Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 5

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                           ಅಧ್ಯಾಯ 5


ಅನ್ವೇಷಣಾ,
ಅನ್ವೇಷಣೆ ಎಂದರೆ ಏನು ಗೊತ್ತಾ ಹುಡುಗಿ? ಹಿಮಾಚ್ಛಾದಿತ ಪರ್ವತಗಳು ಮುಗಿಲಿನತ್ತ ಮೈ ಚಾಚಿ, ಮಂಜು ಕವಿದು, ಬಿಳುಪನ್ನು ಹೊರಸೂಸುವ ಮಂದ್ರ ಶಿಖರಗಳನ್ನು ಶರದ್ ಋತುವಿನ ಹುಣ್ಣಿಮೆಯ ರಾತ್ರಿಯಲ್ಲಿ ನೀನೆಂದಾದರೂ ಕಂಡಿದ್ದೀಯಾ? ಹಿಮಾಲಯವೆಂದರೆ ಹಾಗೆ.. ಸಹಸ್ರ ಶಿಖರಗಳು.. ಸಹಸ್ರ ಶಿಖರಗಳ ಮಡುವಿನಿಂದ ವಯ್ಯಾರವಾಗಿ ಹರಿಯುವ ಸಹಸ್ರ ನದಿಗಳು. ಪ್ರತಿಯೊಂದೂ ಶಿಖರವನ್ನು ಬಳಸಿ ಹರಿಯುವಾಗ ಗಂಗೆಯ ಮೆರಗು, ಯಮುನೆಯ ಮಿನುಗು, ಮೂಲ ಹುಡುಕಿ ಹೊರಟರೆ ಯಾವ ದಾರಿ, ಯಾವ ತಿರುವು.. ಅನ್ವೇಷಣೆ ಹುಡುಗಿ.
ಹುಣ್ಣಿಮೆಯ ಹಸನ್ಮುಖ ಚಂದ್ರ ಮೇಲೇರಿ ಬಂದಾಗ ಸ್ವಚ್ಛತೆಯ ಸೆರಗಾದ ನೀರು ಹೇಗೆ ಹೊಳೆಯುತ್ತದೆ ಗೊತ್ತಾ..!?
ನಾನು ನೋಡಿದ್ದೇನೆ ಹುಡುಗಿ ಅದರ ವೈಭವವನ್ನು. ಅದೆಂತಹ ಚಳಿ ಅಲ್ಲಿ!? ಮೈ ಕೊರೆಯುತ್ತದೆ. ಎಂತಹ ತಪಸ್ವಿಯ ಬೆನ್ನಿನಲ್ಲಿ ಕೂಡಾ ನಡುಕ ಹುಟ್ಟಿಸುವ ಮಾಯಾವಿ ನಗ್ನ ಸತ್ಯವದು. 
ಅನ್ವೇಷಣೆ ಎನ್ನುವುದು ಒಂದು ಹುಚ್ಚು, ಹುಡುಗಿ. ಹಾಗೊಂದು ಹುಚ್ಚು ಹತ್ತಿಸಿಕೊಂಡ ನಾನು ಹಗಲು, ರಾತ್ರಿಯೆನ್ನದೆ ಹಿಮಾಲಯದ ಪುಟ್ಟ ಪುಟ್ಟ ದಾರಿಗಳಲ್ಲಿ ಅಲೆಯುತ್ತಾ, ದೊಡ್ಡ, ದೊಡ್ಡ ಏರುಗಳನ್ನು ಬಳಸಿ ನಡೆದಾಗ... ಏನು ಸಿಕ್ಕಿತ್ತು..!? ಅಥವಾ ಸಿಗುವುದಿತ್ತಾ? ಎಂದರೆ ಉತ್ತರ ಸಿಗುವುದಿಲ್ಲ ಗೆಳತಿ.
ಆದರೆ ಆ ಹುಚ್ಚು ಒಮ್ಮೆ ಹಿಡಿಯಿತೆಂದರೆ ಮುಗಿಯಿತು. ಮರಳುಗಾಡಿನ ಮರೀಚಿಕೆಗೂ, ಹಿಮಾಲಯದಲ್ಲಿ ಮೈದುಂಬಿ ಹರಿಯುವ ನದಿಗಳಿಗೂ, ಬಿಳುಪನ್ನೆ ಹೊದ್ದು ನಿಲ್ಲುವ ನೀರ್ಗಲ್ಲುಗಳೆಂಬ ಮಾಯಾಮೃಗಕ್ಕೂ ಬಹಳ ಸಾಮ್ಯತೆಯಿದೆ. 
ಶರದ್ ಕಳೆದು ಹೇಮಂತ ಬಂತೆಂದರೆ ಆಗಸದಿಂದ ಬಿಳುಪಿನ ಮಲ್ಲಿಗೆಯ ಸರವೇ ಮಂಜಾಗಿ ಹಸಿರಿಲ್ಲದೆ ಬೋಳಾಗಿ ನಿಂತ ಕಣಿವೆಗಳನ್ನು, ಗಿರಿಗಳನ್ನೂ ಮುತ್ತಿಕ್ಕುವ ದೃಶ್ಯವಿದೆಯಲ್ಲ ಅದೆಂತಹ ಸಮ್ಮೋಹಿನಿ ಗೊತ್ತಾ? ಈ ಸುಂದರತೆಗೆ ಕೊನೆಯಿದೆಯಾ!? ಮುಂದೆ ಸಾಗಿದಂತೆಲ್ಲ ಸುಂದರತೆಯನ್ನು ತೆರೆದಿಡಲು ಹಿಮಾಲಯಕ್ಕೆ ಹಿಮಾಲಯವೇ ಸಾಟಿಯೇನೋ ಎಂದೆನ್ನಿಸಿಬಿಡುತ್ತದೆ ಗೆಳತಿ. ನನ್ನ ಭಾವನೆಗಳಿಗೆ ಭಾವುಕತೆಯ ಪಕ್ವ ಬಂದಿದ್ದು ಅಲ್ಲೇ ಏನೋ!! ಎಂತಹ ಕಲ್ಲೆದೆಯು ಕೂಡ ಕವಿಯಾಗಿ ಹೊರಬಂದು ಬಿಡುತ್ತವೇನೋ ಆ ಶ್ರೇಣಿಗಳಲ್ಲಿ.
ಶ್ವೇತ ತಪಸ್ವಿನಿಯ ಮಡಿಲಲ್ಲಿ ನಾನು ಮಗುವಾಗಿ ಓಡಾಡಿದ ದಿನಗಳು ಈಗ ಮತ್ತೆ ನೆನಪಾಗುತ್ತಿವೆ ಗೆಳತಿ. ಯಾಕೆ ಗೊತ್ತಾ..?? ನಿನ್ನ ಹೆಸರಿನಂತೆ, ನೀನು ಒಂದು "ಅನ್ವೇಷಣೆ" ನನಗೆ. ನಿನ್ನ ಮಡಿಲಿನಲ್ಲಿ ಮಗುವಾಗಿ ಬಿಡುತ್ತೇನೆ ನಾನು. ನೀ ಜೊತೆಗಿದ್ದರೆ ನಾ ಮತ್ತದೇ ಹಿಮದ ಮಡಿಲಿನ "ವಿಹಾರಿ".
ನಿನಗೂ, ಆ ಎತ್ತರದ ಹಿಮಾಲಯಕ್ಕೂ ಮತ್ತದೇ ಮರೀಚಿಕೆ ಮತ್ತು ಮಾಯಾಮೃಗದ ನಡುವಿನ ಸಾಮ್ಯತೆಯಿದೆ ಅನ್ವೇಷಣಾ. ಪ್ರೀತಿಯ ಅಮಲಿನಲ್ಲಿ ಬಡಬಡಿಸುತ್ತಿರುವೆನೆಂಬ ಭಾವ ಬೇಡ ನಿನಗೆ. 
ಕೊಲ್ಲುವ ತಂಪು ಗಾಳಿ.. ಗೊತ್ತಿಲ್ಲದೇ ಸುಡುವ ಹಿಮದ ತಣ್ಣನೆಯ ಬಿಳುಪು.. ಅದರ ಮೇಲೆ ಬೆನ್ನು ತಾಗಿಸಿ ಮಲಗಿದಾಗ ಅದೆಂತಹ ಭಾವ ಗೊತ್ತಾ..!! ನಾ ನಿನ್ನ ಹಣೆಗೆ ಮುತ್ತಿಡುವಾಗ ಅದೇ ಭಾವ ನನ್ನಲ್ಲಿ ಮೂಡುತ್ತದೆ. 
ಸ್ವಪ್ನ ತಾವರೆಯೊಂದು ಅರಳಿ, ಹೇಮಂತದ ಚಳಿಯನು ತಾಳದೆ ಸ್ವಲ್ಪ ನಲುಗಿ, ತನ್ನ ಮನಸ್ಸಿನ ಬೆಚ್ಚನೆಯ ಭಾವವನ್ನು ಹಂಚಿಕೊಳ್ಳಲು ಸಂಗಾತಿಯನ್ನು ಅರಸುತ್ತಿದ್ದಾಗ...
ಕಾಮನಬಿಲ್ಲೆಂಬ ಏಳು ಬಣ್ಣಗಳ ಚಿತ್ತಾರವೊಂದು ಮೂಡಿ ಮಳೆಯ ಚಳಿಗೂ, ಸೂರ್ಯ ಕಿರಣ ಬಿಸಿಗೂ ನಾ ಬೆಸುಗೆ ಎಂದು ಉತ್ತರಿಸಿದಾಗ...
ಸ್ವಪ್ನ ತಾವರೆಯೂ, ಕಾಮನಬಿಲ್ಲಿನ ಏಳು ಬಣ್ಣಗಳು ಸೇರಿದಾಗ ಮೂಡುವ ಒಂದು ಅದ್ಭುತ ಕಲಾಕೃತಿಯಿದೆಯಲ್ಲ ಅನ್ವೇಷಣಾ... ಅಂತಹ ಪರಿಪೂರ್ಣ ಕನಸು ನೀನು...
ಒಮ್ಮೊಮ್ಮೆ ಕಾವ್ಯವಾಗಿ ನಿಂತರೆ... ಮರುನಿಮಿಷ ಗಂಗೆಯಂತೆ ಕವನವಾಗಿ ಹರಿಯುವೆ... 
ತಪ್ಪಿ ಹೋಗುವೆಯೆನೋ ಎಂದುಕೊಂಡರೆ ಕಣ್ಣಾಲಿಗಳ ಭಾವವಾಗಿ ಬತ್ತುತ್ತಿಯಾ... ಸಂಗಾತಿ ಎಂದುಕೊಂಡರೆ ಆನಂದ ಭಾಷ್ಪವಾಗಿ ಹರಿಯುತ್ತೀಯಾ... 
ನೀನೊಂದು ಅನ್ವೇಷಣೆ ನನಗೆ. ಎಷ್ಟು ಹುಡುಕಿದರೂ ಮುಗಿಯದ ಮಹಾಶ್ವೇತೆ. ನಿನ್ನ ನೀಲ ಕಂಗಳಲ್ಲಿ ಸ್ವಚ್ಛವಾಗಿ ಹರಿಯುವ ಹಿಮ ನೀರಿನ ನಿರ್ಮಲತೆಯನ್ನು ಕಾಣುತ್ತೇನೆ ನಾನು... ನಿನ್ನ ಮೈ ಸ್ಪರ್ಶ ನನಗೆ ಬೇಸಿಗೆಯಲ್ಲಿ ಬೆಂದು ನಿಂತ ಭೂಮಿಗೆ ಮಳೆಯ ಹನಿ ತಾಗಿದಾಗ ಉಂಟಾಗುವ ಸಿಹಿಯ ಸುವಾಸನೆಯಂತೆ. ನೀನೊಂದು ಕಲಾಕೃತಿ ಹುಡುಗಿ.. ನಾನೆಂದೂ ಕಳೆದುಕೊಳ್ಳಲು ಇಷ್ಟಪಡದ ಕಲಾಕೃತಿ. ಭಾವ ಸಿಂಧುವಿನ ಸೆರಗಿನಲ್ಲಿ, ಸಹ್ಯ ಶ್ರೇಣಿಗಳ ಹಸಿರಿನ ಸೊಬಗಿನಲ್ಲಿ ಮನಸ್ಸು ಮೈ ತುಂಬಿ ನಲಿಯುವಾಗ ತೆಗೆದುಕೊಳ್ಳುವ, ತೆರೆದುಕೊಳ್ಳುವ ಉಸಿರಾಟದ ಶಕ್ತಿಯಿದೆಯಲ್ಲ ಹಾಗನ್ನಿಸಿಬಿಡುತ್ತೀಯಾ ನೀನು. ನಿನ್ನೊಂದಿಗೆ ಇರುವ ವರ್ಷಗಳು ನಿಮಿಷಗಳಾಗಿ ಕಳೆದು ಬಿಟ್ಟರೆ ಎಂಬುದೊಂದೇ ನನ್ನ ಭಯ. 
ಅನ್ವೇಷಣಾ..
"ನಾಲ್ಕೈದು ವರ್ಷ ಜೈಲಿಗೆ ಹೋಗಿ ಬಂದರೆ ತಪ್ಪಾ!?" ದಿಢೀರನೆ ಬಂದ ಅಸಂಬದ್ಧ ಪ್ರಶ್ನೆಗೆ ಏನು ಹೇಳಬೇಕು ಎಂದು ತಿಳಿಯದೆ ವಿಹಾರಿಯ ಕಣ್ಣುಗಳನ್ನೇ ನೋಡಿದಳು ಅನ್ವೇಷಣಾ!! ಕೈಯಲ್ಲಿರುವುದು ಆತ ಬರೆದ ಪ್ರೇಮಪತ್ರವೋ? ಅಥವಾ ತಪ್ತ ವ್ಯಾಮೋಹಿಯೊಬ್ಬ ಹಿಮಾಲಯದ ಬಗ್ಗೆ ಬರೆದ ಅಖಂಡ ಪ್ರಬಂಧವೋ ಎಂದು ತಿಳಿಯದೇ ಮೊದಲೇ ಗೊಂದಲದಲ್ಲಿದ್ದಳು. 
ವಿಹಾರಿ ಬರೆದ ಪ್ರತಿಯೊಂದೂ ವಾಕ್ಯದಲ್ಲೂ ಆತ ನನ್ನನ್ನು ಹಿಮಾಲಯಕ್ಕೆ ಹೋಲಿಸಿ ಬರೆದಿದ್ದಾನೆ ಎಂಬುದು ಅವಳಿಗೆ ಸ್ಪಷ್ಟವಿತ್ತು. ಆದರವಳು ಹಿಮಾಲಯವನ್ನು ಹೋಗಿ ನೋಡಿರದ ಕಾರಣ ಆತನ ವಿವರಣೆ ಅವಳಿಗೆ ವಿವರಣೆಯಾಗಿ ಉಳಿದಿತ್ತೇ ಹೊರತು ಭಾವಗಳಲ್ಲಿ ಅವಳು ಬಂಧಿಯಾಗಿರಲಿಲ್ಲ. ಅಷ್ಟರಲ್ಲಿ ಈ ಅಸಂಬಂದ್ಧ ಪ್ರಶ್ನೆ. ಉಗಿಸಿಕೊಳ್ಳಬೇಕಾಗುತ್ತದೆ ಎಂಬುದು ಮೊದಲು ಗೊತ್ತಿದ್ದವನಂತೆ ಅವಳನ್ನೇ ನೋಡುತ್ತಿದ್ದ ವಿಹಾರಿ. 
"ಯಾವ ಪುಣ್ಯದ ಕಾರ್ಯ ಮಾಡಿ ಒಳ ಸೇರುವೆ ಎಂಬುದರ ಮೇಲೆ ತಪ್ಪು ಸರಿ ನಿರ್ಧಾರವಾಗುತ್ತದೆ. " ಅನ್ಯಮನಸ್ಕಳಾಗಿ ನುಡಿದಳವಳು. 
ಮೂರು ಘಂಟೆಯ ಸುಡುಬಿಸಿಲು ಸುಡುತ್ತಿತ್ತು. ಭಾಗಶಃ ಪಾರ್ಕ್ ಖಾಲಿ ಹೊಡೆಯುತ್ತಿತ್ತು. ಮರದ ನೆರಳಿನಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತಿದ್ದರು ವಿಹಾರಿ ಅನ್ವೇಷಣಾ. 
ಯಾವಾಗಲೂ ಚೆಲ್ಲು ಚೆಲ್ಲು, ಮೌನ ಕಮ್ಮಿ, ಮಾತು ಜಾಸ್ತಿ ಹುಡುಗಿ ಅನ್ವೇಷಣಾ. ಇಂದೇಕೋ ಸುಮ್ಮನೆ ಇರುವುದನ್ನು ಕಂಡು ಅವಳನ್ನು ದಾರಿಗೆ ತರಲು ನಾನಾ ಚೇಷ್ಟೆ ಮಾಡಿ ಮುಗಿಸಿದ್ದ ವಿಹಾರಿ. ಹೆಣ್ಣನ್ನು ಅರಿತುಕೊಳ್ಳುವುದು ಕಷ್ಟ. ಕೆಲವೊಮ್ಮೆ ಅರಿತ ಹೆಣ್ಣೂ ಅರ್ಥವಾಗುವುದಿಲ್ಲ. ಸಂದಿಗ್ಧದಲ್ಲಿದ್ದ ವಿಹಾರಿ. 
ಅನ್ವೆಷಣಾಳ ಮನದಲ್ಲಿ ಬೇರೆಯೇ ಯೋಚನೆ ಓಡುತ್ತಿತ್ತು. ವಿಹಾರಿಯ ಕುಚೇಷ್ಟೆಯಾಗಲಿ, ಆತನ ಪ್ರೇಮ ಪ್ರಬಂಧವಾಗಲೀ, ಅವಳ ಮೇಲೆ ಪ್ರಭಾವ ಬೀರಲಿಲ್ಲ. 
office ನಲ್ಲಿ ನೆಪ ಹೇಳಿ ಬಂದು ಹೀಗೆ ಇವನ ಜೊತೆ ಕುಳಿತು ಪ್ರೇಮ ಪ್ರಣಯ ತನಗೆ ಬೇಕಿತ್ತಾ?? ವಿಹಾರಿಗಾಗಿ ನಾನು ಬಹು ದೊಡ್ಡ ತ್ಯಾಗ ಮಾಡುತ್ತೀದ್ದೀನಾ? ಹಿಂದೆ ಮುಂದೆ ಏನನ್ನೂ ಅರಿಯದೇ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತೀದ್ದೀನಾ? 
ಪ್ರೇಮದ ಮುಂದೆ ಕಾಣದೇ ನಿಂತ ಎಷ್ಟೋ ಜೀವನದ ಮೆಟ್ಟಿಲುಗಳು ಸತ್ಯವಾಗಿ, ಪ್ರಶ್ನೆಯಾಗಿ ಅವಳೆದುರು ನಿಂತು ಕಾಡುತ್ತಿತ್ತು. 
ಯೋಚನೆಗಳ ಸುಳಿಯೇ ಅಂತಹದು. ಈ ಕ್ಷಣವನ್ನು ಅಳಿಸಿ, ಭೂತವನ್ನು ನೆನಪಿಸಿ, ಭವಿಷ್ಯವನ್ನು ಚಿತ್ರಿಸಬಲ್ಲದು. 
ಯಾಕೆಂದು ಇವನನ್ನು ಪ್ರೀತಿಸಿದೆ!? ನೋಡಲು ಸುಂದರ ಒಪ್ಪಿಕೊಳ್ಳೋಣ.! ನಾನೂ ಇದ್ದೇನೆ ಅಲ್ಲವೇ!? ಎಷ್ಟು ಓದಿಕೊಂಡಿದ್ದಾನೆ? ಆತ ಹೇಳುವ ಪ್ರಕಾರ ಅವನೆಂದು ಶಾಲೆಯ ಮೆಟ್ಟಿಲು ಹತ್ತಿದವನಲ್ಲ. ಹಾಗೆಂದು ದಡ್ಡನಾ?? ಖಂಡಿತಾ ಅಲ್ಲ. ಜಗತ್ತನ್ನೇ ಮೂರ್ಖ ಮಾಡಬಲ್ಲಂತ ಕಿಲಾಡಿ. 
ಒಂದು ದಿನ ಪೇಪರ್ ಮಾರುವ ಹುಡುಗನಾಗಿ, ಇನ್ನೊಂದು ದಿನ ಯಾರನ್ನೋ ಎರಪೋರ್ಟ್ ನವರೆಗೆ ಡ್ರಾಪ್ ಮಾಡಿ ಬರುವ ಟ್ಯಾಕ್ಸಿ ಡ್ರೈವರ್ ಆಗಿ, ಒಂದು ದಿನ ಕಂಪ್ಯೂಟರ್ ರಿಪೇರಿ ಮಾಡುವ ಅಂಗಡಿಯಲ್ಲಿ ಟೆಕ್ನಿಷಿಯನ್ ಆಗಿ, ಮತ್ತೊಂದು ದಿನ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪ್ರೋಗ್ರಾಮ್ ಹೇಳಿಕೊಡುವ ಕೋಚರ್ ಆಗಿ ಬದುಕಬಲ್ಲ ಪರಿಪೂರ್ಣ ಮನುಷ್ಯ. 
ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಗಾದೆ ಇವನಿಗೆ ಮಾಡಿದ್ದೋ ಎಂಬಂತೆ ಬದುಕುತಿದ್ದ. ಕೇಳಿದರೆ ನಂಬಿಕೆಯಿದ್ದರೆ ಜೊತೆ ನಿಲ್ಲು ಎಂದು ಹೇಳಿ ಎದ್ದು ಹೊರಟು ಬಿಡುತ್ತಿದ್ದ. ನನ್ನ ಮೇಲೆ ಪ್ರೀತಿ ಇಲ್ಲವಾ ಎಂದುಕೊಂಡರೆ ಅದಕ್ಕೂ ತದ್ವಿರುದ್ಧ. ಯಾವತ್ತೂ ನನ್ನ ಆತ ನೋಯಿಸಿಲ್ಲ. ಏನಾದರೂ ಬೇಕೆಂದುಕೊಳ್ಳುವ ಮೊದಲೇ ತಂದುಕೊಡುತ್ತಾನೆ. ಮನಸ್ಸಿನಲ್ಲಿ ಇರುವುದನ್ನು ಓದಲು ಕಲಿತವನಂತೆ ಇದ್ದಾನೆ. 
ಇದಾಗಿಯೂ ಏನೋ ಕೊರತೆ ಕಾಣುತ್ತಿದೆಯಲ್ಲ, ಏನಿರಬಹುದು. 
ಯೋಚನೆ ಹಾಗೆ ಮುಂದೆ ಸಾಗಿಯೇ ಇತ್ತು. ಕಣ್ಣುಗಳು ಆತ ಬರೆದ ಪ್ರೇಮ ನಿವೇದನೆಯ ಸಾಲುಗಳನ್ನು ಅನುಸರಿಸುತ್ತಿತ್ತು. ಅದೇ ಸಮಯಕ್ಕೆ ವಿಹಾರಿ ಕೇಳಿದ್ದ "ನಾಲ್ಕೈದು ವರ್ಷ ಜೈಲಿಗೆ ಹೋಗಿ ಬಂದರೆ ತಪ್ಪಾ!?" 
ಮತ್ತದೇ ಚೇಷ್ಟೆ ಈತನದು ಎಂದುಕೊಂಡು ಅವಳು ಕೊಂಕು ನುಡಿದಳು. 
"ಯಾವ ಪುಣ್ಯ ಕಾರ್ಯ ಮಾಡಿ ಒಳ ಸೇರುವೆ ಎಂಬುದರ ಮೇಲೆ ತಪ್ಪು ಸರಿ ನಿರ್ಧಾರವಾಗುತ್ತದೆ."
ವಿಹರಿ ಮಾತಿಗಾರಂಭಿಸಿದ ಈಗ. ಆತನ ಮಾತೇ ಹಾಗೇ ನಿರರ್ಗಳ.. ಸ್ಪಷ್ಟ.ಸ್ಪಷ್ಟ..
"ಅನು, ನನಗೆ ಬರದ ಉದ್ಯೋಗವಿಲ್ಲ. ಮಾಡದ ಕೆಲಸಗಳಿಲ್ಲ ಎಂದು ನಿನಗೂ ಗೊತ್ತು. ನಿನ್ನ ಪುಟ್ಟ ಪುಟ್ಟ ಆಸೆಗಳನ್ನು, ಅವು ನನ್ನದೇ ಕನಸುಗಳೆಂಬಂತೆ ಕಾದುಕೊಂಡು ನಾನೆಲ್ಲವನ್ನು ಪೂರೈಸಬಲ್ಲೆ. ಬುದ್ಧಿಯಿದ್ದವನಿಗೆ ಬದುಕುವುದು ಕಷ್ಟವಲ್ಲ. ದುಡ್ಡು ಎಂಬುದು ಕೂಡ ಒಂದು ಸಮಸ್ಯೆಯಲ್ಲ. ಈ ಜಗತ್ತಿನಲ್ಲಿ ಎಲ್ಲರಿಗಿಂತ ಹೆಚ್ಚಾಗಿ ನಾನು ಇಷ್ತಪಡುತ್ತೇನೆ. ನೀನು ಬದುಕಲಾಗಿ ನಾನು ಸತ್ತು ನಿಲ್ಲುತ್ತೇನೆ ಎಂಬ ದೊಡ್ಡ ದೊಡ್ಡ ಬಂಡವಾಳವಿಲ್ಲದ ಮಾತುಗಳನ್ನು ಆಡಲಾರೆ. ಆದರೆ ಬದುಕಿರುವವರೆಗೆ ನಿನ್ನ ಕನಸುಗಳ ಜೊತೆ ನಿಲ್ಲಬಲ್ಲೆ ಎಂಬಂಥ ಮನುಷ್ಯ ನಾನು.
"ನಾನು ನಿನ್ನ ಮನಸ್ಸನ್ನು ಓದಬಲ್ಲೆ ಅನಾ, ನಿನಗೆ ನನ್ನ ಮೇಲೆ ದುರಾಭಿಪ್ರಾಯವಿಲ್ಲ, ಪ್ರೀತಿ ಇಲ್ಲದೆಯೂ ಇಲ್ಲ. ನಿನ್ನ ಕೊರಗೆಲ್ಲ ಈ ಸಮಾಜದಲ್ಲಿ ನನಗೆ ಒಳ್ಳೆಯ ಸ್ಥಾನಮಾನ ಇಲ್ಲ ಎಂಬುದಷ್ಟೆ. ತನ್ನನ್ನು, ತನ್ನವರನ್ನು ಈ ಸಮಾಜವು ಒಳ್ಳೆಯವರೆಂದು ಗುರುತಿಸಲಿ ಎಂಬ ಸಹಜ ವಾಂಛೆ ನಿನ್ನದು. 
ಅದು ತಪ್ಪಲ್ಲ ಅನ್ವೇಷಣಾ, ಆದರೆ ನಿನಗೊಂದು ಗೊತ್ತಾ? ಈ ಸಮಾಜದ ಸ್ಥಾನಮಾನವೆಲ್ಲಾ ನೀನು ಏನು ಕಲಿತೆ ಅಥವಾ ನೀನೇನು ಮಾಡುತ್ತಿರುವೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಅದು ಕೇವಲ ದುಡ್ಡಿನ ಮೇಲೆ ಅವಲಂಭಿತವಾಗಿದೆ. ಸಣ್ಣ ಪುಟ್ಟ ಸುಲಿಗೆ, ಕಳ್ಳತನ ಮಾಡುವವರು ಮಾತ್ರ ನಮ್ಮ ಸಮಾಜದಲ್ಲಿ ಕಳ್ಳರು, ಮರ್ಯಾದಿ ಬಿಟ್ಟವರು. 
ಅದೇ ಕೋಟಿಗಳಲ್ಲಿ ಲಂಚ ತಿನ್ನುವವರು, ದುಡ್ಡು ವಸೂಲಿ ಮಾಡುವವರು ರಾಜರಾಗಿ ಮೆರೆಯುತ್ತಿದ್ದಾರೆ. ಎಷ್ಟು ರಾಜಕಾರಣಿಗಳು ಸಾವಿರ ಸಾವಿರ ಕೋಟಿಗಳ ಕಳ್ಳದಂಧೆ ಮಾಡಿ ಅದರ ಮೇಲೆಯೇ ಕುಳಿತು ದೇಶ ನಡೆಸುತ್ತಿಲ್ಲ. ನಮ್ಮ ವ್ಯವಸ್ಥೆ ಅಂತವರಿಗೆ ಕೋಟಿಗಳನ್ನು ಕರ್ಚು ಮಾಡಿ ಸೆಕ್ಯುರಿಟಿ ಕೊಡುತ್ತಿಲ್ಲವಾ?
ಈ ದೇಶದಲ್ಲಿ ನನ್ನ ನಿನ್ನಂತ ಮಧ್ಯಮ ವರ್ಗದ ಜನರು ಮಾತ್ರ ಕೊಂಡಿದ್ದಕ್ಕೆ, ಉಂಡಿದ್ದಕ್ಕೆ, ಕೆಲಸ ಮಾಡಿದ್ದಕ್ಕೆ, ಬಂದ ದುಡ್ಡಿಗೆ, ಎಲ್ಲದಕ್ಕೂ ಕಂದಾಯ ತೆರುತ್ತಿದ್ದೇವೆ. 
ಆದರೆ ದೊಡ್ಡ ತಿಮಿಂಗಲಗಳು ತಮಗೆ ಬೇಕಾದ ಹಾಗೆ ತಿರುಗಿಕೊಂಡಿಲ್ಲವೆ? ಸೆಲೆಬ್ರಿಟಿಗಳಾಗಿ ತಿರುಗುವ ಎಷ್ಟು ಜನ ನಿಜವಾದ ದಾಖಲೆ ತೋರಿಸಿ ಕಂದಾಯ ಕಟ್ಟುತ್ತಾರೆ? ಇವೆಲ್ಲವೂ ಗೊತ್ತಿದ್ದೂ ಕೂಡ ಜನರು ಅವರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಾರಲ್ಲಾ ಮೂರ್ಖರಲ್ಲವಾ?? ನಮ್ಮ ವ್ಯವಸ್ಥೆಯೇ ಹಾಗಿದೆ ಅನಾ!! 
ಇಲ್ಲಿ ದೊಡ್ಡ ಕಳ್ಳರಿಗೆ ರಕ್ಷಣೆಯಿದೆ. ಆದ್ದರಿಂದಲೇ ನಾನು ಯೋಚಿಸಿಯಾಗಿದೆ." ಮಾತು ನಿಲ್ಲಿಸಿ ಆಕೆಯ ಮುಖ ನೋಡಿದ. 
ಆತ ಭಾವೋತ್ಕರ್ಷದಲ್ಲಿ ತೇಲುತ್ತಾ ಮಾತನಾಡುತ್ತಿದ್ದ. ಅವನ ಮಾತುಗಳು ನಿಜವೂ ಆಗಿದ್ದವು. ನಮ್ಮ ದೇಶದಲ್ಲಿ ದೊಡ್ಡ ತಿಮಿಂಗಲಗಳೆಲ್ಲ ಕಂದಾಯ ಕಟ್ಟಿದ್ದರೆ, ರಾಜಕಾರಣಿಗಳು ದುಡ್ಡು ತಿನ್ನದೇ ಕೆಲಸ ಮಾಡಿದ್ದರೆ ದೇಶ ಹೀಗಿರುತ್ತಿತ್ತಾ? ಸರಿ ಎನಿಸಿತು ಅವಳಿಗೆ.
ಇದಕ್ಕೆ ಆತ ಇಷ್ಟವಾಗುತ್ತಿದ್ದ ಆಕೆಗೆ. ತಾನು ತುಂಬ ದೊಡ್ಡದು ಎಂದುಕೊಂಡ ವಿಷಯವನ್ನು ಕಗ್ಗಂಟು ಬಿಚ್ಚುವಂತೆ ಬಿಚ್ಚಿ ಸರಳವಾಗಿಸುತ್ತಿದ್ದ. ಆತನ ಮಡಿಲಲ್ಲಿ ಮಲಗಿದರೆ ಅದೊಂದು ರೀತಿಯ Comfort. ತನ್ನ ಮೊದಲಿನ ಯೋಚನೆಗಳಿಗೆ ತನಗೇ ನಗು ಬಂದು ನಕ್ಕು ಬಿಟ್ಟಳು. 
"ಈ ಹುಡುಗಿಯರೇ ಹೀಗೇ... ನಗಿಸಬೇಕೆಂದು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು. ಈಗ ನಾನೇನೋ ಸೀರಿಯಸ್ ಆಗಿ ಮಾತನಾಡಿದರೆ ಇವಳಿಗೆ ನಗು ಬರುತ್ತದೆ." ಎಂದು ಅವಳ ಸೊಂಟದತ್ತ ಕೈ ಜರುಗಿಸಿದ. 
"ಹಸಿ ತೋ ಫಸೀ ಡೈಲಾಗ್ ನಾ ಕೂಡ ಕೇಳಿದ್ದೇನೆ. ನಕ್ಕೆನೆಂದು ಎಕ್ಸಟ್ರಾ ಉಪಯೋಗ ಮಾಡಿಕೊಳ್ಳಲು ನೋಡಬೇಡ" ಎನ್ನುತ್ತಾ ಆತನ ಕೈ ತಗೆದಳು ಅಲ್ಲಿಂದ. 
"ಆದರೂ ಹುಡುಗಿಯರ ಸೊಂಟದಲ್ಲಿ ಏನೋ ಇದೆ" ಎಂದ ಮತ್ತೊಂದು ಕಡೆ ಕೈ ಇಡುತ್ತಾ.. ಆಕೆಯ ಮುಖ ಮಧ್ಯಾನ್ಹದ ಬಿಸಿಲಿಗೂ, ಈತನ ರಸಿಕತೆಗೂ ಎಂಬಂತೆ ಕೊಂಚವೇ ಗುಲಾಬಿ ಬಣ್ಣಕ್ಕೆ ತಿರುಗಿತು. 
"ಯಾವಾಗ ನೋಡಿದರೂ ಈ ಹುಡುಗಿಯರು, ಹುಡುಗಿಯರಿಂದ ಎಂದು ಬಹುವಚನದಲ್ಲೇ ಮಾತನಾಡುತ್ತಿರುವೆಯಲ್ಲಾ?? ಎಷ್ಟು ಹುಡುಗಿಯರ ಜೊತೆ ಪ್ರಣಯ ಪ್ರಬಂಧವೋ!?" ಎಂದಳು.
ಮೊದಲು ಕೈ ಬೆರಳುಗಳನ್ನು ನೋಡಿದ. ನಂತರ ಅವಳ ಕೈ ಬೆರಳುಗಳನ್ನು ಕೈಲಿ ತೆಗೆದುಕೊಂಡ. "ಏನು ಮಾಡುತ್ತಿರುವೆ ಮಹಾನುಭಾವ' ಎಂದಳು. 
"ಲೆಕ್ಕ ಕೇಳಿದೆಯಲ್ಲಾ, ಏಣಿಸುತ್ತಿರುವೆ.. "
ಮುನಿಸಿಕೊಂಡು "ಹಾಗಾದರೆ ಅವರ ಬಳಿಯೇ ಹೋಗು ನಾನೇಕೆ? " ಎಂದಳು.
"ನಿನಗೆ Fixed Deposit, Current Account ಎರಡರ ವ್ಯತ್ಯಾಸ ಗೊತ್ತಿರುವಂತೆ ಕಾಣುವುದಿಲ್ಲ" ಎಂದ. 
"ಏನು?" ಎನ್ನುತ್ತಾ ಎದ್ದು ಕುಳಿತಳವಳು. "ಅದೇ ನಾನು ಜೈಲಿಗೆ ಹೋಗುವ ವಿಷಯ" ಮಾತು ಬದಲಾಯಿಸಿದ. ತಾನು ಹೇಳಿದ ಮಾತಿನ ಅರ್ಥ ಕಾಮರ್ಸ್ ಮಾಡಿದ ಅವಳಿಗೂ ತಿಳಿಯಲು ಇನ್ನೂ ನಾಲ್ಕು ದಿನ ಬೇಕೆಂದು ಗೊತ್ತವನಿಗೆ. 
" ಹಾ.. ಹಾ.. ಹೌದು ಏನು ಮಾಡಿ ಜೈಲಿಗೆ ಹೋಗಬೆಕೆಂದಿರುವೆ? ಅಷ್ಟು ಹುಡುಗಿಯರ ಜೊತೆ ಫ್ಲರ್ಟ್ ಮಾಡಿದರೆ ಎಂದಾದರೊಂದು ದಿನ ಜೈಲೇ ಗತಿ ನಿನಗೆ" ಎಂದಿನ ಲಯಕ್ಕೆ ಬಂದಿದ್ದಳು.
"ಹಾಗೇನಿಲ್ಲಾ, ನಾ ಜೈಲು ಪಾಲಾದರೆ ಅವರಿಗೆಲ್ಲ ರಾತ್ರಿ ಹಾಡು ಹೇಳಿ ಮಲಗಿಸುವವರಾರು?"
ಓಹೋ! ಹಾಡಷ್ಟೇ ಹೇಳುತ್ತಿರೋ!! ಡಾನ್ಸ್ ಕೂಡಾ ಮಾಡುತ್ತಿರೋ??" ಒಳಗಡೆಯೇ ಕುದಿಯುತ್ತಿತ್ತು ಅವಳ ರಕ್ತ. ತಾನು ಏನಾದರೂ ಹೇಳಿದರೆ ನೀನು ಪೊಸೆಸ್ಸಿವ್ ಆಗಬಹುದು, ನಾನು ನಿನ್ನ ಬಾಸ್ ನಿಂದ ಸ್ವಲ್ಪ ದುರನಿಂತು ಮಾತನಾಡು, ಸಭ್ಯನಲ್ಲ ಎಂದರೆ ನಿನಗ್ಯಾವಾಗಲೂ ಅನುಮಾನ ಎನ್ನುತ್ತೀಯಾ ಎಂದು ಹೇಳುವನೆಂದು ಬಂದ ಕೋಪವನ್ನು ತಡೆದುಕೊಂಡಿಡ್ಡಳು. . 
ಅವನಿಗದು ಗೊತ್ತು.. ಒಳಗಿಂದೊಳಗೆ ಜ್ವಾಲಾಮುಖಿಯಾಗಿರುವಳೆಂದು. ಆದರೂ ಮುಂದುವರೆಸಿದ. 
"ಇಂಥವೇ ಹಾಡುಗಳೆಂದೇನೂ ಇಲ್ಲ. ಅದು ಮೂಡ್ ಗಳ ಮೇಲೆ ಡಿಪೆಂಡ್. For example ಕೆಲವರಿಗೆ ಲಾಲಿ ಲಾಲಿ ಸುಕುಮಾರ ಹಾಡಿ ಮಲಗಿಸಿದರೆ, ಇನ್ನು ಕೆಲವರಿಗೆ ಹೃದಯವು ಬಯಸಿದೆ ನಿನ್ನನೇ.. ಎನ್ನಬೇಕಾಗುತ್ತದೆ. ಇಂತಹ ಹಾಡಿನಲ್ಲಿ ಉತ್ಸಾಹ ಇರುವುದಿಲ್ಲವಾದರೂ ನಾಳೆ ಕೂಡ ಇದೇ ಹಾಡು ಬೇಕೆನ್ನುವುದಿಲ್ಲ ಅವರು. 
ಕೆಲವೊಂದು ದಿನ ಅವರಾಗೇ ಬಾ ಬಾರೋ ರಸಿಕ.. ನೋಡೆನ್ನ ಈ ತಳುಕ.. ಈ ಬಳುಕ .. ಎನ್ನುತ್ತಾರೆ. ಇನ್ನು ಕೆಲವೊಮ್ಮೆ Until I Get Satisfaction.." ಆತ ಹೇಳುತ್ತಿದ್ದಂತೆಲ್ಲ ಅವಳ ತುಟಿಗಳು ಅದುರಲು ಪ್ರಾರಂಭಿಸಿದವು. 
ಸಿಟ್ಟಿನ ಕೊನೆಯ ಹಂತದಲ್ಲಿದ್ದಳವಳು. ಕಣ್ಣೀನಿಂದ ನೀರು ಧಾರೆ ಧಾರೆಯಾಗಿ ಪ್ರವಹಿಸತೊಡಗಿತು. ತನ್ನದೇ ಸ್ವಲ್ಪ ಜಾಸ್ತಿಯಾಯಿತೇನೋ ಎಂದುಕೊಂಡು "ಅನ್ವೇಷಣಾ ಸಾರಿ ಕಣೋ, ನನ್ನ ಬಂಗಾರ ಅಲ್ವಾ.. ಮುದ್ದು ಅಲ್ವಾ.. ನೀರೂ.. ನೀರೂ.. "ಎನ್ನುತ್ತಾ ಸಂತೈಸತೊಡಗಿದ. ಆತ ಅವಳಿಗೆ ಹೇಳದ ಹೆಸರುಗಳಿಲ್ಲ. 
"ನೀರಲ್ಲಾ.. ಕಣ್ಣೀರು.." ಎಂದಳು. ಎರಡು ಕಿವಿಗಳನ್ನು ಹಿಡಿದು ಎದ್ದು ನಿಂತು ಬಸ್ಕಿ ಹೊಡೆಯಲು ಆರಂಭಿಸಿದ. ಅಕ್ಕ ಪಕ್ಕ ನೋಡಿದಳವಳು. ಯಾರಾದರೂ ನೋಡಿದರೆ ಏನು ಗತಿ? ಈತನೋ, ಈತನ ಚೇಷ್ಟೇಯೋ? ಅಳುತ್ತಲೇ ನಕ್ಕಳು. ನಗುತ್ತಲೇ ಅಳುತ್ತಿದ್ದಳು. "ಸಾಕು.. ಸಾಕು ಬಾ.. ಇನ್ಯಾವತ್ತೂ ಇತರ ಮಾತನಾಡಬೇಡ" ಎಂದಳು.
"ಸರಿ.. ಸರಿ.. ಹಾಗಾದರೆ ನಿನಗೊಂದು ಮೊಬೈಲ್ ತೆಗೆದುಕೊಡುತ್ತೇನೆ.ನಿನಗೇ ಹಾಡು ಹೇಳುತ್ತೇನೆ ದಿನಾಲೂ.."
"ಏನೂ ಬೇಡ ನಾನೇ ತೆಗೆದುಕೊಳ್ಳುತ್ತೇನೆ.." ಎಂದಳು. 
"ಓ ಸ್ವಾಭಿಮಾನದ ನಲ್ಲೆ... ಸಾಕು ಸಂಯಮ ಬಲ್ಲೆ... "
ಈ ಹಾಡುಗಳನ್ನೆಲ್ಲ ಎಲ್ಲಿಂದ ಕದಿಯುತ್ತೀಯಾ??" ಎಂದಳು. 
ಮಾತನಾಡದೆ ಬಳಿ ಕುಳಿತ. " ಇನ್ನು ನನಗೆ ಹೊತ್ತಾಯಿತು. ನಾನು ಹೊರಡುತ್ತೇನೆ ಎಂದಳು. ಹೀಗೆ ತಪ್ಪಿಸಿಕೊಂಡು ಹೋಗುತ್ತಿರು.. ಆಮೇಲೆ ನಾನು ಜೈಲಿಗೆ ಹೋದ ಮೇಲೆ ಒಂಟಿ ಪಿಶಾಚಿಯಾಗುವೆ" ಎಂದ. 
"ನನಗೇನು ಗ್ರಹಚಾರ! ಒಂದು ಚಿಟಿಕೆ ಹೊಡೆದರೆ ನಿನ್ನಂತವರು ಕ್ಯೂ ನಿಲ್ಲುತ್ತಾರೆ" ಎಂದಳು.
"ನಿಲ್ಲುತ್ತಾರೆ.. ನಿಲ್ಲುತ್ತಾರೆ.. ಬೀದಿಯಲ್ಲಿ ನೀರು ಬಂದರೆ ಎಲ್ಲರೂ ಹಿಡಿದುಕೊಳ್ಳುವವರೇ..ಅದೇ ಬಾವಿ ತೊಡಿಸಿ ಪಂಪ್ ಹಾಕಿಕೊಳ್ಳಬೇಕೆಂದರೆ?? ಯಾರೂ ಇರುವುದಿಲ್ಲ. 
"ನಿನ್ನನ್ನು ಮುಂದಿನವಾರ ವಿಚಾರಿಸಿಕೊಳ್ಳುತ್ತೇನೆ. ಇಂದಿಗೆ ಬೈ ಕಣೋ ರಾಜ.." ಎನ್ನುತ್ತಾ ಹೊರಡಲನುವಾದಳು. ಆದರೂ ಸೊಂಟ, ಎನ್ನುತ್ತಾ ಅವಳ ಸೊಂಟ ಗಿಲ್ಲಿ, ಕಂಗಳ ಮೇಲೆ ಮುತ್ತಿಟ್ಟು, ನಡಿ ಅಲ್ಲಿಯವರೆಗೆ ನಾನೂ ಬರುತ್ತೇನೆ ಎನ್ನುತ್ತಾ ಅವಳ ಕೈಲಿ ಕೈ ಸೇರಿಸಿ ನಡೆಯತೊಡಗಿದ. ಅವನ ಅಭಯಹಸ್ತದಲ್ಲಿ ಮಾಡಿದ ಜಗಳ, ಹೊರಬಿದ್ದ ಕಣ್ಣೀರು, ಜೈಲಿನ ವಿಷಯ.. ಎಲ್ಲವೂ ಮರೆತು ಹೋಗಿತ್ತು ಆಕೆಗೆ. 
ವಿಹಾರಿಯ ತಲೆಯಲ್ಲಿ ಮಾತ್ರ ಜೈಲಿನ ವಿಷಯವೇ ಕೊರೆಯುತ್ತಲೇ ಇತ್ತು. ಹಗರಣ.. ಪ್ರಪಂಚದ ಅತ್ಯಂತ ದೊಡ್ಡ ಹಗರಣ.. ಎಂದುಕೊಂಡ. ನಸುನಗು ಮುಖದಲ್ಲಿ ಹಾದುಹೋಯಿತು. ಓರೆಗಣ್ಣಿನಿಂದ ಆತನನ್ನೇ ನೋಡುತ್ತ ತನ್ನ ಸೊಂಟ ತಾನೇ ನೆನೆದು ಅವಳೂ ಮುಗುಳ್ನಗುತ್ತಿದ್ದಳು. 
ಮತ್ತದೇ ಪ್ರಶ್ನೆ ಕೇಳಿದ ವಿಹಾರಿ "ಜೈಲು?" ಈ ಸಲ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಅನ್ವೇಷಣಾ. "ತಥಾಸ್ತು ದೇವತೆಗಳಿರುತ್ತಾರೆ. ಸುಮ್ಮನಿರೋ.." 
"ನಿನ್ನ ಬಿಟ್ಟಿರುವ ದಿನಗಳು ಸಾಕು ಇನ್ನು, ಯಾವುದಾದರೂ ಒಳ್ಳೆಯ ಕೆಲಸ ಹಿಡಿ, ಮದುವೆಯಾಗೋಣ. ಈ ಒಂಟಿತನ, ಈ ಕೆಲಸ ಎಲ್ಲ ಬೇಸರವಾಗಿದೆ ನನಗೆ. ನೀನು ಜೈಲು ಸೇರೋದು ಬೇಡ, ಕಾಡು ಪಾಲಾಗೋದು ಬೇಡ." ಎಂದಳು ಸಿಟ್ಟಿನಿಂದ. 
ವಿಹಾರಿ ಎರಡು ಬಾರಿ ತನ್ನ ಯೋಜನೆ ಹೇಳಬೇಕೆಂದಾಗಲೂ ವಿಷಯ ವಿಷಯಾಂತರವಾಗಿ ಹೋಗಿತ್ತು. 
ತನಗೆ ಬಂದಿರುವ ಯೋಚನೆಯನ್ನು ಆತ ಹೇಳಬೇಕೆಂದೇ ಬಂದಿದ್ದ. ತನ್ನ ಯೋಜನೆ ಸರಿಯಾಗಿ ನಡೆದರೆ ಏನೆಂದರೂ ಲಕ್ಷ-ಕೋಟಿಗಳ ಒಡೆಯನಾಗುತ್ತಾನೆ ಅವನು. ಸಿಕ್ಕಿಬಿದ್ದರೆ ಜೈಲು ಆಗಬಹುದೇನೋ ಅದನ್ನೇ ಅವಳಲ್ಲಿ ಆತ ಹೇಳಲು ಬಯಸಿದ್ದ. ಪರಿಸ್ಥಿತಿ ಅದಕ್ಕೆ ಅನುವು ಮಾಡಿಕೊಡಲಿಲ್ಲ. ಮತ್ತೆ ತಾನು ಆ ಸುದ್ಧಿ ಎತ್ತಿದರೆ ಕಣ್ಣೀರಾಗುತ್ತಾಳೆ ಎಂದು ಆತನೂ ಹಮ್ ಎಂದು ಸುಮ್ಮನಾದ. 
ಪಕ್ಕ ಪಕ್ಕವೇ ನಡೆಯುತ್ತಿದ್ದ ಆ ಎರಡು ಹೃದಯ, ಒಂದು ಭಾವ ಕವಲೊಡೆದು ತಮ್ಮ ತಮ್ಮ ರಸ್ತೆ ಸೇರಿದವು. 
ಇದೇ ತಮ್ಮ ಕೊನೆಯ ಭೇಟಿ ಎಂಬುದು ಒಂದು ಕ್ಷಣ ವಿಹಾರಿಗೆ ಅನ್ನಿಸಿದರೂ ಆತ ಅನ್ವೇಷಣಾಳನ್ನು ಬಿಟ್ಟಿರುತ್ತಿದ್ದಾನಾ??
ಇಲ್ಲಿ ಸಮಯವೇ ಪಾತ್ರಗಳ ಸೂತ್ರಧಾರ!! 

                                 ...............................ಮುಂದುವರೆಯುತ್ತದೆ.............................. 

No comments:

Post a Comment