರುಗಳಿಲ್ಲ. 
"ನೀರಲ್ಲಾ.. ಕಣ್ಣೀರು.." ಎಂದಳು. ಎರಡು ಕಿವಿಗಳನ್ನು ಹಿಡಿದು ಎದ್ದು ನಿಂತು ಬಸ್ಕಿ ಹೊಡೆಯಲು ಆರಂಭಿಸಿದ. ಅಕ್ಕ ಪಕ್ಕ ನೋಡಿದಳವಳು. ಯಾರಾದರೂ ನೋಡಿದರೆ ಏನು ಗತಿ? ಈತನೋ, ಈತನ ಚೇಷ್ಟೇಯೋ? ಅಳುತ್ತಲೇ ನಕ್ಕಳು. ನಗುತ್ತಲೇ ಅಳುತ್ತಿದ್ದಳು. "ಸಾಕು.. ಸಾಕು ಬಾ.. ಇನ್ಯಾವತ್ತೂ ಇತರ ಮಾತನಾಡಬೇಡ" ಎಂದಳು.
"ಸರಿ.. ಸರಿ.. ಹಾಗಾದರೆ ನಿನಗೊಂದು ಮೊಬೈಲ್ ತೆಗೆದುಕೊಡುತ್ತೇನೆ.ನಿನಗೇ ಹಾಡು ಹೇಳುತ್ತೇನೆ ದಿನಾಲೂ.."
"ಏನೂ ಬೇಡ ನಾನೇ ತೆಗೆದುಕೊಳ್ಳುತ್ತೇನೆ.." ಎಂದಳು. 
"ಓ ಸ್ವಾಭಿಮಾನದ ನಲ್ಲೆ... ಸಾಕು ಸಂಯಮ ಬಲ್ಲೆ... "
ಈ ಹಾಡುಗಳನ್ನೆಲ್ಲ ಎಲ್ಲಿಂದ ಕದಿಯುತ್ತೀಯಾ??" ಎಂದಳು. 
ಮಾತನಾಡದೆ ಬಳಿ ಕುಳಿತ. " ಇನ್ನು ನನಗೆ ಹೊತ್ತಾಯಿತು. ನಾನು ಹೊರಡುತ್ತೇನೆ ಎಂದಳು. ಹೀಗೆ ತಪ್ಪಿಸಿಕೊಂಡು ಹೋಗುತ್ತಿರು.. ಆಮೇಲೆ ನಾನು ಜೈಲಿಗೆ ಹೋದ ಮೇಲೆ ಒಂಟಿ ಪಿಶಾಚಿಯಾಗುವೆ" ಎಂದ. 
"ನನಗೇನು ಗ್ರಹಚಾರ! ಒಂದು ಚಿಟಿಕೆ ಹೊಡೆದರೆ ನಿನ್ನಂತವರು ಕ್ಯೂ ನಿಲ್ಲುತ್ತಾರೆ" ಎಂದಳು.
"ನಿಲ್ಲುತ್ತಾರೆ.. ನಿಲ್ಲುತ್ತಾರೆ.. ಬೀದಿಯಲ್ಲಿ ನೀರು ಬಂದರೆ ಎಲ್ಲರೂ ಹಿಡಿದುಕೊಳ್ಳುವವರೇ..ಅದೇ ಬಾವಿ ತೊಡಿಸಿ ಪಂಪ್ ಹಾಕಿಕೊಳ್ಳಬೇಕೆಂದರೆ?? ಯಾರೂ ಇರುವುದಿಲ್ಲ. 
"ನಿನ್ನನ್ನು ಮುಂದಿನವಾರ ವಿಚಾರಿಸಿಕೊಳ್ಳುತ್ತೇನೆ. ಇಂದಿಗೆ ಬೈ ಕಣೋ ರಾಜ.." ಎನ್ನುತ್ತಾ ಹೊರಡಲನುವಾದಳು. ಆದರೂ ಸೊಂಟ, ಎನ್ನುತ್ತಾ ಅವಳ ಸೊಂಟ ಗಿಲ್ಲಿ, ಕಂಗಳ ಮೇಲೆ ಮುತ್ತಿಟ್ಟು, ನಡಿ ಅಲ್ಲಿಯವರೆಗೆ ನಾನೂ ಬರುತ್ತೇನೆ ಎನ್ನುತ್ತಾ ಅವಳ ಕೈಲಿ ಕೈ ಸೇರಿಸಿ ನಡೆಯತೊಡಗಿದ. ಅವನ ಅಭಯಹಸ್ತದಲ್ಲಿ ಮಾಡಿದ ಜಗಳ, ಹೊರಬಿದ್ದ ಕಣ್ಣೀರು, ಜೈಲಿನ ವಿಷಯ.. ಎಲ್ಲವೂ ಮರೆತು ಹೋಗಿತ್ತು ಆಕೆಗೆ. 
ವಿಹಾರಿಯ ತಲೆಯಲ್ಲಿ ಮಾತ್ರ ಜೈಲಿನ ವಿಷಯವೇ ಕೊರೆಯುತ್ತಲೇ ಇತ್ತು. ಹಗರಣ.. ಪ್ರಪಂಚದ ಅತ್ಯಂತ ದೊಡ್ಡ ಹಗರಣ.. ಎಂದುಕೊಂಡ. ನಸುನಗು ಮುಖದಲ್ಲಿ ಹಾದುಹೋಯಿತು. ಓರೆಗಣ್ಣಿನಿಂದ ಆತನನ್ನೇ ನೋಡುತ್ತ ತನ್ನ ಸೊಂಟ ತಾನೇ ನೆನೆದು ಅವಳೂ ಮುಗುಳ್ನಗುತ್ತಿದ್ದಳು. 
ಮತ್ತದೇ ಪ್ರಶ್ನೆ ಕೇಳಿದ ವಿಹಾರಿ "ಜೈಲು?" ಈ ಸಲ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಅನ್ವೇಷಣಾ. "ತಥಾಸ್ತು ದೇವತೆಗಳಿರುತ್ತಾರೆ. ಸುಮ್ಮನಿರೋ.." 
"ನಿನ್ನ ಬಿಟ್ಟಿರುವ ದಿನಗಳು ಸಾಕು ಇನ್ನು, ಯಾವುದಾದರೂ ಒಳ್ಳೆಯ ಕೆಲಸ ಹಿಡಿ, ಮದುವೆಯಾಗೋಣ. ಈ ಒಂಟಿತನ, ಈ ಕೆಲಸ ಎಲ್ಲ ಬೇಸರವಾಗಿದೆ ನನಗೆ. ನೀನು ಜೈಲು ಸೇರೋದು ಬೇಡ, ಕಾಡು ಪಾಲಾಗೋದು ಬೇಡ." ಎಂದಳು ಸಿಟ್ಟಿನಿಂದ. 
ವಿಹಾರಿ ಎರಡು ಬಾರಿ ತನ್ನ ಯೋಜನೆ ಹೇಳಬೇಕೆಂದಾಗಲೂ ವಿಷಯ ವಿಷಯಾಂತರವಾಗಿ ಹೋಗಿತ್ತು. 
ತನಗೆ ಬಂದಿರುವ ಯೋಚನೆಯನ್ನು ಆತ ಹೇಳಬೇಕೆಂದೇ ಬಂದಿದ್ದ. ತನ್ನ ಯೋಜನೆ ಸರಿಯಾಗಿ ನಡೆದರೆ ಏನೆಂದರೂ ಲಕ್ಷ-ಕೋಟಿಗಳ ಒಡೆಯನಾಗುತ್ತಾನೆ ಅವನು. ಸಿಕ್ಕಿಬಿದ್ದರೆ ಜೈಲು ಆಗಬಹುದೇನೋ ಅದನ್ನೇ ಅವಳಲ್ಲಿ ಆತ ಹೇಳಲು ಬಯಸಿದ್ದ. ಪರಿಸ್ಥಿತಿ ಅದಕ್ಕೆ ಅನುವು ಮಾಡಿಕೊಡಲಿಲ್ಲ. ಮತ್ತೆ ತಾನು ಆ ಸುದ್ಧಿ ಎತ್ತಿದರೆ ಕಣ್ಣೀರಾಗುತ್ತಾಳೆ ಎಂದು ಆತನೂ ಹಮ್ ಎಂದು ಸುಮ್ಮನಾದ. 
ಪಕ್ಕ ಪಕ್ಕವೇ ನಡೆಯುತ್ತಿದ್ದ ಆ ಎರಡು ಹೃದಯ, ಒಂದು ಭಾವ ಕವಲೊಡೆದು ತಮ್ಮ ತಮ್ಮ ರಸ್ತೆ ಸೇರಿದವು. 
ಇದೇ ತಮ್ಮ ಕೊನೆಯ ಭೇಟಿ ಎಂಬುದು ಒಂದು ಕ್ಷಣ ವಿಹಾರಿಗೆ ಅನ್ನಿಸಿದರೂ ಆತ ಅನ್ವೇಷಣಾಳನ್ನು ಬಿಟ್ಟಿರುತ್ತಿದ್ದಾನಾ??
ಇಲ್ಲಿ ಸಮಯವೇ ಪಾತ್ರಗಳ ಸೂತ್ರಧಾರ!! 

                                 ...............................ಮುಂದುವರೆಯುತ್ತದೆ..............................