Sunday, March 20, 2016

ಖತರ್ನಾಕ್ ಕಾದಂಬರಿ ಅಧ್ಯಾಯ 4

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                                ಅಧ್ಯಾಯ 4


ಟೈಮ್ ನೋಡಿಕೊಂಡ ಪ್ರತಾಪ್. ಹನ್ನೊಂದು ಘಂಟೆ. ಶಾಸ್ತ್ರಿ ಹೇಳಿ ಹೋಗಿದ್ದ ಉಪಾಯದ ಬಗ್ಗೆ ಕೂಲಂಕುಷವಾಗಿ ಯೋಚಿಸುತ್ತಿದ್ದ ಆತ. ಕಂಬಿಗಳ ಹಿಂದೆ ನಿಂತು ಹರಟೆ ಹೊಡೆಯುತ್ತಿದ್ದ ನಾಲ್ಕು ಜನರನ್ನು ನೋಡಿದರೆ ತಾವು ಜೈಲಿನಲ್ಲಿದ್ದೇವೆ ಎಂಬ ಭಯವಾಗಲೀ, ಎದುರಿಗೊಬ್ಬ ಇನಸ್ಪೆಕ್ಟರ್ ಕುಳಿತಿದ್ದಾನೆ ಎಂಬ ಹಿಂಜರಿಕೆಯಾಗಲೀ ಅವರಿಗೆ ಇದ್ದಂತೆ ಕಾಣಲಿಲ್ಲ. 
"ಸಣ್ಣ ತಪ್ಪು, ದೊಡ್ದ ತಪ್ಪು ಎಂಬುದು ಇಲ್ಲ ಪ್ರತಾಪ್. ಸಣ್ಣ ತಪ್ಪಿಗೆ ಶಿಕ್ಷೆಯಾಗದಿದ್ದಾಗ ಜನರು ದೊಡ್ಡ ತಪ್ಪು ಮಾಡುತ್ತಾರೆ. ಶಿಕ್ಷೆ ದೊಡ್ಡದೇ ಆಗಬೇಕು ಪ್ರತಾಪ್." ಶಾಸ್ತ್ರಿಯ ಮಾತು ನಿಜವೆನ್ನಿಸಿತು. ಒಂದು ನಿಟ್ಟುಸಿರು ಬಿಟ್ಟು ರಿಸಿವರ್ ಎತ್ತಿ ನಂಬರ್ ಡಯಲ್ ಮಾಡಿದ.
"ನಾನು ಪ್ರತಾಪ್ ಮಾತಾಡ್ತಾ ಇದೀನಿ ಸರ್" ಪ್ರತಾಪ್ ನ ಧ್ವನಿ ಕೇಳುತ್ತಲೇ "ಬಿಟ್ಟು ಬಿಟ್ಟೆಯಾ ಅವರನ್ನೆಲ್ಲಾ?" ಆ ಕಡೆಯಿಂದ ಧ್ವನಿ. "ಒಂದು ರಿಕ್ವೆಸ್ಟ್ ಸರ್, ನಾಲ್ವರನ್ನು ಒಟ್ಟಿಗೆ ಬಿಡುವುದು ಸ್ವಲ್ಪ ಕಷ್ಟ ಸರ್, ಮೇಲಿನವರೆಗೆ ಹೋಗಿದೆ ವಿಷಯ. ಇಬ್ಬರನ್ನು ಈಗ ಬಿಡುತ್ತೇನೆ, ಇನ್ನಿಬ್ಬರನ್ನು ಕೋರ್ಟ್ ಗೆ ಹಾಜರು ಪಡಿಸುತ್ತೇನೆ. ಸಾಕ್ಷಿ ಯಾವುದೂ ಇಲ್ಲದ ಕಾರಣ ಕೇಸ್ ಬಿದ್ದುಹೋಗುತ್ತದೆ ಸರ್" ಎಂದ ಪ್ರತಾಪ್.
"ಮೇಲಿನವರೆಗೆ" ಎಂಬ ಮಾತನ್ನು ಒತ್ತಿ ಹೇಳಿದ್ದ. ಒಂದು ನಿಮಿಷ ಮಾತಿಲ್ಲದೆ ಕಳೆಯಿತು. "ತುಂಬ ಕಷ್ಟ ಸರ್" ಉಸುರಿದ ಪ್ರತಾಪ್. "ಸರಿ ಪ್ರತಾಪ್, ಸಂಜೆಯ ಒಳಗೆ ಅವರೆಲ್ಲ ಹೊರಗೆ ಇರಬೇಕು" ಎಂದು ಫೋನಿಟ್ಟ ಇನಸ್ಪೆಕ್ಟರ್. ಮುಗುಳ್ನಗು ಮೂಡಿತು ಪ್ರತಾಪನ ಮುಖದಲ್ಲಿ.
"ಆ ನಾಲ್ವರನ್ನು ತಂದು ಜೀಪ್ ಹತ್ತಿಸಿರಿ" ಎಂದು ಹೊರನಡೆದ ಪ್ರತಾಪ್. ಇಬ್ಬರು ಕಾನಸ್ಟೇಬಲ್ ಗಳಲ್ಲಿ ಒಬ್ಬನಿಗೆ ಸ್ವಲ್ಪ ಸ್ವಲ್ಪ ಕಾಣಿಕೆ ಸಲ್ಲುತ್ತಿತ್ತು ಅವರಿಂದ. ಅವನು ತಾನಿದ್ದೇನೆ ಎಲ್ಲ ಸರಿಹೋಯಿತು ಎಂಬಂತೆ ಕಣ್ಸನ್ನೆ ಮಾಡಿದ. ಅದರ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಅವರಿಗೂ ಗೊತ್ತು ಈ ಕಾನಸ್ಟೇಬಲ್ ನಿಂದ ತಮಗೆ ಆಗುವುದೂ ಏನೂ ಇಲ್ಲ. ಹಿಡಿದು ತರುವಾಗ ಸುಮ್ಮನೆ ಹೊಡೆದು ಮೈಕೈ ನೋವು ಮಾಡದಿರಲಿ ಎಂಬುದಕ್ಕೆ ಅವನಿಗೆ ಕಾಣಿಕೆ. 
ದರ್ಪದಿಂದ ಹೊರಗೆ ಬಂದು ಹೊರಡಲು ಅನುವಾದವರನ್ನು ಕಾನಸ್ಟೇಬಲ್ ಜೀಪ್ ಏರಿಸಿ ಕೂಡ್ರಿಸಿದ. ಪ್ರತಾಪ್ ಬದಿಯಲ್ಲೇ ಇದ್ದ ಗೂಡಂಗಡಿಯಲ್ಲಿ ಒಂದು ಟೀ ಕುಡಿದು ಬಂದು "ನೀವು ಇಲ್ಲಿಯೇ ಇರಿ, ನಾನೂ ಆಕಡೆ ಹೋಗುವವನಿದ್ದೇನೆ. ಇವರನ್ನು ಬಿಟ್ಟು ಹೋಗುತ್ತೇನೆ." ಎಂದ ಕಾನಸ್ಟೇಬಲ್ ಗಳಿಗೆ. ಅವರು ಸರಿಯೆಂಬಂತೆ ತಲೆಯಾಡಿಸಿ ಕೆಳಗಿಳಿದು ನಿಂತರು. ಆ ನಾಲ್ವರ ಮುಖದಲ್ಲಿ ಅಪಹಾಸ್ಯದ ನಗುವೊಂದು ಹಾದುಹೋಯಿತು. ಅದಕ್ಕೇನು ಪ್ರತಿಕ್ರಿಯೆ ಕೊಡದೆ ಜೀಪ್ ಮುನ್ನಡೆಸಿದ ಪ್ರತಾಪ್. 
"ಮೊದಲೇ ಹೇಳಿದ್ವಲ್ಲೋ, ಕೇಳಿದೆಯಾ?? ನಮ್ಮ ಲಿಂಕ್ ಹೇಗಿದೆ ನೋಡು.. ಕೊಟ್ಟ ಚೂರು ಪಾರು ತೆಗೆದುಕೊಂಡು ನಮ್ಮ ಜೊತೆ ಸೇರಿದರೆ ಈ ರಗಳೆ ಇರುತ್ತಿತ್ತಾ??" ಹಿಂದಿನಿಂದ ಪುಂಖಾನುಪುಂಖವಾಗಿ ಬರುತ್ತಲೇ ಇತ್ತು ಮಾತುಗಳು. ಮಧ್ಯ ಮಧ್ಯ ಅವಾಚ್ಯ ಶಬ್ಧಗಳು ಕೇಳಿಸುತ್ತಿದ್ದವು. ಪ್ರತಾಪ್ ನ ಮುಖ ಸಿಟ್ಟಿನಿಂದ ಕೆಂಪಾಗಿತ್ತು. ಎರಡು ದಿನಗಳಿಂದ ಇವರ ರಗಳೆ, ತಮಾಷೆ ಸಾಕಾಗಿ ಹೋಗಿತ್ತು ಆತನಿಗೆ. ಅವರು ಹೇಗೂ ತಾವು ಬಿಡುಗಡೆ ಆಗಿದ್ದೇವೆ ಎಂಬ ಯೋಚನೆಯಲ್ಲಿ ಪ್ರತಾಪ್ ಗಾಡಿಯನ್ನು ಊರಿಂದ ಹೊರಹೋಗುವ ದಾರಿಗೆ ತಿರುಗಿಸಿದ್ದನ್ನು ಗಮನಿಸಲೇ ಇಲ್ಲ. 
ಊರಿಂದ ಹೊರಗೆ ಬಂದು ಸಮುದ್ರದತ್ತ ಜೀಪ್ ಚಲಾಯಿಸಿದ ಪ್ರತಾಪ್. ಸಮುದ್ರದ ಭೋರ್ಗರೆತ, ಮೀನು ಹಿಡಿಯಲು ಅಲೆಗಳ ಮೇಲೆ ಹಾರುತ್ತಿದ್ದ ಹಕ್ಕಿಗಳ ಕೂಗು ಬಿಟ್ಟರೆ ಮತ್ತೊಂದು ನರಮಾನವನ ಸದ್ದಿಲ್ಲ. ಊರಿಂದ ತುಂಬ ದೂರ ಬಂದಿದ್ದ ಪ್ರತಾಪ್. ಸುತ್ತಲೂ ನೋಡಿ ಯಾರೂ ಕಾಣದಿದ್ದಾಗ ಜೀಪ್ ನಿಲ್ಲಿಸಿ ಅವರ ಮುಖ ನೋಡದೆ ಕೆಳಗಿಳಿದು ಸಮುದ್ರದಲೆಗಳನ್ನು ನೋಡುತ್ತಾ ನಿಂತ. 
ಅಲ್ಲಿಯವರೆಗೂ ಹೇಗೆಂದರೆ ಹಾಗೆ ಪ್ರತಾಪ್ ನ ಕಾಲೆಳೆಯುತ್ತಿದ್ದ ಆ ನಾಲ್ವರು ಈಗ ಸುಮ್ಮನೆ ಕುಳಿತಿದ್ದರು. ಅವರ ಮನಸ್ಸು ಕಸಿವಿಸಿಗೊಂಡಿತ್ತು. ಅದೂ ಈ ಜನರಿಲ್ಲದ ಪ್ರದೇಶದಲ್ಲಿ. ಅವನು ಒಬ್ಬನೇ ಇದ್ದಾನೆ ನಾವು ನಾಲ್ವರು ಎಂಬುದೊಂದೇ ಸ್ವಲ್ಪ ಧೈರ್ಯ ತಂದಿತ್ತು. ಅದೂ ಅಲ್ಲದೆ ಹಫ್ತಾ ವಸೂಲಿ ಮಾಡಿದವರನ್ನು Encounter ಮಾಡಿ ಕೊಲ್ಲುವಷ್ಟು ನಮ್ಮ ಪೋಲಿಸಗಿರಿ ಮುಂದುವರೆದಿಲ್ಲ ಎಂಬುದು ಗೊತ್ತವರಿಗೆ. 
ಸಿಟ್ಟುಗೊಂಡು ಹೀಗೆ ನಮ್ಮನ್ನಿಲ್ಲಿ ತಂದುಬಿಡುತ್ತಿದ್ದಾನೆ ಎಂದುಕೊಂಡು ಎರಡು ಜನ ಕೆಳಗಿಳಿದರು. ಪ್ರತಾಪ್ ಇವರತ್ತ ಬರುತ್ತಿದ್ದಂತೆಯೇ "ನಮ್ಮನ್ನು ನಮ್ಮ ಏರಿಯಾಗೆ ಬಿಡು, ಇಲ್ಲದಿದ್ದರೆ ಸರಿ ಇರುವುದಿಲ್ಲ" ಎಂದು ಹೆದರಿಸಿದ ಜೀಪ್ ಮೇಲೆ ಕುಳಿತವ. 
"ಇಳಿಯಿರಿ, ಸ್ವಲ್ಪ ಮಾತನಾಡಬೇಕು, ನಂತರ ಬಿಡುತ್ತೇನೆ." ಶಾಂತವಾದ ಧ್ವನಿಯಲ್ಲೇ ಹೇಳಿದ ಪ್ರತಾಪ್. 
ಜೀಪ್ ನಲ್ಲಿ ಕುಳಿತವರಿಬ್ಬರು ಮುಖ ಮುಖ ನೋಡಿಕೊಂಡು ಅವರಲ್ಲೊಬ್ಬ ಸುಮ್ಮನೆ ಕೆಳಗಿಳಿದು ನಿಂತ. ಹೊಲಸ್ಟರ್ ಮಾಡಿದ್ದ ರಿವಾಲ್ವರ್ ಕೈಗೆ ತೆಗೆದುಕೊಂಡು ಪ್ರತಾಪ್ ಒಳಗಿದ್ದವನ ಮುಖ ನೋಡಿದ. ಆತ ರಿವಾಲ್ವರ್ ಕಾಣುತ್ತಿದ್ದಂತೆಯೇ ಮಾತಿಲ್ಲದೆ ಕೆಳಗಿಳಿದು ನಿಂತ. ನಗು ಬಂತು ಪ್ರತಾಪಗೆ. ರಿವಾಲ್ವರ್ ಗಿರುವ ಬೆಲೆ ಮನುಷ್ಯನಿಗಿಲ್ಲ. 
ಕೆಳಗಿಳಿದು ಸಾಲಾಗಿ ನಿಂತಿದ್ದರು ಅವರೆಲ್ಲ.
"ಈಗ ಹೇಳಿ, ನಾಲ್ಕು ಜನರಲ್ಲಿ ಇಬ್ಬರನ್ನೇ ಬಿಡುತ್ತೇನೆ, ಇಬ್ಬರು ಜೈಲಿಗೆ ಹೋಗುತ್ತಾರೆ. ಯಾರನ್ನು ಬಿಡಬೇಕು? ಯಾರು ಜೈಲಿಗೆ ಸೇರುತ್ತೀರಿ? ನೀವೆ ನಿರ್ಧರಿಸಿ" ಎನ್ನುತ್ತಾ ಎಲ್ಲರ ಮುಖ ನೋಡಿದ ಒಮ್ಮೆ ಪ್ರತಾಪ್.
ಪರಸ್ಪರ ಮುಖ ನೋಡಿಕೊಂಡ ಎಲ್ಲರೂ "ನಾಲ್ವರನ್ನೂ ಬಿಡದಿದ್ದರೆ ನಿನ್ನ ಕಥೆ......"
ಮಾತು ಮುಗಿಯುವ ಮುನ್ನವೇ ಟಪ್ ಎಂದು ಸದ್ದು. ಅದರ ಹಿಂದೆಯೇ ಆರ್ತನಾದ. "ಅಮ್ಮಾ" ಎಂದು ಚೀರುತ್ತ ಕೆಳಗೆ ಬಿದ್ದ ಒಬ್ಬ. ಕಾಲಿನ ಮೀನಖಂಡದಲ್ಲಿ ಹೊಕ್ಕಿ ಹೊರಬಿದ್ದಿತ್ತು ಬುಲೆಟ್. ಇದನ್ನು ಊಹಿಸಿರದ ಉಳಿದ ಮೂವರು ಭಯದಿಂದ ದೂರ ಸರಿದು ನಿಂತರು. 
"ಅಮ್ಮಾ.. ಅಮ್ಮಾ.." ಮರಳ ಮೇಲೆ ಹೊರಳಾಡುತ್ತಿದ್ದ ನೋವು ತಡೆಯಲಾರದೆ. ರಕ್ತ ತೊಟ್ಟಿಕ್ಕಿ ಮರಳಿನಲ್ಲಿ ಸೇರಿಹೋಗುತ್ತಿತ್ತು. 
ಜೋರಾಗಿ ನಕ್ಕ ಪ್ರತಾಪ್, "ನನ್ನ ಕಥೆ ಮುಗಿಸುತ್ತೀಯಾ? ಅಮ್ಮ ನೆನಪಾಗುತ್ತಾಳಾ ಈಗ ಮಗನೇ!! ಹಫ್ತಾ ವಸೂಲಿಯ ಗುಂಡಾಗಳಾ ನೀವು..!? ಮೇಲಿನವರೆಗೆ ಕೈ ಇದೆಯಾ?? ಮನೆಯವರೆಗೂ ಬಿಡುತ್ತೇನೆ! ಪ್ರತಾಪ್!! ಇನಸ್ಪೆಕ್ಟರ್ ಪ್ರತಾಪ್!!!" ಗುಡುಗಿದ ಪ್ರತಾಪ್. ಮಾತು ನಿಲ್ಲುತ್ತಿದ್ದಂತೆಯೇ ಮತ್ತೆ ಅದೇ ಸದ್ದು. ಟಪ್. ಸೈಲೆನ್ಸರ್ ಒಂದು ಹಾಕಿಕೊಂಡರೆ ಸದ್ದೇ ಇಲ್ಲ. ಮತ್ತೊಬ್ಬನ ಎಡಭುಜದಲ್ಲಿ ಹೊಕ್ಕಿತ್ತು ಬುಲೆಟ್. ಆಯಕಟ್ಟಿನ ಜಾಗಗಳವು. ಇನ್ಯಾವತ್ತೂ ಆತ ಎಡಗೈ ಎತ್ತಲಾರ. ಮತ್ತೊಬ್ಬ ದಂಡವಿಲ್ಲದೇ ಓಡಾಡಲಾರ. 
ಮತ್ತಿಬ್ಬರ ಕಡೆಗೆ ತಿರುಗಿದ ಪ್ರತಾಪ್ "ನಿಮ್ಮಿಬ್ಬರನ್ನು ಮನೆಯ ಹತ್ತಿರ ಬಿಡಬೇಕಾ!? ಅಥವಾ ತಪ್ಪೊಪ್ಪಿಕೊಂಡು ಜೈಲು ಸೇರುತ್ತೀರಾ??" ಮೊದಲಿನಷ್ಟೆ ಗಡಸುತನ.
ಓಡಿ ಬಂದು ಅವನ ಕಾಲು ಹಿಡಿದುಕೊಂಡು ಅಳುವ ಧ್ವನಿಯಲ್ಲಿ "ತಪ್ಪೊಪ್ಪಿಕೊಂಡು ಜೈಲಿಗೆ ಹೋಗುತ್ತೇವೆ ಸರ್, ಹೊಡೆಯಬೇಡಿ" ಎಂದು ಅಂಗಾಲಾಚಿದರು.
"ಕೋರ್ಟ್ ಗೆ ಹೋದತಕ್ಷಣ ಬಾಲ ಬಿಚ್ಚಿದರೆ!?" ಎನ್ನುತ್ತಾ ರಿವಾಲ್ವರ್ ಸವರಿದ ಪ್ರತಾಪ್. 
"ಇಲ್ಲ ಸರ್ ತಪ್ಪೊಪ್ಪಿಕೊಂಡು ಶಿಕ್ಷೆ ಪಡೆಯುತ್ತೇವೆ. ಇನ್ಯಾವತ್ತೂ ಹೀಗೆ ಆಗುವುದಿಲ್ಲ, ಹೀಗೆ ಮಾಡುವುದಿಲ್ಲ." ತೊದಲುತ್ತ ನುಡಿದ ಒಬ್ಬ. 
"ಸರಿ, ಸರಿ, ಇನ್ನಿಬ್ಬರು ಎಲ್ಲಿ ಹೋದರು ಎಂದು ಯಾರಾದರೂ ಕೇಳಿದರೆ..!?"
"ಮಾರ್ಕೆಟ್ ಹತ್ತಿರ ಬಿಟ್ಟಿದ್ದೀರಿ ಎನ್ನುತ್ತೇವೆ ಸರ್." ತಲೆ ತಗ್ಗಿಸಿ ನಿಂತ.
"ತಲೆ ಇಷ್ಟು ಚುರುಕಾಗಿದೆ, ದೇಹ ದಂಡಿಯಾಗಿ ಬೆಳೆಸಿದ್ದಿರಿ. ದುಡಿದು ತಿನ್ನಲು ಏನು ದಾಡಿ ನಿಮಗೆ?? ಜೀಪ್ ಹತ್ತಿ" ಎಂದ ಪ್ರತಾಪ್. 
ಅಷ್ಟು ಕೇಳಿದ್ದೇ ಹೋದ ಜೀವ ಮರಳಿ ಬಂದಂತಾಗಿ ಓಡಿ ಹೋಗಿ ಜಿಪ್ ನ ಹಿಂದಿನ ಸೀಟಲ್ಲಿ ಕುಳಿತಾಗಿತ್ತು. ನರಳುತ್ತಾ ಬಿದ್ದಿದ್ದ ಇಬ್ಬರ ಹತ್ತಿರ ಬಂದ ಪ್ರತಾಪ್ ಕುಕ್ಕುರುಗಾಲಿನಲ್ಲಿ ಕುಳಿತು "ಮನೆ ಹತ್ತಿರ ಬಿಡಬೇಕಲ್ಲಾ ಮಗನೇ ನಿನಗೆ.. ಶಿವನ ಪಾದ ಸೇರುವಿಯಂತೆ.. ಏನು ನಿನ್ನ ಕೊನೆಯ ಆಸೆ?" ಒರಟಾಗಿ ಕೇಳಿದ ಪ್ರತಾಪ್. 
"ಶರಣಾಗುತ್ತೇನೆ... ನಾನು ಜೈಲು.. ಜೈಲು ಸೇರುತ್ತೇನೆ.. ಕೊಲ್ಲಬೇಡಿ ಸಾರ್.. " ಭಯದಲ್ಲಿ ತೊದಲತೊಡಗಿದ.
"ಬಿಡಬಹುದಿತ್ತು. ಆದರೆ ಈ ಗುಂಡು ಹೊಡೆದದ್ದು ಯಾರು ಎಂದು ಕೇಳಿದರೆ ನಾನು ಎನ್ನುತ್ತೀಯಾ. ಮತ್ತೆ ನನಗೆ ರಗಳೆ. ಆಗದ್ದು.. ಹೋಗದ್ದು.. ಕೊನೆ ಆಸೆ ಹೇಳು ಎನ್ನುತ್ತಾ ಅವನ ಭುಜಕ್ಕೆ ಬುಲೆಟ್ ಹೊಕ್ಕಿದ ಜಾಗಕ್ಕೆ ರಿವಾಲ್ವರ್ ಮೂತಿ ಒತ್ತಿದ ಪ್ರತಾಪ್. ಪಿಸ್ತೂಲು ಇನ್ನೂ ಬಿಸಿಯಿದ್ದ ಕಾರಣ ನೋವಿನಿಂದ "ಅಮ್ಮಾ" ಎಂದು ಚೀರಿದ ಒಮ್ಮೆ. 
"ಇಲ್ಲ ಸರ್ ಯಾರ ಬಳಿಯೂ ಹೇಳುವುದಿಲ್ಲ, ಗುಂಪುಗಲಾಟೆ ಆಯಿತು ಎನ್ನುತ್ತೇವೆ. ಬಿಟ್ಬಿಡಿ ಸಾರ್..." ಗೋಗರೆದ ಆತ. 
"ಬುದ್ಧಿ ಇರೋರು ದುಡಿದು ತಿಂದರೆ ಸಮಾಜಕ್ಕೆ, ನಮಗೆ, ನಿಮಗೆ ಎಲ್ಲ ಒಳ್ಳೆದು ಕಣಯ್ಯಾ.!!" ಎನ್ನುತ್ತಾ ಜೀಪಿನತ್ತ ಹೊರಟುನಿಂತ ಪ್ರತಾಪ್. 
"ಇನ್ನೂ ಹಾಗೇ ಇರುತ್ತೀವಿ ಸಾರ್.." ಭುಜ ಹಿಡಿದು ಮುರುಟಿಕೊಂಡ ಆತ.
ಮಳೆಯಲ್ಲಿ ತೊಯ್ದ ನಾಯಿಮರಿಗಳಂತೆ ಮುದುಡಿಕುಳಿತಿದ್ದರು ಜೀಪನಲ್ಲಿ ಇಬ್ಬರೂ. ಮತ್ತೆ ಊರಿನತ್ತ ಸಾಗಿತು ಜೀಪ್. ಊರೊಳಗೆ ಹೋಗುತ್ತಲೇ ಒಂದು ಟೀ ಸ್ಟಾಲ್ ಬಳಿ ಜೀಪ್ ನಿಲ್ಲಿಸಿ ಗುಟುಕು ಚಹಾ ಹೀರಿ ಅಲ್ಲೇ ಪಕ್ಕದಲ್ಲಿರುವ ಕಾಯಿನ್ ಬಾಕ್ಸ್ ಇಂದ ಅಂಬುಲೆನ್ಸ್ ಗೆ ಫೋನ್ ಮಾಡಿ ಸಮುದ್ರದ ಹತ್ತಿರ ಯಾರೋ ಗುಂಡೇಟು ತಿಂದು ಬಿದ್ದಿದ್ದಾರೆ ಬೇಗ ಬನ್ನಿ ಎಂದಷ್ಟೆ ಹೇಳಿ ಕರೆ ಕಟ್ ಮಾಡಿದ. 
ಸರಿಯಾಗಿ ಮೂರು ಘಂಟೆಗೆ ಕೋರ್ಟ್ ಬಳಿ ಬಂದ ಪ್ರತಾಪ್. ನಾಲ್ಕು ಘಂಟೆಗೆಲ್ಲಾ ಜಡ್ಜಮೆಂಟ್ ಹೊರಬಂದಿತ್ತು. ಅಪರಾಧಿಗಳು ತಪ್ಪೊಪ್ಪಿಕೊಂಡಿದ್ದರಿಂದ ಮೂರು ವರ್ಷದ ಸಜೆ ನೀಡಿತ್ತು ಕೋರ್ಟ್. ಕೋರ್ಟಿನ ಹಾಲಿನಲ್ಲಿ ರಿವಾಲ್ವರ್ ಸವರುತ್ತ ಕುಳಿತಿದ್ದ ಪ್ರತಾಪ್ ಅಷ್ಟೆ.
ಕೋರ್ಟ್ ನಿಂದ ಹೊರಬೀಳುತ್ತಲೇ ಪ್ರತಾಪನ ಮೊಬೈಲ್ ಸದ್ದಾಯಿತು. ಅತ್ತ ಕಡೆಯಿಂದ ಮಾತು ಕೇಳುವ ಮುನ್ನವೇ "ಅದೇನಾಯ್ತು ಗೊತ್ತಿಲ್ಲ ಸರ್ ಕೋರ್ಟಿನಲ್ಲಿ ಅವರೇ ತಪ್ಪೊಪ್ಪಿಕೊಂಡುಬಿಟ್ಟರು. ಇನ್ನಿಬ್ಬರನ್ನು ಅವರ ಏರಿಯಾದಲ್ಲಿ ಬಿಟ್ಟು ಬಂದಿದ್ದೆ. ಏನೋ ಹಳೆ ವೈಷಮ್ಯವಂತೆ, ಯಾರೋ ಗುಂಡು ಹಾರಿಸಿದ್ದಾರಂತೆ. ಬೇಗ ಹಿದಿದುಬಿಡುತ್ತೇನೆ ಅವರು ಯಾರೇ ಆಗಿರಲಿ!! ನಿಮ್ಮ ಕಡೆಯವರನ್ನು ಮೈ ಮುಟ್ಟಿದರೆ ಸುಮ್ಮನಿರುತ್ತೀನಾ!?" ಹೇಳುತ್ತಲೇ ಇದ್ದ ಪ್ರತಾಪ್. ಆ ಕಡೆಯಿಂದ ಫೋನ್ ಇರಿಸಿದ ಸದ್ದು. ನಸು ನಕ್ಕ ಪ್ರತಾಪ್.
ಅಷ್ಟರಲ್ಲಿ ಕಮಿಷನರ್ ಫೋನ್. "ಒಳ್ಳೆ ಕೆಲಸ ಮಾಡಿದ್ದೀಯಾ ಪ್ರತಾಪ್!! ನಿಮ್ಮಂತವರು ಬೇಕು ಡಿಪಾರ್ಟ್ ಮೆಂಟ್ ಗೆ. ಇವತ್ತೇ ಪ್ರಮೋಷನ್ ಅರ್ಜಿ ಹಾಕು. ಇನಸ್ಪೆಕ್ಟರ್ ಮಾಡೋಣ ನಿನ್ನ..!! " ಎಂದರು.
"ಮತ್ತೆ ಈಗಿನ ಇನಸ್ಪೆಕ್ಟರ್??" 
"ನೀರಿಲ್ಲದ ಜಾಗ ಬೇಕಾದಷ್ಟಿದೆ. ಟ್ರಾನ್ಸಫರ್ ಮಾಡಿದರಾಯ್ತು.ನಮ್ಮ ಹುಡುಗ ನೀನು, ಚೆನ್ನಾಗಿರಬೇಕು.." ಫೋನ್ ಇರಿಸಿದ ಸದ್ದು.
ದೇಶದಲ್ಲಿ ರಾಜಕೀಯ ಕೇವಲ ರಾಜಕೀಯವಾಗಿರದೆ ಸರ್ಕಾರಿ ನೌಕರಿಗಳಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದು ಬೇಸರಗೊಂಡ ಪ್ರತಾಪ್. 
ಸರ್ಕಾರಿ ಕೆಲಸ ರಾಜಕೀಯ ಬಿಗಿಮುಷ್ಠಿಯಿಂದ ಬೇರೆಯಾಗಿ ಕೆಲಸದಲ್ಲಿರುವವರು ಕೇವಲ ದೇಶಕ್ಕಾಗಿ, ನನ್ನವರು, ತಮ್ಮವರು ಎಂಬುದನ್ನು ಬಿಟ್ಟು ಕೇವಲ ದೇಶಕ್ಕಾಗಿ ದುಡಿದಿದ್ದರೆ ....
ತಲೆ ಕೊಡವಿದ ಪ್ರತಾಪ್. ಯೋಚನೆಗೂ ವಾಸ್ತವಕ್ಕೂ ಇರುವ ಅಂತರವದು.
ಸಿಳ್ಳು ಹಾಕುತ್ತಾ ಜೀಪ್ ಏರಿದ ಪ್ರತಾಪ್. ಜೀವನದ ಮೊದಲ ಥ್ರಿಲ್ ಇದು..!! ಇದಕ್ಕೆಲ್ಲಾ ಕಾರಣ ಶಾಸ್ತ್ರಿ.
ಶಾಸ್ತ್ರಿ ಎಂದು ನೆನಪಾದೊಡನೆ ಹೌದಲ್ಲಾ ಇದಕ್ಕೆಲ್ಲಾ ಕಾರಣಕರ್ತ ಶಾಸ್ತ್ರಿ. ಕೇವಲ ಐದು ನಿಮಿಷದಲ್ಲಿ ತನ್ನ ಸ್ಥಿತಿ ಅರ್ಥಮಾಡಿಕೊಂಡು, ಗೇಮ್ ಪ್ಲಾನ್ ಅರಿತುಕೊಂಡು ಅದಕ್ಕೊಂದು ಪ್ರತಿವ್ಯೂಹ ಸೃಷ್ಟಿಸಿದ ಶಾಸ್ತ್ರಿ!! ಇಂಟರೆಸ್ಟಿಂಗ್ ಕ್ಯಾರೆಕ್ಟರ್. ಅವನಿಗೊಂದು ಥ್ಯಾಂಕ್ಸ್ ಹೇಳಿ ಅವನ ಫ್ರಾಡ್ ಕಥೆ ಕೇಳಬೇಕು ಎಂದುಕೊಂಡು ಗಾಡಿ ಮುನ್ನಡೆಸಿದ ಪ್ರತಾಪ್. 
ಶಾಸ್ತ್ರಿಯೆಂಬ ಮಹಾಚತುರ ಮುಂದೊಂದು ದಿನ ಇಲ್ಲದ ತಲೆಬಿಸಿಯಾಗಿ ತನ್ನೆದುರು ನಿಲ್ಲುತ್ತಾನೆ ಎಂಬ ಸಣ್ಣ ಸಂದೇಹವಾದರೂ ಆ ಹೊತ್ತಿನಲ್ಲಿ ಹೇಗೆ ಬರಲು ಸಾಧ್ಯ ಪ್ರತಾಪ್ ಗೆ..!?

                              ...............................ಮುಂದುವರೆಯುತ್ತದೆ..............................

ಖತರ್ನಾಕ್ ಕಾದಂಬರಿ ಅಧ್ಯಾಯ 3

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...

                                                               ಅಧ್ಯಾಯ 3


ಪಳ್ ಎಂದು ಗಾಜು ಒಡೆದ ಸದ್ದು. ಹಿಂದೆಯೇ ಜನರ ಚಿತ್ಕಾರ. ಬುಲೆಟ್ ಪ್ರೂಫ್ ಗಾಜಿನ ಹಿಂದೆ ಇದ್ದೇನೆ ಎಂಬ ಪ್ರಿಯಂವದಾ ರಾಜ್ ಳ ನಂಬಿಕೆ ಒಂದು ಕ್ಷಣದಲ್ಲಿ ಸುಳ್ಳಾಗಿತ್ತು.
ಪ್ರಿಯಂವದಾ ರಾಜ್!! 
ಹಿಂದೂಸ್ಥಾನದಲ್ಲಿ ಅವಳನ್ನು ಗೊತ್ತಿಲ್ಲದೇ ಇರುವವರೇ ಇಲ್ಲ. ಅವರಲ್ಲಿ ಹಲವರು ಪ್ರಿಯಂವದಾಳನ್ನು ಪ್ರೀತಿಸುತ್ತಾರೆ, ಪೂಜಿಸುತ್ತಾರೆ ಅಥವಾ ಆರಾಧಿಸುತ್ತಾರೆ ಇನ್ನುಳಿದವರು ಅವಳನ್ನು ದ್ವೇಷಿಸುವ, ಕಾಲೆಳೆಯುವ ಅವಳ ಮೇಲೆ ಹೊಟ್ಟೆ ಕಿಚ್ಚು ಪಡುವ ಜನರು. ಇವರನ್ನು ಬಿಟ್ಟರೆ ಅವಳನ್ನು ತನಗೆ ಗೊತ್ತಿಲ್ಲ ಹೇಳುವವರು ಯಾರೂ ಇಲ್ಲ. ಅದು ಅವಳ ಶಕ್ತಿ. 
ಬಾಲಿವುಡ್ ನಟಿಮಣಿಯರಿಗಿಂತ, ಕಾವಿ ತೊಟ್ಟ ಸನ್ಯಾಸಿಗಳಿಗಿಂತಲೂ ಅವಳು ಹೆಚ್ಚು famous. ದೇಶವೇ ಅವಳ ಕೈಗೊಂಬೆ ಎಂದರೂ ಅತಿಶಯೋಕ್ತಿಯಿಲ್ಲ. ಅವಳು Queen ಅಲ್ಲ, ಬದಲಾಗಿ King Maker. ಪಕ್ಷ ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷವಾಗಿರಲಿ ಅವಳಿಗೆ ಅದು ಸಮಸ್ಯೆಯೇ ಅಲ್ಲ. ಅವಳು ಪಕ್ಷದಲ್ಲಿ ಕುಳಿತು ದೇಶವನ್ನು ಆಳುವುದಿಲ್ಲ. ಪಕ್ಷದಿಂದ, ಪದವಿಯಿಂದ ಹೊರಗುಳಿದು ದೇಶ ಆಳುವವರನ್ನು ಆಳುತ್ತಾಳೆ. ಅವಳು ದೇಶ ಮಾರುತ್ತೇನೆ ಎಂದರೂ ಅವಳಿಗೆ ಜೈ ಹೇಳುವ, ತೋರಿಸಿದಲ್ಲಿ ಸಹಿ ಮಾಡುವ ಮುಖಂಡರೇ ಪಕ್ಷದಲ್ಲಿ ತುಂಬಿದ್ದಾರೆ. 
ಅಂತಹ ಮಾಯೆ ಅವಳೇನು ಮಾಡಿದ್ದಾಳೆ ಎಂದು ಕೇಳಿದರೆ, ಅದು ತಿಳಿದಿರುವುದು ಒಬ್ಬರಿಗೆ ಮಾತ್ರ. ಅದು ಸ್ವತಃ ಪ್ರಿಯಂವದಾ ರಾಜ್ ಗೆ. ಅವಳಷ್ಟು ಗುಪ್ತ, ಗುಪ್ತ. ದೇಶದ ಎಲ್ಲ ಪ್ರಜೆಗಳಿಗೂ ಅವಳು ಗೊತ್ತು. ಆದರೆ ಅವಳನ್ನು ಅರ್ಥಮಾಡಿಕೊಂಡಿರುವುದು ಅವಳು ಮಾತ್ರ. 
ಇದು ಅವಳ ಯುಕ್ತಿ. ಯುಕ್ತಿ ಮತ್ತು ಶಕ್ತಿಯ ಮಿಲನವೇ ಅವಳನ್ನು ಇಷ್ಟು ದಿನ ಬದುಕಿಸಿದ್ದು, ದೇಶವನ್ನು ಆಳಿಸಿದ್ದು.
ಪ್ರಿಯಂವದಾ ರಾಜ್ ಬೆಳಿಗ್ಗೆ ಏಳುವಾಗಿನಿಂದ ರಾತ್ರಿ ಮಲಗುವವರೆಗೂ ಆಕೆಯನ್ನು ತನ್ನ ಕಣ್ಗಳಂತೆ ಕಾಯುವ ಸಮ್ಮಿಶ್ರನಿಗೂ ಕೂಡ ಅವಳ ವಿಜಯದ ಹಿಂದಿನ ರಹಸ್ಯ, ರಹಸ್ಯವಾಗಿಯೇ ಉಳಿದಿತ್ತು. 
ಸಮ್ಮಿಶ್ರ ಆಕೆಯ ಬಳಿ ಡ್ರೈವರ್ ಕಂ Secuirity Chief ಆಗಿ ಸೇರಿಕೊಳ್ಳುವುದಕ್ಕಿಂತ ಮೊದಲು ತನ್ನ ಸುರಕ್ಷತೆಯನ್ನು ತಾನೇ ನೋಡಿಕೊಳ್ಳುತ್ತಿದ್ದಳು ಪ್ರಿಯಂವದಾ. ಜಗತ್ತನ್ನು ನಂಬಿಸಬೇಕೆ ಹೊರತು ತನ್ನನ್ನು ಬಿಟ್ಟು ಜಗತ್ತಿನಲ್ಲಿ ಇನ್ಯಾರನ್ನು ನಂಬಬಾರದು ಎಂದು ಅವಳು ಹಾಕಿಕೊಂಡಿದ್ದ ಸಿದ್ಧಾಂತವಾಗಿತ್ತು. ಹಾಗೆಯೇ ಬದುಕಿದ್ದಳು ಕೂಡ, ಹಾಗಾಗಿಯೇ ಬದುಕಿದ್ದಳು ಕೂಡಾ.
ಸಮ್ಮಿಶ್ರ ಪೋಲಿಸ್ ಡಿಪಾರ್ಟಮೆಂಟ್ ಸೇರಿದ ಹೊಸತದು. ಏನಾದರೂ ಮಾಡುವ ಛಲವಿತ್ತು, ಮಾಡಬೇಕೆಂಬ ಮನಸ್ಸಿತ್ತು. ಅದೇ ಸಮಯದಲ್ಲಿ ನಡೆದಿತ್ತು ಈ ಘಟನೆ. 
ಪ್ರಿಯಂವದಾ ರಾಜ್ ಅಂದು ಜನರನ್ನು ಉದ್ಧೇಶಿಸಿ ಮಾತನಾಡುವ ಕಾರ್ಯಕ್ರಮವಿತ್ತು. ಅದರ ಪೂರ್ತಿ ವ್ಯವಸ್ಥೆ ಹೀಗೇ ಇರಬೇಕೆಂದು ವ್ಯೂಹ ರಚಿಸಿದವಳು ಪ್ರಿಯಂವದಾ. ಅವಳು ಕೇವಲ ನಾಲ್ಕು ಘಂಟೆ ಮಲಗುವುದಷ್ಟೆ. ಒಬ್ಬ ಉತ್ತಮ ಚೆಸ್ ಪ್ಲೇಯರ್ ನ ಮೆದುಳು, ಎದುರಾಳಿಯ ಯಾವ ಕಾಯಿಗೆ ತಾನು ಯಾವ ಕಾಯಿ ನಡೆಸಬೇಕು ಎಂದು ಯೋಚಿಸುತ್ತದೆ. ಇನ್ನೂ ಉತ್ತಮ ಆಟಗಾರ ತಾನು ಯಾವ ಕಾಯಿ ನಡೆಸಿದರೆ ಎದುರಾಳಿ ಯಾವ ಕಾಯಿ ನಡೆಸುತ್ತಾನೆ ಎಂದು ಯೋಚಿಸುತ್ತಾನೆ. ಗೆಲ್ಲಲೇ ಬೇಕೆಂದು ಶುರುವಾಗುವ ಆಟ, ಸ್ವಲ್ಪ ಹಿನ್ನಡೆಯಾದರೆ ಡ್ರಾಗೆ ಒಪ್ಪಿಕೊಳ್ಳುವುದು ಲೇಸೆಂದು ಯೋಚಿಸಿ, ಸೋಲಿನ ಬಾಗಿಲಿಗೆ ಬಂದು ನಿಲ್ಲುವ ಆಟಗಾರನಂತೆ ಅವಳು ಯಾವತ್ತೂ ವರ್ತಿಸಿರಲಿಲ್ಲ. ಆ ಒಂದು ದಿನದ ಹೊರತಾಗಿ.
ಅವಳು ಆಟವನ್ನು ಯಾವತ್ತೂ ಸೋತೆ ಇಲ್ಲ. ಜೀವನವೆಂಬ ಚದುರಂಗದಲ್ಲಿ ಕೇವಲ ಎದುರಾಳಿಯ ಮತ್ತು ತನ್ನ ಆಟಗಳನ್ನಷ್ಟೆ ನಿಯಂತ್ರಿಸುವುದಿಲ್ಲ ಆಕೆ. ಅಗತ್ಯಬಿದ್ದರೆ ಆಟದ ನಿಯಮಗಳನ್ನು, ಮನೆಗಳನ್ನೇ ಬದಲಾಯಿಸುವ ಚತುರೆ. ಅಂದು ಎಡವಿದ್ದಳು.
ಹೋಗುತ್ತಿರುವುದು ತುಂಬ ದೂರದ ಹಳ್ಳಿಯಾಗಿರುವುದರಿಂದ ಅಷ್ಟೆನೂ Risk ಇಲ್ಲ ಎಂಬ ಭಾವನೆ ಮೂಡಿತ್ತು ಅವಳಲ್ಲಿ. ಅದೇ ಅವಳ ವೃತ್ತಿ ಜೀವನದಲ್ಲಿ ಸಮ್ಮಿಶ್ರನನ್ನು ಜೊತೆಯಾಗುವಂತೆ ಮಾಡಿದ್ದು.
ಕಾರ್ಯಕ್ರಮ ಪ್ರಾರಂಭವಾದ ಹತ್ತು ನಿಮಿಷಗಳಲ್ಲಿ ಏಳೆಂಟು ಜನರ ಗುಂಪೊಂದು ಪ್ರಿಯಂವದಾ ರಾಜ್ ಗೆ ಧಿಕ್ಕಾರ ಎಂದು ಕೂಗುತ್ತಾ ಜನರ ಮಧ್ಯದಿಂದ ಎದ್ದು ಬಂದಿತು. ರಾಜಕೀಯದಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ವಿರೋಧ ಪಕ್ಷದವರ ಕೈವಾಡವಿದ್ದರೆ, ಇನ್ನು ಕೆಲವೊಮ್ಮೆ ಸ್ವತಃ ತಾವೇ ಇಂತಹ ಗೋಲ್ ಮಾಲ್ ಗಳನ್ನು ನಡೆಸಬೇಕಿರುತ್ತದೆ. 
ಅಂತಹದೇ ಏನೋ ನಡೆಯುತ್ತಿದೆ ಎಂದುಕೊಂಡಳು. ಮಪ್ತಿಯಲ್ಲಿ ತಿರುಗುತ್ತಿದ್ದ ಪೋಲಿಸರು ಹಾಗೂ ಇಂಟಲಿಜನ್ಸ್ ವಿಂಗ್ ನವರು ಕೂಡ ಹಾಗೆಂದೇ ಭಾವಿಸಿ ನಿಧಾನವಾಗಿ ಕಾರ್ಯಪ್ರವೃತ್ತರಾಗುತ್ತಿದ್ದರು. ಸುತ್ತಮುತ್ತಲಿದ್ದ ಜನರು ಕೂಡ ಏನೋ ತಮಾಷೆ ಜರುಗಲಿದೆ ಎಂದು ಕುತೂಹಲದಿಂದ ನೋಡಿದರೆ, ಕೆಲವರು ಹಿಂದಿನಿಂದ ಚಪ್ಪಾಳೆ ಹೊಡೆದು, ಕೇಕೆ ಹಾಕಿ ಕೂಗತೊಡಗಿದರು. 
ಪರಿಸ್ಥಿತಿಯನ್ನು ಚೆನ್ನಾಗಿಯೇ ತಮ್ಮ ಉಪಯೋಗಕ್ಕೆ ಬಳಸಿಕೊಂಡಿತು ಆ ಗುಂಪು. ಸಮ್ಮಿಶ್ರ ಅದನ್ನು ಗಮನಿಸಿದ್ದ. ಕಾರ್ಯಕ್ರಮಕ್ಕೆ ಕಾವಲಾಗಿ ಅಂದು ಆತನೂ ಬಂದಿದ್ದ. ಅವಳ ಎಡಬದಿಗೆ ಮೈಕ್ ನ ಪಕ್ಕ ನಿಂತು ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಇದ್ದಕ್ಕಿದ್ದಂತೆ ಏಳೆಂಟು ಜನ ಸ್ಟೇಜಿನತ್ತ ಬರುವುದನ್ನು ನೋಡಿ ಬಾಲ ಮೆಟ್ಟಿಸಿಕೊಂಡ ಸರ್ಪದಂತೆ ಚುರುಕಾಗಿದ್ದ. ಗುಂಪಿನ ಮಧ್ಯದಲ್ಲಿ ಸಂಶಯಾಸ್ಪದವಾಗಿ ಕಣ್ಣುಗಳನ್ನು ಹೊರಳಿಸುತ್ತಾ ಬರುತ್ತಿರುವ ವ್ಯಕ್ತಿ ಸಮ್ಮಿಶ್ರನನ್ನು ಮತ್ತೂ Alert ಮಾಡಿದ.
ನಿಷ್ಠೆಯಿಂದ ಪೋಲಿಸ್ ತರಬೇತಿ ಪಡೆದವಗೆ ಕಳ್ಳರನ್ನು ಗುರುತಿಸುವುದು, ಅವರಿಂದ ನಿಜ ಹೊರಡಿಸುವುದು ದೊಡ್ಡ ವಿಷಯವೇ ಅಲ್ಲ.
ರಾಜ್ ಎರಡು ಕ್ಷಣ ಮಾತು ನಿಲ್ಲಿಸಿ ಮತ್ತೆ ಮುಖದಲ್ಲಿ ಅದೇ ನಗು ತಂದುಕೊಂಡು ಶಾಂತಿ ಕಾಯ್ದುಕೊಳ್ಳುವಂತೆ ಕೈ ಬೀಸತೊಡಗಿದ್ದಳು. ಕಾವಲುಪಡೆಯ ಪೋಲಿಸರು ಗುಂಪನ್ನು ಚದುರಿಸಲು ಕಾರ್ಯೋನ್ಮುಕ್ತರಾದರು.
ಇನ್ನು ತಡ ಮಾಡುವುದು ಸರಿಯಲ್ಲ ಎಂದು ಪ್ಯಾಂಟಿನ ಕಿಸೆಯಲ್ಲಿದ್ದ ರಿವಾಲ್ವರ್ ತೆಗೆದು ಪ್ರಿಯಂವದಾ ಕಡೆಗೆ ಗುರಿಯಿಟ್ಟ ಗುಂಪಿನ ನಡುವೆ ಬರುತ್ತಿದ್ದ ಆಗುಂತಕ. ಹದಿನೈದು ಮೀಟರ್ ಅಂತರ.
ಪ್ರಿಯಂವದಾ ತನ್ನ ನೀಲಿ ಕಣ್ಣುಗಳನ್ನು ರೆಪ್ಪೆ ಮಿಟುಕಿಸದೆ ಆ ಆಗುಂತಕನ ಕಣ್ಣುಗಳಲ್ಲಿ ಸೇರಿಸಿಬಿಟ್ಟಳು. ಅದು.. ಅವಳ ಧೈರ್ಯ. ಗೊತ್ತವಳಿಗೆ ಯಾವುದೇ ಕ್ಷಣದಲ್ಲಿ ಬುಲೆಟ್ ತನ್ನೆಡೆಗೆ ಚಿಮ್ಮಬಹುದು ಎಂದು. ಆತನ ಕೈಯಲ್ಲಿದ್ದ ರಿವಾಲ್ವರ್, ಆತನ ಮತ್ತು ತನ್ನ ನಡುವೆ ಇರುವ ಅಂತರ, ಆತ ಗುಂಡು ಸಿಡಿಸಿಯೇ ಬಿಟ್ಟರೆ ತಾನು ಬಗ್ಗಬೇಕೋ ಅಥವಾ ವಾಲಬೇಕೋ ಎಂಬ ಎಲ್ಲ ಯೋಚನೆಗಳನ್ನು ಬದಿಗಿರಿಸಿ ತನ್ನ ದೃಷ್ಟಿಯನ್ನು ಅವನ ದೃಷ್ಟಿಯಲ್ಲಿ ಬೆಸೆದು ಬಿಟ್ಟಿದ್ದಳು. 
ಅಲ್ಲಿ ನಡೆದಿರುವ ಪ್ರತಿಯೊಂದೂ ತಪ್ಪುಗಳು ಅವಳ ತಲೆಯಲ್ಲಿ ಹಾದುಹೋದವು. ಇಷ್ಟು ಪಕಂಡ್ಬಂದಿ ವ್ಯವಸ್ಥೆಯಲ್ಲಿ ಒಬ್ಬ ರಿವಾಲ್ವರ್ ಹಿಡಿದು ಒಳಗೆ ಬಂದಿದ್ದಾನೆ ಎಂದರೆ? ಅಷ್ಟೆ ಅಲ್ಲ.. ಸ್ಟೇಜಿನಿಂದ 50 ಮೀಟರ್ ದೂರದಿಂದ ಶುರುವಾಗಬೇಕಾದ ಆಸನ ವ್ಯವಸ್ಥೆ ಅದು ಹೇಗೆ ಇಷ್ಟು ಹತ್ತಿರ ಬಂದಿದೆ? ಅವಳ ಮುಖದಲ್ಲಿ ಅವ್ಯಕ್ತ ಭಾವವೊಂದು ಹಾದುಹೋಯಿತು. ಬಂದ ಇಷ್ಟು ಹೊತ್ತಿನಲ್ಲಿ ಈ ವಿಷಯಗಳನ್ನು ತಾನೇಕೆ ಗಮನಿಸಲಿಲ್ಲ ಎಂಬ ಭಾವ. "ಇಷ್ಟು ಮೈಮರೆತರೆ ಹೇಗೆ ಪ್ರಿಯಂವದಾ?" ಎಂದು ಪ್ರಶ್ನಿಸಿಕೊಳ್ಳುವಾಗಲೇ ಅವಳ ಬೆನ್ನಹುರಿಯಲ್ಲಿ ಸಣ್ಣ ಹೆದರಿಕೆಯ ಭಾವ ಮೂಡಿತ್ತು. ಅವಳು ಪ್ರಿಯಂವದಾ ರಾಜ್.. ಮುಖದಲ್ಲಿ ಮಂದಹಾಸ ಮೂಡಿಸಿಕೊಂಡೇ ಇದ್ದಳು.
ತಮ್ಮ ತಪ್ಪನ್ನು ನಾವು ಎಷ್ಟು ಬೇಗ ತಿಳಿಯುತ್ತೇವೆ ಎಂಬುದರ ಮೇಲೆ, ಬೇರೆಯವರು ನಮ್ಮನ್ನು ಎಷ್ಟು ಹೊತ್ತು ಮೋಸ ಮಾಡುತ್ತಾರೆ, ಮಾಡಿದ್ದಾರೆ ಎಂಬುದು ನಿರ್ಧಾರವಾಗುತ್ತದೆ. 
ಹತ್ತು ನಿಮಿಷ ಮೈ ಮರೆತಿದ್ದಕ್ಕೆ You have to pay Priyamvada ಎಂದುಕೊಳ್ಳುತ್ತಿರುವಾಗಲೇ ಅವಳ ಮುಖದ ಮಂದಹಾಸ ಮಾಸತೊಡಗಿತು. ಅದಕ್ಕೂಮುನ್ನ ಆಗುಂತಕನ ಕೈಲಿದ್ದ ರಿವಾಲ್ವರ್ ಸಿಡಿಯಿತು. ಕ್ಷಣದಲ್ಲಿ ನಡೆದುಹೋಗಿತ್ತು ಇಷ್ಟು. 
ಅದೇ ಒಂದು ಕ್ಷಣದ ಮೊದಲು ಆಗುಂತಕನ ಮತ್ತು ಪ್ರಿಯಂವದಾಳ ಕಣ್ಣುಗಳು ಸಂಧಿಸಿದ್ದವು. ಆಕೆಯ ಕಡೆಗೆ ಗುರಿಯಿಟ್ಟಿರುವ ರಿವಾಲ್ವರ್ ತನ್ನ ಕೈಲಿ ನೋಡಿ ಕೂಡ, ಹಾಗೆ ಕಣ್ಣೊಳಗೆ ಕಣ್ಣಿಟ್ಟು ಮುಗುಳ್ನಗುವ ಚಾಲಾಕಿ ಹೆಣ್ಣು ಪ್ರಿಯಂವದಾ ಎಂದು ಆತ ಎಣಿಸಿರಲಿಲ್ಲ. 
ಅವಳ ಆ ನೋಟ, ಮುಗುಳ್ನಗು ಅರ್ಧ ಕ್ಷಣ ಅವನನ್ನು Confuse ಮಾಡಿತ್ತು. ಅದು ಪ್ರಿಯಂವದಾಳಿಗೆ ಕೂಡ ಗೊತ್ತು. 
ಪೆನಾಲ್ಟಿ ಕಾರ್ನರ್ ನ ಗೋಲ್ ತಡೆಯಲು ನಿಲ್ಲುವ ಕೀಪರ್ ನಂತಿತ್ತು ಅವಳ ಮನಸ್ಥಿತಿ. ಗುಂಡು ಚಿಮ್ಮಿದ ತಕ್ಷಣ ಎಡಕ್ಕಾ? ಬಲಕ್ಕಾ? ಅಥವಾ ಇಲ್ಲಿಯೇ ಕುಳಿತುಬಿಡಲೇ? ಎದುರಾಳಿ ತನ್ನ ನಡೆ ಮೊದಲೇ ಊಹಿಸಿದರೆ..? ಎದುರಿಗಿರುವ ಬುಲೆಟ್ ಪ್ರೂಫ್ ಗಾಜು ತನಗೆ ಎಷ್ಟು ಸಹಾಯ ಮಾಡಬಲ್ಲದು. Think ಪ್ರಿಯಂವದಾ Think. ಕೇವಲ ಒಂದು Goal ನ ಮಾತಲ್ಲ, ಸಾವಿನ ಬಾಗಿಲದು. ಕಥೆಯೇ ಮುಗಿದುಹೋಗುತ್ತದೆ. ಪ್ರಿಯಂವದಾ ಭೂತಕಾಲ ಸೇರಿಹೋಗುತ್ತಾಳೆ. NO. ಹಾಗಾಗಕೂಡದು. ಅದೇ ಕ್ಷಣ ಸಿಡಿದಿತ್ತು ಗುಂಡು. ಪ್ರಿಯಂವದಾ ಎಡಕ್ಕೆ ಬಾಗಿದಂತೆ ಮಾಡಿ ಬಲಕ್ಕೆ ಸರಿದಳು.
ಎದುರಿಗಿದ್ದವನು ಕೂಡ Proffesional Killer. ಅವನು ಪ್ರಿಯಂವದಾಳ ಹವ್ಯಾಸ, ನಡೆದಾಡುವ ಶೈಲಿ, ಎಲ್ಲವನ್ನೂ ಮೊದಲೇ ತಿಳಿದುಕೊಂಡಿದ್ದ. ಪ್ರಿಯಂವದಾ ಎಡಗೈಲಿ ಬರೆಯುವವಳೆಂದು ತಿಳಿದುಕೊಂಡಿದ್ದ.
ಪ್ರಿಯಂವದಾ ಆತನ ಕಣ್ಣುಗಳಲ್ಲಿ ಕಣ್ಣಿಡದಿದ್ದರೆ, ಅದೊಂದು ಮುಗುಳ್ನಗು ಮಿಂಚಿ ಮರೆಯಾಗದಿದ್ದರೆ ಯಾವಾಗಲೋ ಆಕೆಯ ತಲೆಯಲ್ಲಿ ಗುಂಡು ಇಳಿದಿರುತ್ತಿತ್ತು. 
ಹೊತ್ತಲ್ಲದ ಹೊತ್ತಿನಲ್ಲಿ ಆಕೆಯ ನಗು. ಎಂಥದೇ ವ್ಯಕ್ತಿಯಾದರು ಸಾಯುವ ಕ್ಷಣ ಬಂದಾಗ ಹೀಗೆ ನಗಲಾರ. ಏನು ನಡೆಯುತ್ತಿದೆ ಎಂದು ಆಗುಂತಕನ ಮನಸ್ಸು ಒಮ್ಮೆ ಕಕ್ಕಾಬಿಕ್ಕಿಯಾಯಿತು. ಅವಳನ್ನು ಕೊಂದ ಕ್ಷಣ ತಾನು ಬದುಕುವುದಿಲ್ಲ ಎಂದು ಗೊತ್ತವನಿಗೆ. ಆಕೆಯನ್ನು ಕೊಲ್ಲದೆ ತಾನು ಸಾಯುವುದಿಲ್ಲ. ರಿವಾಲ್ವರ್ ನಿಂದ ಹೊರಬಂದ ಬುಲೆಟ್ ಗಿಂತ ವೇಗವಾಗಿ ಯೋಚಿಸುತ್ತಿದ್ದ ಆತನು ಕೂಡ. ಈ ಅರೆಗಳಿಗೆ ಸಾಕು ಅವಳಿಗೆ ತಪ್ಪಿಸಿಕೊಳ್ಳಲು, ಇಲ್ಲವೇ ಅವಳು ನನ್ನನ್ನು ಸಂದಿಗ್ಧದಲ್ಲಿ ಸಿಲುಕಿಸಿದಾಗ ಅವಳ Secuirity Team ನನ್ನ ಹೊಡೆದು ಕೆಡವಲು....!? ಅರ್ಧದಲ್ಲೇ ನಿಂತಿತು ಅವನ ಯೋಚನೆ. 
ಟ್ರಿಗರ್ ಒತ್ತಿ ಬಿಟ್ಟ ಒಮ್ಮೆಲೇ.. ಟಪ್.. ಅದರ ಹಿಂದೆಯೇ ಮತ್ತೊಂದು ಗುಂಡಿನ ಸದ್ದು. ಆ ಕ್ಷಣದಲ್ಲಿ ಆಕೆಗೆ ತಪ್ಪಿಸಿಕೊಳ್ಳಲು ಯಾವುದೇ ದಾರಿ ಇಲ್ಲ. ತನ್ನನ್ನು ಸಂದಿಗ್ಧಕ್ಕೆ ಸಿಲುಕಿಸುತ್ತಿದ್ದಾಳೆ ಎಂದು ತಿಳಿದ ಕೂಡಲೇ ಟ್ರಿಗರ್ ಅದುಮಿದ್ದ. ಕೇವಲ ಬೇಕಾಬಿಟ್ಟಿ ಟ್ರಿಗರ್ ಅದುಮಿರಲಿಲ್ಲ ಆತ. ಪ್ರಿಯಂವದಾ ಎಡಗೈಲಿ ಬರೆಯುತ್ತಾಳೆ. ಭಯದ ಸಮಯದಲ್ಲಿ ಮನುಷ್ಯನ ದೇಹ ಮೆದುಳಿನ ಸೂಚನೆಗಳಿಗಾಗಿ ಕಾಯದೆ ದೇಹದ ಯಾವ ಭಾಗ ಬೇಗ ಸ್ಪಂದಿಸುತ್ತದೋ ಹಾಗೆ ವರ್ತಿಸಿಬಿಡುತ್ತದೆ ಅಷ್ಟೆ. ಅವಳ ಎಡಗೈ ಮುಂದಾಗಿರುವುದರಿಂದ ಎಡಕ್ಕೆ ವಾಲುವುದು ಸಹಜ ಎಂದು ನಿರ್ಧರಿಸಿ ರಿವಾಲ್ವರ್ ಸ್ವಲ್ಪ ಎಡಕ್ಕೆ ಮಾಡಿ ಟ್ರಿಗರ್ ಒತ್ತಿದ್ದ. ಆತ ಊಹಿಸಿದಂತೆಯೇ ಅವಳು ಎಡಕ್ಕೆ ಬಾಗಿದಂತೆ ಮಾಡಿ ಬಲಕ್ಕೆ ಸರಿದುಬಿಟ್ಟಳು.
ಹೇಗೆ? ಹೇಗೆ ಸಾಧ್ಯ? ಪ್ರಿಯಂವದಾ ರಾಜ್ ಇಂಥ ಸಮಯದಲ್ಲಿ ಕೂಡ ನಿನ್ನ ಮೆದುಳು ದೇಹ ಒಂದಕ್ಕೊಂದು ಮಾತನಾಡಿಕೊಳ್ಳುತ್ತದೆಯೆಂದರೆ ಹ್ಯಾಟ್ಸ್ ಅಪ್ ಎಂದುಕೊಳ್ಳುತ್ತಲೇ ಮತ್ತೊಮ್ಮೆ ಟ್ರಿಗರ್ ಒತ್ತಬೇಕೆಂದಿರುವಾಗ ಎದುರಿನಿಂದ ಬಂದ ಬುಲೆಟ್ ಅವನ ಹಣೆಯಲ್ಲಿ ಹೊಕ್ಕಿತ್ತು. ಏನಾಯಿತು ಎಂದು ತಿಳಿಯಲು ಅವನಿಗೆ ಸಮಯ ತಾನೇ ಎಲ್ಲಿತ್ತು???
ಪ್ರಿಯಂವದಾಳ ಬಗ್ಗೆ ಅವನಲ್ಲಿ ಹುಟ್ಟಿದ ಮೆಚ್ಚುಗೆಯ ಭಾವವೇ ಅವನ ಕಣ್ಣಲ್ಲಿತ್ತು. ಆದರೆ ಅವಳನ್ನು ಬದುಕಿಸಿದ್ದು ಮಾತ್ರ ಆಕೆಯ ಬಹಳ ವರ್ಷಗಳ ಹಿಂದಿನ ಮುಂಜಾಗ್ರತೆ. 
ನಮ್ಮ ಕೈಗಳ ಬರಹದ ರೀತಿ, ಅಕ್ಷರಗಳ ವಿನ್ಯಾಸದ ಮೇಲೆ ವ್ಯಕ್ತಿತ್ವವನ್ನೇ ತಿಳಿಯಬಹುದು ಎಂದು ಆಕೆ ಓದಿದಾಗಿನಿಂದ ಬಲಗೈಲಿ ಬರೆಯುವುದನ್ನು ಬಿಟ್ಟು ಎಡಗೈಲಿ ಬರೆಯುವುದನ್ನು ರೂಢಿಸಿಕೊಂಡಿದ್ದಳು. ಅದು ಈಗಿನದಲ್ಲ, ಎಷ್ಟೊ ವರ್ಷಗಳ ಹಿಂದಿನ ಮಾತು.
ನಿಜವಾಗಿಯೂ ಆಕೆ ಬರೆಯುವುದೊಂದನ್ನು ಬಿಟ್ಟರೆ ಮತ್ತೆಲ್ಲ ರೈಟಿಯೇ. ಅದೇ ಅವಳನ್ನು ಉಳಿಸಿದ್ದು. ಆಗುಂತಕ ಬೇಸ್ತು ಬಿದ್ದಿದ್ದ. ಅವಳೇನಾದರೂ ಲೆಫ್ಟಿಯೇ ಆಗಿದ್ದರೆ ಅಂದಿಗೆ ಪ್ರಿಯಂವದಾಳ ಅಧ್ಯಾಯ ಮುಗಿದಿರುತ್ತಿತ್ತು. 
ಪ್ರಿಯಂವದಾಳ ಎಡ ಭುಜವನ್ನು ಸವರಿಕೊಂಡು ಹೋಗಿತ್ತು ಬುಲೆಟ್. ಗುಂಡಿನ ಸದ್ದು ಕೇಳಿಯೇ ಜನರೆಲ್ಲಾ ಕಕ್ಕಾಬಿಕ್ಕಿಯಾಗಿ ಓಡಿಹೋಗಿದ್ದರು. ಬಲಕ್ಕೆ ಸರಿದು ಡಯಾಸ್ ನ ಮರೆಯಲ್ಲಿ ಕುಳಿತಿದ್ದಳು ಪ್ರಿಯಂವದಾ. ಅವಳು ಬಗ್ಗಿದ ಕ್ಷಣವೇ ಮತ್ತೊಂದು ಗುಂಡು ಹಾರಿದ ಸದ್ದು. ಆಗುಂತಕ ತಾನು ಕಾಣದೇ ಮತ್ತೆ ಗುಂಡು ಹಾರಿಸುತ್ತಿದ್ದಾನೆ ಎಂದುಕೊಂಡಳು. ಅಷ್ಟರಲ್ಲಿ ಸೆಕ್ಯೂರಿಟಿ ಟೀಮ್ ಅವಳನ್ನು ಸುತ್ತುವರಿದು ನಿಂತಿದ್ದರು. 
ಮತ್ತೊಂದು ಗುಂಡು ಆಗುಂತಕನ ರಿವಾಲ್ವರ್ ನಿಂದಲ್ಲ ಬಂದದ್ದು. ಬದಲಾಗಿ ನಡೆದದ್ದೇ ಬೇರೆ...
ಸಮ್ಮಿಶ್ರ ಅನುಮಾನದಿಂದ ಗುಂಪಿನೆಡೆಗೆ ಬರುತ್ತಿದ್ದಾಗಲೇ ಅದೇ ಗುಂಪಿನ ಮಧ್ಯದಿಂದ ಬಂದ ಆಗುಂತಕ ರಿವಾಲ್ವರ್ ತೆಗೆದದ್ದು, ಗುಂಡು ಹಾರಿಸಿದ್ದು ನಡೆದು ಹೋಗಿತ್ತು. ಅಷ್ಟರಲ್ಲಿ ಸಮ್ಮಿಶ್ರ ಜನರ ನಡುವೆಯೇ ಗುಂಪಿನ ಹತ್ತಿರ ಬಂದುಬಿಟ್ಟಿದ್ದ. ನಡೆಯುತ್ತಿದ್ದ ಘಟನೆಗಳಿಂದ ಅವನ ದೇಹವು ಕೂಡ ಪ್ರಚೋದನೆಗೊಳಗಾಗಿ ಕೈಗೆ ರಿವಾಲ್ವರ್ ಡ್ರಾ ಮಾಡಿತ್ತು. ಗುಂಪಿನ ಮಧ್ಯದಿಂದ ಆತನ ರಿವಾಲ್ವರ್ ಸಿಡಿಯಲು ಮುಂಚೆ ಸಮ್ಮಿಶ್ರನ ಕೈಲಿ ರಿವಾಲ್ವರ್ ಬಂದಿತ್ತು. ಟ್ರಿಗರ್ ಒತ್ತಿದರೆ ಆಗುಂತಕನ ಕಥೆ ಮುಗಿದಿರುತ್ತಿತ್ತು. ಆದರೆ ಆದದ್ದೇ ಬೇರೆ. ಟ್ರೇನಿಂಗ್ ಟೈಮಿನಲ್ಲಿ ಸಮ್ಮಿಶ್ರ ಒಳ್ಳೆಯ ಶೂಟರ್, ಗುರಿಗಾರ ಎಂದೆಲ್ಲ ಬಿರುದು, ಪ್ರಶಸ್ತಿ ಪಡೆದಿದ್ದರೂ ಆತ ಹೊಡೆದಿದ್ದು ಕೇವಲ ರಟ್ಟಿಗೆ, ದೂರವಿಟ್ಟ ಬಾಟಲಿಗಳಿಗೆ. ಹೀಗೆ ಏಕಾಏಕಿ ಮನುಷ್ಯನನ್ನು ಸುಡಬೇಕೆಂದರೆ ಮನಸ್ಸು ಚಡಪಡಿಸಿತು. ಆ ಕ್ಷಣದಲ್ಲಿ ಆಗುಂತಕ ಟ್ರಿಗರ್ ಅದುಮಿದ್ದ. 
ಯಾವಾಗ ಆತ ಗುಂಡು ಹಾರಿಸಿದನೋ ಸಮ್ಮಿಶ್ರ ಟ್ರಿಗರ್ ಒತ್ತಿದ್ದ. ಬುಲೆಟ್ ಅವನ ಹಣೆಯನ್ನು ಛಿದ್ರ ಮಾಡಿತ್ತು. ಒಂದು ಸಣ್ಣ ನೋವಿನ ಆಕ್ರಂದನವೂ ಇಲ್ಲ. ಮರುಕ್ಷಣದಲ್ಲಿ ಯಾರು ಯಾರನ್ನು ತುಳಿದರೋ, ಸೇರಿದ ಸೇರಿಸಿದ ಜನರೆಲ್ಲ ಓಡತೊಡಗಿದರು.
ಎಲ್ಲ ಹತೋಟಿಗೆ ಬರುತ್ತಿದ್ದಂತೆ ಡಯಾಸ್ ಹಿಡಿದು ಮೆಲ್ಲನೆ ಎದ್ದು ನಿಂತಳು ಪ್ರಿಯಂವದಾ. ಮತ್ತೊಮ್ಮೆ ಆಘಾತವಾಯಿತು ಅವಳಿಗೆ. ಎಡಭುಜದಿಂದ ಸೋರುತ್ತಿದ್ದ ರಕ್ತದಿಂದಲ್ಲ, ಆಗುತ್ತಿರುವ ನೋವಿನಿಂದಲ್ಲ. ಅವಳಿಗೆ ಗೊತ್ತು ಸೋರಿದ ಒಂದೊಂದು ಹನಿ ರಕ್ತವನ್ನು vote ಆಗಿ ಹೇಗೆ ಪರಿವರ್ತಿಸಬಹುದೆಂದು. ತಾನು ಬುಲೆಟ್ ಪ್ರೂಫ್ ಗಾಜಿನ ಹಿಂದೆ ನಿಂತಿದ್ದೇನೆ ಎಂದು ಅವಳು ಹಾಗೆಯೆ ನಿಂತಿದ್ದರೆ ? ಎಂಬ ಯೋಚನೆಯೇ ಅವಳನ್ನು ಒಮ್ಮೆ ಅದುರಿಸಿತು.ಇಷ್ಟೆಲ್ಲಾ ಸಂಚು ನಡೆದಿದೆ ಆದರೂ ನನ್ನ ಗಮನಕ್ಕೆ ಬಂದಿಲ್ಲ.
ಪ್ರಿಯಂವದಾ ರಾಜ್.. ಮೊದಲ ಬಾರಿ ತನ್ನ ಮೇಲೆ ತಾನೇ ಶಂಕೆಗೊಂಡಳು. ಆ ನೋವಿನಲ್ಲೂ ಕೂಡ ಎರಡನೇ ಬುಲೆಟ್ ಹಾರಿದ್ದು ತಿಳಿದಿದೆ ಅವಳಿಗೆ. ನಗುನಗುತ್ತಲೇ ಮೂರ್ಚೆ ತಪ್ಪಿದಳು ಪ್ರಿಯಂವದಾ.
One and only King Maker...!!!
ಪ್ರಿಯಂವದಾ ರಾಜ್...
ಅದೇ ಕೊನೆ. ಆ ನಂತರ ನಡೆದ ಎಲ್ಲ ಸಭೆಗಳಲ್ಲೂ ಆಕೆ ಹೋಗುವ ಮುಂಚೆ ಗುಂಡು ಹೊಡೆದು ಡಯಾಸ್ ಪರೀಕ್ಷಿಸಿ ಇಡುತ್ತಾರೆ. ಒಮ್ಮೆ ಮಾಡಿದ ತಪ್ಪು ಮತ್ತೆ ಮಾಡುವವಳಲ್ಲ ಅವಳು. ಅವಳು ಹೋಗುವ ಕಾರಿನ ಗಾಜುಗಳು ಕೂಡ ಪರೀಕ್ಷಿಸಲ್ಪಡುತ್ತದೆ ದಿನಾಲೂ. ಈ ಘಟನೆ ನಡೆದು ಹತ್ತು ವರ್ಷದ ನಂತರ ರಾಜ್ ಗೆ ಗುರಿ ಹಿಡಿದು ಕೂಳಿತ ಗರುಡನಿಗೆ ಈ ವಿಷಯ ತಿಳಿದಿತ್ತೇ ?

ಭೂಗತ ಲೋಕದ ಸ್ನೈಪರ್ ಕಿಂಗ್ ಗರುಡ ತನ್ನೆಡೆಗೆ ಗುರಿ ಹಿಡಿದು ಕೂತು ಬಿಡುತ್ತಾನೆ ಎಂಬ ಸತ್ಯ ತಿಳಿದಿದ್ದರೆ ಪ್ರಿಯಂವದಾ ರಾಜ್ ಳ ಮುಖದಲ್ಲಿ ನಗು ಇರುತ್ತಿತ್ತಾ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು.





                                ...............................ಮುಂದುವರೆಯುತ್ತದೆ.............................. 

ಖತರ್ನಾಕ್ ಕಾದಂಬರಿ- ಅಧ್ಯಾಯ ೨

ಖತರ್ನಾಕ್ ಕಾದಂಬರಿ
ನಮ್ಮ ನಿಮ್ಮ ನಡುವೆ...                   

                                                                ಅಧ್ಯಾಯ ೨

"ಸಾರ್! ಸಾರ್!!" ಕೀರಲು ಧ್ವನಿಯಲ್ಲಿ ಕರೆದ ಕಾನಸ್ಟೇಬಲ್. ತಲೆ ಮೇಲೆ ಕೈ ಹೊತ್ತು ತಲೆ ತಗ್ಗಿಸಿ ಕುಳಿತಿದ್ದ ಸಬ್ ಇನಸ್ಪೆಕ್ಟರ್ ಪ್ರತಾಪ್. ಬಂದ ಧ್ವನಿಗೆ ತಲೆ ಎತ್ತಿ "ಏನಯ್ಯಾ ನಿಮ್ಮ ರಗಳೆ" ಎಂದು ರೇಗುವವನಿದ್ದ.
ಕಾನಸ್ಟೇಬಲ್ ಗಳ ಜೊತೆ ನಿಂತ ಆಗುಂತಕನನ್ನು ಕಂಡು ತನ್ನ ಅಸಹನೆಯನ್ನು ಮರೆಸಿಕೊಂಡು ಏನೆನ್ನುವಂತೆ ನೋಡಿದ ಅವರತ್ತ.
ಕಾನಸ್ಟೇಬಲ್ ಗಳು ಅವರ ಮಧ್ಯದಲ್ಲಿ ನಿಂತ ಮನುಷ್ಯನ ಕೆನ್ನೆಗೆ ಚೆನ್ನಾಗೇ ಬಾರಿಸಿದಂತಿತ್ತು. ಕೆನ್ನೆ ಕೆಂಪಾಗಿತ್ತು.
"ಸಾರ್!! ಅದೇ ಒಂದು ಫ್ರಾಡ್ ಕೇಸ್ ಬಂದಿತ್ತಲ್ಲ ಸಾರ್, ಇವನೇ ಸಾರ್!! ನಾಲ್ಕು ಕೊಟ್ಟು ಎಳ್ಕೋ ಬಂದ್ವಿ. ನಮ್ಮ ಸರಹದ್ದಲ್ಲಿ ಫ್ರಾಡ್ ಮಾಡಿದ್ರೆ ಬಿಟ್ಟು ಬಿಡ್ತಿವಾ ಸಾರ್!!" ಎಂದ. 
ಹೇಗಾದರೂ ಮಾಡಿ ಇನಸ್ಪೆಕ್ಟರ್ ಹತ್ತಿರ ಶಹಬ್ಬಾಶ್ ತಗೋ ಬೇಕು ಎಂಬ ಹುರುಪಿನಲ್ಲಿ ಚೆನ್ನಾಗಿ ಕೆನ್ನೆಗೂ ಬಾರಿಸಿದ್ದರು. 
ಪ್ರತಾಪ ಎದುರಿಗಿರುವ ವ್ಯಕ್ತಿಯನ್ನು ಅಪಾದ ಮಸ್ತಕ ನೋಡಿದ ಒಮ್ಮೆ. ಅವನ ಕಣ್ಣಲ್ಲಿ ಅಸ್ಥಿರತೆಯಾಗಲೀ, ಭಯವಾಗಲೀ ಕಂಡುಬರಲಿಲ್ಲ. ಮುಖ ನೋಡಿದರೆ ತುಂಬ ಲವಲವಿಕೆಯ ವ್ಯಕ್ತಿಯಂತೆ ಕಾಣುತ್ತಿದ್ದ ಆತ. ಹೀಗೆ ಒಮ್ಮೆಲೇ ಹೊಡೆದು, ಹಿಡಿದು ಎಳೆದು ತಂದಿದ್ದರಿಂದ ಸ್ವಲ್ಪ ಕಿರಿಕಿರಿಗೊಂಡವನಂತೆ ಕಾಣುತ್ತಿದ್ದ.
"ಏನಯ್ಯಾ ನಿನ್ನ ಕೇಸ್? ಯಾರ ಕಡೆಯವನು ನೀನು? ಯಾರ್ಯಾರ ಬೆಂಬಲವಿದೆಯಯ್ಯಾ!!?" ಬೇಸರ ತುಂಬಿದ ಧ್ವನಿಯಲ್ಲೇ ಕೇಳಿದ ಪ್ರತಾಪ್.
ಆಶ್ಚರ್ಯಚಕಿತ ಭಾವವೊಂದು ಮೂಡಿ ಮರೆಯಾಯಿತು ಎದುರಿಗಿದ್ದ ವ್ಯಕ್ತಿಯ ಮುಖದಲ್ಲಿ. ಬಂದ ಕೈದಿಯನ್ನು, ಕ್ರಿಮಿನಲ್ ಗಳನ್ನು ಅವನ Background ಕೇಳಿ ವಿಚಾರಣೆ ಮುಂದುವರೆಸುವಂತಾಗಿದೆ ನಮ್ಮ ರಕ್ಷಕ ವ್ಯವಸ್ಥೆ ಎಂಬುದೇ ಅವನ ಆಶ್ಚರ್ಯಕ್ಕೆ ಕಾರಣ. 
"ನಾನೇನು ಮಾಡಿಲ್ಲ!! ನನ್ನ ಯಾವ ಕಾರಣಕ್ಕೆ ಹಿಡಿದು ತಂದಿದ್ದಾರೆ ಎಂಬುದು ಗೊತ್ತಿಲ್ಲ ಇನಸ್ಪೆಕ್ಟರ್."
ಪಟ್ ಎಂದು ಹೊಡೆತ ಬಿತ್ತು ಅವನ ಹಿಂಗಾಲಿನ ಮೇಲೆ ಬೆತ್ತದ ಕೋಲಿನಿಂದ. ರಕ್ತವೆಲ್ಲ ನುಗ್ಗಿ ಬಂದು ಮುಖ ಮತ್ತೂ ಕೆಂಪಾಯಿತು. 
"ತಡಿಯಯ್ಯಾ, ನಾನು ಕೇಳ್ತಾ ಇಲ್ವಾ? ಯಾಕೆ ಹೊಡಿತೀಯಾ!?" ಎಂದು ಜೋರಾಗಿ ಹೇಳಿದ ಪ್ರತಾಪ್ ಈಗ.
ಅಷ್ಟರಲ್ಲಿ ಪ್ರತಾಪ್ ಎದುರಿಗಿದ್ದ ಫೋನ್ ಸದ್ದಾಯಿತು. ಟೈಮ್ ನೋಡಿಕೊಂಡ ಹತ್ತಾಗಿತ್ತು. ತಿರುಗಿ ಪಕ್ಕದಲ್ಲಿದ್ದ ಸೆಲ್ ಕಡೆ ನೋಡಿದ. ನಾಲ್ಕು ಜನ ಧಡೂತಿ ವ್ಯಕ್ತಿಗಳು ಇವನತ್ತಲೇ ನೋಡುತ್ತ ನಿಂತಿದ್ದರು. ಆಗಾಗ ಅವರ ನಗು, ಅಪಹಾಸ್ಯದ ಮಾತು ಕೇಳಿಸುತ್ತಲೇ ಇತ್ತು.
ಫೋನ್ ಎತ್ತಿ ಹಲೋ ಎನ್ನುವ ಮುನ್ನವೇ ಅತ್ತಕಡೆಯಿಂದ ಮೇಲಾಧಿಕಾರಿಯ ಜೋರು ಧ್ವನಿ ಕೇಳತೊಡಗಿತು. "ಏನು ಪ್ರತಾಪ್? ನಾನು ನಿನ್ನೇನೆ ಹೇಳಿದೀನಿ ಆ ನಾಲ್ವರನ್ನು ಬಿಡು ಅಂತ. ಇನ್ನೂ ಬಿಟ್ಟಿಲ್ವಾ? ನಾನು ಅವರಿಗೆ ಹೇಳ್ತೀನಿ. ಇನ್ನು ತಟಸ್ಥರಾಗಿರುತ್ತಾರೆ. ಅದೇನೋ ಸಣ್ಣ ಜಗಳ ಅವರಲ್ಲಿ. ಅದಕ್ಕೆ ಒಳಗೆ ನೂಕಿ ಕೋರ್ಟ್, ಕೇಸ್ ಎಂದರೆ ಹೇಗೆ? ನಾವೂ ಮನುಷ್ಯರು. ಅರ್ಥ ಮಾಡ್ಕೋಬೇಕು. ಇನ್ನರ್ಧ ಘಂಟೆಲಿ ಅವರು ಹೊರಗಿರಬೇಕು ಪ್ರತಾಪ್, ಮತ್ತೆ ಫೋನ್ ಮಾಡ್ತೀನಿ!!" ಎಂದು ಉತ್ತರಕ್ಕೂ ಕಾಯದೇ ಫೋನ್ ಇಟ್ಟಾಗಿತ್ತು. ಪ್ರತಾಪ್ ಫೋನ್ ಇಟ್ಟನೋ, ಕುಕ್ಕಿದನೋ ತಿಳಿಯಲಿಲ್ಲ. ಸಂಭಾಷಣೆ ನಡೆಯುವಾಗ ಬದಲಾಗುತ್ತಿರುವ ಪ್ರತಾಪನ ಮುಖಚರ್ಯೆಯನ್ನೇ ನೋಡುತ್ತ ನಿಂತಿದ್ದ ಎದುರಿಗಿದ್ದ ವ್ಯಕ್ತಿ. 
ರಿಸೀವರ್ ಇಟ್ಟು ಇವರ ಕಡೆ ತಿರುಗಲಿಲ್ಲ ಪ್ರತಾಪ್, ಅಷ್ಟರಲ್ಲಿ ಮತ್ತೆ ಫೋನ್ ಸದ್ದಾಯಿತು.
"ಹಲೋ" ಎಂದ. ಆ ಕಡೆಯ ಧ್ವನಿ ಕೇಳುತ್ತಿದ್ದಂತೆಯೇ ಅಲರ್ಟ ಆದ ಪ್ರತಾಪ್ "ಯೆಸ್ ಸರ್" ಎಂದ.
ಎರಡು ನಿಮಿಷದ ಸಂಭಾಷಣೆಯ ನಂತರ ಫೋನಿಟ್ಟ ಪ್ರತಾಪ್. ಎರಡು ವಾರದ ಹಿಂದಷ್ಟೆ ಟ್ರಾನ್ಸಫರ್ ಆಗಿ ಬಂದ ಪ್ರತಾಪ್ ಗೆ ಬರುತ್ತಿದ್ದಂತೆಯೇ ಊರಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಹಫ್ತಾ ವಸೂಲಿಯ ಮೇಲೆ ದೃಷ್ಟಿ ಬಿದ್ದಿತ್ತು. ಒಂದು ವಾರ ನಿರಂತರ ತನಿಖೆ ಮಾಡಿ ಎರಡು ದಿನದ ಹಿಂದೆ ನಾಲ್ಕು ಜನರನ್ನು ಹಿಡಿದು ತಂದಿದ್ದ. ಅಲ್ಲಿಂದ ಶುರುವಾಗಿತ್ತು ಅವನ ಸಂಕಷ್ಟ. 
ಅವಿರತವಾಗಿ ನಡೆಯುತ್ತಿದ್ದ ಹಫ್ತಾ ವಸೂಲಿಯ ಸ್ವಲ್ಪ ಭಾಗ ಇನಸ್ಪೆಕ್ಟರ್ ಮನೆ ಸೇರುತ್ತಿತ್ತು. ಹೀಗಾಗಿ ಆತ ಕಂಡರೂ ಕಾಣದಂತೆ ಸುಮ್ಮನಿದ್ದ. ಈ ತಕರಾರು ಎರಡು-ಮೂರು ಬಾರಿ ಹೊಡೆದಾಟದ ಮಟ್ಟಕ್ಕೆ ಹೋಗಿ ಕಮಿಷನರ್ ವರೆಗೂ ಸುದ್ಧಿ ಹೋಗಿತ್ತು. ಆತ ಪ್ರತಾಪ್ ನ ಸರ್ವೀಸ್ ಹಿಸ್ಟರಿ ನೋಡಿ ಅವನನ್ನು ಇಲ್ಲಿಗೆ ಟ್ರಾನ್ಸಫರ್ ಮಾಡಿದ್ದ.
ಪ್ರತಾಪ್ ತನ್ನ ಕೆಲಸ ಸರಿಯಾಗೇ ಮಾಡಿದ್ದ. ಆದರೆ ಮೇಲಾಧಿಕಾರಿ ತನ್ನ ವರಾತ ಶುರು ಮಾಡಿದ್ದ. ಇದೊಂದು ಸಲ ಅವರನ್ನು ಬಿಟ್ಟುಬಿಡು, ಮುಂದೆ ಹೀಗಾಗೋಲ್ಲ ಎಂದು. ಎಮ್ಮೆಯ ಹಾಲನ್ನು ಬಿಟ್ಟು ಆಕಳ ಹಾಲಿನಿಂದ ಟೀ ಮಾಡಿರುವೆ ಎಂದು ಕೂಗುವ ಅಮ್ಮ, ಹಾಲಿನವನು ಏನು ಕೊಟ್ಟನೋ ಅದನ್ನು ಮಾಡಿ ಬಡಿದಿದ್ದೇನೆ ಎಂದು ದನಿಯೇರಿಸುವ ಹೆಂಡತಿಯ ಮಧ್ಯ ಸಿಕ್ಕಿಬಿದ್ದ ಗಂಡಸಿನ ಸ್ಥಿತಿಯಾಗಿತ್ತು ಪ್ರತಾಪನದ್ದು. 
ಕೇಸ್ ಹಾಕಿದರೆ ಮೇಲಾಧಿಕಾರಿಯ ಜೊತೆ ಸರಿಯಿರಲಾರ, ಅವರನ್ನೂ ಬಿಡಲಾರ. ಮೇಲಿಂದ ಮೇಲೆ Transfer ಗಳಿಂದ ತಲೆ ಕೆಟ್ಟು ಹೋಗಿತ್ತು ಆತನಿಗೆ. ಏನು ಮಾಡುವುದು ಎಂದು ತಿಳಿಯದೆ ತಲೆ ಕೊಡವಿ ಎದ್ದ. "ಸಾರ್!". ಈ ಸಲ ಹೇಳಿದವನು ಕಾನಸ್ಟೇಬಲ್ ಅಲ್ಲ, ಎದುರಿಗಿರುವ ವ್ಯಕ್ತಿ. "ತಡಿಯಯ್ಯಾ!! ನನ್ನ ತಲೆಬಿಸಿ ನನಗೆ" ಬಿರುಸಾದ ಪ್ರತಾಪ್.
"ಅದಲ್ಲ ಸಾರ್! ನಿಮ್ಮ ಸಮಸ್ಯೆಗೆ ನನ್ನ ಬಳಿ ಪರಿಹಾರ ಇದೆ ಸಾರ್!". ಆತನ ಮುಖ ನೋಡಿದ ಪ್ರತಾಪ್. ಯಾವುದೇ ತಮಾಷೆಯ ಭಾವ ಕಂಡು ಬರಲಿಲ್ಲ.
ಈತನಿಗೆ ತನ್ನ ಸಮಸ್ಯೆ ಏನೆಂದು ಹೇಗೆ ತಿಳಿಯಿತು ಎಂದು ಗೊಂದಲಕ್ಕೆ ಬಿದ್ದ ಪ್ರತಾಪ್. ಆದರೂ "ನನಗೇನಯ್ಯ ಸಮಸ್ಯೆ?" ಎನ್ನುತ್ತಾ ಎದುರಿಗಿದ್ದವನ ಪರೀಕ್ಷೆಗಿಳಿದ.
"ನನ್ನ ಎಣಿಕೆ ಸರಿಯಾಗಿದ್ದರೆ ಈಗ ಬಂದಿರುವ ಎರಡು ಫೋನ್ ಕಾಲ್ ಗಳೇ ನಿಮ್ಮ ಸಮಸ್ಯೆ. ನೀವು ಯಾರೋ ನಾಲ್ಕು ಜನರನ್ನು ಹಿಡಿದಿದ್ದೀರಾ.. ನಿಮ್ಮ ಮೇಲಿನವರಲ್ಲಿ ಒಬ್ಬರು ಅವರನ್ನು ಬಿಡಿ ಎಂದೂ, ಇನ್ನೊಬ್ಬರು ಬಿಡಬೇಡಿರೆಂದೂ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಿದ್ದಾರೆ" ಎಂದ.
ಎರಡು ಕ್ಷಣ ಆತನ ಕಣ್ಣುಗಳನ್ನೇ ನೋಡುತ್ತ ನಿಂತ ಪ್ರತಾಪ್. ಎದುರಿಗಿರುವ ವ್ಯಕ್ತಿ ಸಾಮಾನ್ಯನಂತೂ ಅಲ್ಲ ಎಂದು ತಿಳಿಯಿತು. ಎರಡು ಫೋನ್ ಕಾಲ್ ಗಮನಿಸಿ ಅದರ ಎಳೆಯನ್ನು ಹಿಡಿದಿದ್ದಾನೆಂದರೆ ಅದಕ್ಕೆ ಪರಿಹಾರವೂ ಅವನಲ್ಲಿರಬಹುದೆಂದು ಎನ್ನಿಸಿತು ಪ್ರತಾಪ್ ಗೆ. "ಸರಿ ಹೇಳು ಅದೇನು ಕೇಳೋಣ" ಎಂದ ಪ್ರತಾಪ್. ತನ್ನ ಬದಿಗಿದ್ದ ಇಬ್ಬರು ಕಾನಸ್ಟೇಬಲ್ ಗಳ ಕಡೆ ತಿರುಗಿ ನೋಡಿದ ಆಗುಂತಕ. ಪ್ರತಾಪ್ ಅರ್ಥವಾದವನಂತೆ ಅವರಿಬ್ಬರಿಗೂ ಹೊರಗಿರಲು ತಿಳಿಸಿದ.
ನಾಲ್ವರನ್ನು ಕೂಡಿ ಹಾಕಿದ್ದ ಸೆಲ್ ನ ಎದುರಿಗೆ ಸ್ವಲ್ಪ ದೂರದಲ್ಲಿ ಒಂದು ಕಿಡಕಿಯಿತ್ತು. ಆ ಕಡೆ ನಡೆದ ಆ ವ್ಯಕ್ತಿ. ಆತನ ಹಿಂದೆ ನಡೆದ ಪ್ರತಾಪ್. ಕಿಡಕಿಯಲ್ಲಿ ಒಳ ಬರುತ್ತಿದ್ದ ಬಿಸಿಲಿಗೆ ಮೈ ಒಡ್ಡಿ ಒಂದು ನಿರಾಳವಾದ ಉಸಿರುಬಿಟ್ಟು ಪ್ರತಾಪನಿಗೆ ಸಣ್ಣ ದನಿಯಲ್ಲಿ ಹೇಳುತ್ತಾ ಹೋದ. ಐದು ನಿಮಿಷಗಳ ನಂತರ ಪ್ರತಾಪನ ಮುಖದಲ್ಲಿ ನಗುವೊಂದು ಮಿಂಚಿ ಮರೆಯಾಯಿತು. ಮರಳಿ ಬಂದು ಖುರ್ಚಿಯಲ್ಲಿ ಕುಳಿತು ಎರಡು ನಿಮಿಷ ದೀರ್ಘವಾಗಿ ಯೋಚಿಸಿದ ಪ್ರತಾಪ್. ಮೇಜಿನ ಮೇಲಿದ್ದ ಪೇಪರ್ ವೇಟ್ ಅವನ ಕೈಗಳ ನಡುವೆ ಗೋಲಾಕಾರವಾಗಿ ತಿರುಗುತ್ತಿತ್ತು. 
ಆತನ ಯೋಚನೆಗೆ ಭಂಗ ತರಬಾರದೆಂದು ಕಿಡಕಿಯ ಬಳಿಯೇ ನಿಂತಿದ್ದ ಆ ವ್ಯಕ್ತಿ. ಏನೋ ನಿರ್ಧಾರಕ್ಕೆ ಬಂದವನಂತೆ ಅವನತ್ತ ತಿರುಗಿ "Mr. ಬಾ ಕುಳಿತುಕೋ" ಎಂದ ಪ್ರತಾಪ್. ಎದುರಿದ್ದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಮತ್ತೆ Mr. ಎಂದು ಪ್ರಸ್ತಾಪಿಸುವ ಮುನ್ನವೇ "Mr. ಶಾಸ್ತ್ರಿ"ಎಂದ ಶಾಸ್ತ್ರಿ. 
"ಹಾ! ಶಾಸ್ತ್ರಿ, ನೀನು ಹೇಳುವುದು ಕೇಳಲೇನೋ ಚೆನ್ನಾಗಿಯೇ ಇದೆ. ಆದರೆ ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆಯೇನೋ?" ಎಂದು ಶಾಸ್ತ್ರಿಯ ಮುಖ ನೋಡಿದ ಆಡಿಸುತ್ತಿದ್ದ ಪೇಪರ್ ವೇಟ್ ಬದಿಗಿಟ್ಟು. 
ಶಾಸ್ತ್ರಿಯನ್ನು ಫ್ರಾಡ್ ಕೇಸ್ ಮೇಲೆ ಹಿಡಿದು ತಂದಿದ್ದರೆಂದು ಮರೆತು ಬಿಟ್ಟಿದ್ದ ಪ್ರತಾಪ್. ಐದು ನಿಮಿಷಗಳ ಹಿಂದೆ ಅಪರಾಧಿಯಾಗಿ ಬಂದ ಶಾಸ್ತ್ರಿ ಈಗ ಸಬ್ ಇನಸ್ಪೆಕ್ಟರ್ ಎದುರು ಕುರ್ಚಿಯಲ್ಲಿ ಕುಳಿತಿದ್ದ. 
ಶಾಸ್ತ್ರಿ ಎಂದರೆ ಹಾಗೆ.. ಯಾವುದೇ ಪರಿಸ್ಥಿತಿಯನ್ನು ತನಗೆ ಬೇಕಾದಂತೆ ತಿರುಗಿಸಿಕೊಳ್ಳಬಲ್ಲ ಚತುರ. 
"ಪ್ರತಾಪ್!!" ಹೆಸರಿಡಿದು ಕರೆದ ಶಾಸ್ತ್ರಿ. "ತಪ್ಪಿನಲ್ಲಿ ಚಿಕ್ಕ ತಪ್ಪು, ದೊಡ್ಡ ತಪ್ಪು ಎಂಬುದೇನಿಲ್ಲ ಪ್ರತಾಪ್, ಸಣ್ಣ ತಪ್ಪಿಗೆ ಶಿಕ್ಷೆಯಾಗದಿದ್ದಾಗ ವ್ಯಕ್ತಿ ಮತ್ತೂ ದೊಡ್ಡ ತಪ್ಪು ಮಾಡುತ್ತಾನೆ. ಇಂದು ಹಫ್ತಾ ವಸೂಲಿಗೆಂದು ಬಡಬಗ್ಗರ, ಅಂಗಡಿಕಾರರ ಕೈ ಕಾಲು ಮುರಿಯಲು ಹೇಸದ ಜನ ಶಿಕ್ಷೆ ಆಗದೇ ಉಳಿದರೆ ನಾಳೆ ತಲೆ ಕಡಿಯುವಷ್ಟು ಬೆಳೆಯುತ್ತಾರೆ. ಮುಳ್ಳನ್ನು ಕೊಳೆಯುವ ಮುನ್ನವೇ ತೆಗೆಯಬೇಕು, ಕಳೆಯನ್ನು ಬೆಳೆಯುವ ಮೊದಲೇ ಕೀಳಬೇಕು.
ಪ್ರತೀ ಸಣ್ಣ ತಪ್ಪಿಗೂ ದೊಡ್ಡ ಶಿಕ್ಷೆ ಆದರೆ ಮಾತ್ರ ದೇಶ ಬದಲಾಗುತ್ತದೆ. ಕಳ್ಳತನ ಮಾಡಿದರೆ ಕೈ ತೆಗೆಯಬೇಕು, ಅತ್ಯಾಚಾರ ಮಾಡಿದರೆ ತಲೆ... ಅಂದರೆ ಮಾತ್ರ ದೇಶ ಬದಲಾಗಬಹುದು ಪ್ರತಾಪ್" 
ಶಾಸ್ತ್ರಿಯ ಆವೇಶದ ಮಾತು ಕೇಳಿ ಪ್ರತಾಪ್ ಕೂಡ ಗೊಂದಲಗೊಂಡ. 
"ಇಷ್ಟು ಮಾತನಾಡ್ತಿದ್ದಿಯಾ, ನಿನ್ನ ಮೇಲೆ ಫ್ರಾಡ್ ಕೇಸ್ ಇದೆ" ಎಂದು ನಕ್ಕ ಪ್ರತಾಪ್.
ಶಾಸ್ತ್ರಿಯೂ ನಗುತ್ತಾ "ನಂದೇನು ಬಿಡಿ ಸಾರ್! ಇಲ್ಲಿಯೇ ಇರುವ ಮನುಷ್ಯ, ನನ್ನ ಹಿಂದೆ-ಮುಂದೆ ಯಾರೂ ಇಲ್ಲ. ತಪ್ಪು ಮಾಡಿದ್ದರೆ ಏನು ಶಿಕ್ಷೆಗೂ ನಾನು ಸಿದ್ಧನೇ. ನಾನು ಫ್ರಾಡ್ ಮಾಡಲಿಲ್ಲ ಸಾರ್! ಸಣ್ಣ Business ಮಾಡಿದೆ ಅಷ್ಟೆ" ಎಂದ. 
ಅದೆಂತಹ Business ಎಂದು ಕೇಳುವ ಮನಸ್ಸಾಯಿತು ಪ್ರತಾಪ್ ಗೆ. ಆದರೆ ಆತನಿಗೆ ಅದಕ್ಕೂ ಮೊದಲು ತನ್ನ ಹೆಗಲೇರಿದ ಶನಿಯನ್ನು ಕೆಳಗಿಳಿಸಿದರೆ ಸಾಕಿತ್ತು. 
"ಶಾಸ್ತ್ರಿ ನನಗೆ ಒಂದು ಸಂದೇಹ, ಕೇವಲ ಎರಡು ಫೋನ್ ಕಾಲ್ ಗಳಿಂದ ನನ್ನ ಸಮಸ್ಯೆಯನ್ನು ಹೇಗೆ ಗ್ರಹಿಸಿದೆ!?"
ಪ್ರತಾಪ್, ನಾನು ಒಳಗೆ ಬರುತ್ತಿರುವಾಗಲೇ ನಿನ್ನ Body Language ನೋಡಿದೆ. ಒಳ ಬಂದು ನಿಂತಾಗ ಸೆಲ್ ನೊಳಗಿರುವ ನಾಲ್ಕು ಜನರ ನಗು, ಮಾತು ಕೇಳಿಸಿಕೊಂಡೆ. ನಿನ್ನ ಮೇಲಿನವರಿಬ್ಬರೂ ಬಿಟ್ಟುಬಿಡು ಎಂದಿದ್ದರೆ ನೀನವರನ್ನು ಯಾವಾಗಲೋ ಬಿಟ್ಟಿರುತ್ತಿದ್ದೆ. ಹಾಗಾಗದೇ ನೀನು ಅಡಕತ್ತರಿಯಲ್ಲಿ ಸಿಕ್ಕಿಬಿದ್ದಿರುವುದರಿಂದ ಗೊಂದಲಕ್ಕೆ ಬಿದ್ದಿರುವೆ ಎಂದು ತಿಳಿಯಿತು. ಸೂಕ್ಷ್ಮತೆ ಇದ್ದರೆ ಸನ್ನಿವೇಶಗಳು ಸಿನಿಮಾದ ರೋಲ್ ನ ಹಾಗೆ ಬಿಚ್ಚಿಕೊಂಡು ಬಿಡುತ್ತದೆ ಪ್ರತಾಪ್." 
ಒಮ್ಮೆ ಪ್ರತಾಪ್ ಎಂದೂ, ಮತ್ತೊಮ್ಮೆ ಸಾರ್ ಎಂದೂ ಶಾಸ್ತ್ರಿ ಕರೆಯುವಾಗಿನ Sequence ಗಮನಿಸಿದ್ದ ಪ್ರತಾಪ್ ಗೆ ಶಾಸ್ತ್ರಿ ಏನು ಫ್ರಾಡ್ ಮಾಡಿರಬಹುದೆಂಬ ಕುತೂಹಲ ಹೆಚ್ಚಾಯಿತು. 
"OK ಶಾಸ್ತ್ರಿ, ಇವತ್ತು ನಿನ್ನ ಅದೃಷ್ಟ ಚೆನ್ನಾಗಿದೆ. ಒಂದು ವಾಕ್ಯದಲ್ಲಿ ಏನು ಮಾಡಿರುವೆ ಎಂದು ಹೇಳಿ ಹೋಗು. ನಾನು ಈ ಕೇಸ್ ಮುಗಿಸಿ ನಿನ್ನ ವಿಚಾರಿಸುತ್ತೇನೆ. ನಾನು ಹೇಳಿದಾಕ್ಷಣ ಬರಬೇಕು" ಎಂದು ರಿಜಿಸ್ಟರ್ ಅವನೆದುರು ಹಿಡಿದು ಸಹಿ ಹಾಕಿಸಿಕೊಂಡ ಪ್ರತಾಪ್. 
"ಸರ್! ನಾನೇನೂ ಫ್ರಾಡ್ ಮಾಡಲಿಲ್ಲ. ಮುಳುಗಿ ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ 20 ಲಕ್ಷ ಗಳಿಸಿಕೊಟ್ಟೆ ಒಂದು ದಿನದಲ್ಲಿ ಅಷ್ಟೆ." ಎಂದ. 
"ಹಾಗಾದರೆ ಇದೇನೋ ದೊಡ್ಡ ಫ್ರಾಡೇ" ಎನ್ನುತ್ತಾ ನಕ್ಕ ಪ್ರತಾಪ್. 
"Business ಪ್ರತಾಪ್ Business" ಎಂದ ಶಾಸ್ತ್ರಿ. 
"Ok ಹಾಗಾದ್ರೆ ನಾಳೆ ಸಿಗೋಣ"ಎನ್ನುತ್ತಾ ಮೇಲೆದ್ದ ಪ್ರತಾಪ್. 
ಶಾಸ್ತ್ರಿ ಕುಳಿತಲ್ಲಿಯೇ "ಪ್ರತಾಪ್ ನೀನೇನು ತಿಳಿದುಕೊಳ್ಳಲ್ಲ ಎಂದರೆ ಎರಡು ಹೆಲ್ಪ್ ಆಗಬೇಕು" ಎಂದ.
ಏನೆನ್ನುವಂತೆ ಮುಖ ನೋಡಿದ ಪ್ರತಾಪ್. 
"ಎರಡು ಕಪ್ ಟೀ ತರಿಸುತ್ತಿಯಾ ಪ್ರತಾಪ್?"
ಅಭ್ಯಾಸ ಬಲದಂತೆ "420 ಎರಡು ಟೀ ತಗೋ ಬಾ" ಎಂದು ಕುಳಿತುಕೊಂಡ.
ಮರುಕ್ಷಣವೇ ತಿರುಗಿ ಶಾಸ್ತ್ರಿಯ ಮುಖ ನೋಡಿದ ಪ್ರತಾಪ್. ನಿರ್ಭಾವುಕನಾಗಿ ಕುಳಿತಿದ್ದ ಶಾಸ್ತ್ರಿ. ಈಗಷ್ಟೆ ತನ್ನ ಬಳಿ ಹೊಡೆತ ತಿಂದ ವ್ಯಕ್ತಿ, ಸ್ವಲ್ಪ ಸಮಯದಲ್ಲಿಯೇ ಅಲ್ಲಿಯೇ ಕಾಲು ಮೇಲೆ ಕಾಲ್ಹಾಕಿ ಕುಳಿತು ಅವನ ಹತ್ತಿರವೇ ಟೀ ತರಿಸಿಕೊಂಡರೆ!!! ತನ್ನ ಕೆರವನ್ನು ಕೊಟ್ಟು ತಾನೇ ಹೊಡೆಸಿಕೊಂಡಂತೆ.. 
ಪ್ರತಾಪನಿಗೆ ಶಾಸ್ತ್ರಿ ಟೀ ತರಲು ಹೇಳಿದ್ದೇಕೆಂದು ತಿಳಿದು ಹೋಯಿತು. ಇದು ಹಾವಿನಂಥ ದ್ವೇಷವಾ ಎಂದುಕೊಂಡ ಪ್ರತಾಪ್.
"ಇನ್ನೊಂದು ಏನು ಸಹಾಯ?" ಅನುಮಾನದಿಂದ ಕೇಳಿದ ಪ್ರತಾಪ್. 
" ನನ್ನ ಮೇಲೆ ಫ್ರಾಡ್ ಕೇಸ್ ಹಾಕಿದವರು ಯಾರು ಪ್ರತಾಪ್?"
ಶಾಸ್ತ್ರಿಯ ಸೇಡಿನ ರೀತಿಯನ್ನು ಕಣ್ಣೆದುರೇ ನೋಡಿದ ಮೇಲೂ ಕಂಪ್ಲೇಂಟ್ ಕೊಟ್ಟವರ ಹೆಸರು ಹೇಳುವಷ್ಟು ಮೂರ್ಖನಲ್ಲ ಪ್ರತಾಪ್.
"ನೀನು ಮಾಡಿದ್ದು ತಪ್ಪೇ ಆಗಿದ್ದರೆ ಕೋರ್ಟಿನಲ್ಲಿ ಇಬ್ಬರನ್ನೂ ನಾನು ಸೇರಿಸುತ್ತೇನೆ, ಈಗಿಷ್ಟು ಸಾಕು ಶಾಸ್ತ್ರಿ, ಟೈಮ್ ಆಯಿತು ಹೊರಡು" ಎನ್ನುತ್ತಾ ಮೇಲೆದ್ದ. 
ನಸುನಗುತ್ತ ಹೊರಡಲನುವಾದ ಶಾಸ್ತ್ರಿಗೆ ಕಂಪ್ಲೇಂಟ್ ಕೊಟ್ಟವರು ಯಾರೆಂದು ತಿಳಿದುಹೋಯಿತು.
ಬಾಗಿಲ ಬಳಿ ಹೋಗುತ್ತಿದ್ದಂತೆಯೇ ತಲೆ ತಗ್ಗಿಸಿ ಟೀ ಹಿಡಿದುಕೊಂಡು ಬರುತ್ತಿರುವ ಕಾನಸ್ಟೇಬಲ್ ಎದುರಾದ. ಸಣ್ಣದಾಗಿ ಸಿಳ್ಳೆ ಹಾಕುತ್ತ ಹೊರಬಿದ್ದ ಶಾಸ್ತ್ರಿ. ಕಂಪ್ಲೇಂಟ್ ಕೊಟ್ಟ ವ್ಯಕ್ತಿ ನೆನಪಾದ. 
ಮುಖದಲ್ಲೊಂದು ನಗು ಮೂಡಿ ಮರೆಯಾಯಿತು.
                                 ...............................ಮುಂದುವರೆಯುತ್ತದೆ..............................

Saturday, March 19, 2016

ಖತರ್ನಾಕ್ ಕಾದಂಬರಿ- ಅಧ್ಯಾಯ ೧

        ಖತರ್ನಾಕ್ ಕಾದಂಬರಿ 

          ನಮ್ಮ ನಿಮ್ಮ ನಡುವೆ...                                                          

ಅಧ್ಯಾಯ ೧

 ಸಂಜೆ ನಾಲ್ಕರ ಸಮಯ. ದೆಹಲಿಯ ರಸ್ತೆಯಲ್ಲಿ ವಾಹನ ಸಂಚಾರ ಜೋರಾಗಿತ್ತು. ದೆಹಲಿಯೆಂಬುದು ರಾಜಕಾರಣಿಗಳ ತವರುಮನೆ. ಪ್ರತಿಯೊಬ್ಬ V.I.P. ಸಂಚಾರ ಮಾಡುವಾಗಲೂ ಜನಸಾಮಾನ್ಯರಿಗೆ ಪರದಾಟವೇ ಗತಿ. ಒಂದಿಲ್ಲೊಂದು ರಸ್ತೆಯಲ್ಲಿ ಜನ ಸಾಮಾನ್ಯರಿಗೆ ನಿಷೇಧ. ಬದಲಿ ರಸ್ತೆಗಳಲ್ಲಿ ವಾಹನ ದಟ್ಟಣೆ, ತುಂಬಿ ನಿಲ್ಲುವ ಕಾರುಗಳ ಭರಾಟೆ. ಇದನ್ನೆಲ್ಲಾ ಸಾಮಾನ್ಯ ಭರಿಸಲೇಬೇಕು. ದೆಹಲಿಯ ಜನ ರೂಢಿಸಿಕೊಂಡಿದ್ದಾರೆ ಕೂಡ. 

ಈಗಲೂ ಕೂಡಾ ಅಂಥಹದೇ ಪರಿಸ್ಥಿತಿ ಏರ್ಪಟ್ಟಿತ್ತು. ದೆಹಲಿ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿ NH-24 ನಲ್ಲಿ ಅಡ್ಡ ರಸ್ತೆಗಳಿಂದ ಬರುವ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಯಾವಾಗಲೂ ಜನ ಭರಾಟೆಯಿಂದ ತುಂಬಿರುತ್ತಿದ್ದ Highway ಈಗ ಖಾಲಿ ಹೊಡೆಯುತ್ತಿತ್ತು. ಯಾವುದೋ ದೊಡ್ಡ ಮನುಷ್ಯ ಹೋಗುತ್ತಾನೆ, ಇನ್ನರ್ಧ ಘಂಟೆ ಇದೇ ಗತಿ ಎಂದು ಗೊಣಗುತ್ತ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಪಕ್ಕದಲ್ಲಿರುವ ಸಣ್ಣ ಗೂಡಂಗಡಿಗಳಲ್ಲಿ ಚಾ ಹೀರುತ್ತ ನಿಂತಿದ್ದರು ಜನ.
ಪೋಲಿಸರು ಕಣ್ತಪ್ಪಿಸಿ ಕದ್ದು ಗಾಡಿ ಓಡಿಸುವವರ ಹಿಂದೆ ಚಿರತೆಗಳಂತೆ ಬಿದ್ದು ನಾಲ್ಕು ಬಾರಿಸಿ ಕಳಿಸುತ್ತಿದ್ದರು. ರಸ್ತೆಯ ಉದ್ದಕ್ಕೂ ಪೋಲಿಸರ ಸರಪಳಿಯೇ ಏರ್ಪಟ್ಟಿತ್ತು. ಪ್ರಧಾನಿಯೋ, ರಾಷ್ಟೃಪತಿಯೋ ಹೋಗುತ್ತಿದ್ದಾರೆ ಎಂದುಕೊಂಡರು ಜನ. ಸಣ್ಣ ಪುಟ್ಟ V.I.P. ಗಳಿಗೆ ಇಷ್ಟು ವ್ಯವಸ್ಥೆ ನೀಡುವುದು ಕಷ್ಟ ಹಿಂದೂಸ್ಥಾನದಲ್ಲಿ. 
ಪೋಲಿಸರು ತಮಗೆ ಬಂದ ಕರ್ತವ್ಯವನ್ನು ಅಚ್ಚು ಕಟ್ಟಾಗಿ ಮಾಡುತ್ತಿದ್ದರೆ ವಿನಃ ಯಾರು ಈ ದಾರಿಯಾಗಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತಲೆ ಕೆಡಿಸಿಕೊಂಡರೂ ಅವರವರೆಗೆ ಬರುವ ವಿಷಯವಲ್ಲ ಅದು. ದೊಡ್ಡ ಜನ ಹೋಗುವಾಗ ಯಾರು ಹೋಗುತ್ತಿದ್ದಾರೆ ಮತ್ತು ಯಾವ ಕಾರಿನಲ್ಲಿ ಹೋಗುತ್ತಿದ್ದಾರೆ ಎಂಬ ವಿಷಯವನ್ನು ಗೌಪ್ಯವಾಗಿಡುತ್ತಾರೆ. ಕೆಲವೇ ಬೆರಳೆಣಿಕೆಯಷ್ಟು ಮೇಲ್ದರ್ಜೆಯ ಅಧಿಕಾರಿಗಳು ಎಲ್ಲವನ್ನು ತಿಳಿದುಕೊಂಡು ಬೇಕಾದ ಸಿದ್ಧತೆ ಮಾಡಿರುತ್ತಾರೆ. 
ಅಲ್ಲಲ್ಲಿ ಗುಂಪಾಗಿ ನಿಂತ ಜನ, ರಾಜಕಾರಣಿಗಳನ್ನು, ತಮ್ಮನ್ನು ಹೀಗೆ ಅಡ್ಡ ಹಾಕಿ ನಿಲ್ಲಿಸಿದ ಪೋಲಿಸರನ್ನೂ ಹೀನಾಯಮಾನವಾಗಿ ಬಯ್ಯುತ್ತ ನಿಂತಿದ್ದರು. ಪುಣ್ಯಾತ್ಮ ಬೇಗ ತೊಲಗಿದರೆ ಸಾಕು. ತಮ್ಮ ತಮ್ಮ ಕೆಲಸಗಳಿಗೆ ಮುಂದುವರೆಯಬಹುದೆಂಬುದು ಅವರ ಯೋಚನೆ. 
ಅದೇ ಸಮಯಕ್ಕೆ ಸರಿಯಾಗಿ Highway ಇಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ, ಇನ್ನೂ ಜನ ಬಂದುಳಿಯದ ಮೂವತ್ತು ಅಂತಸ್ತಿನ ಕಟ್ಟಡದ ಟೆರೆಸ್ ನಲ್ಲಿ ಪ್ರಶಾಂತವಾಗಿ ಕುಳಿತಿದ್ದ ಗರುಡ. ಅವನ ನಿಜವಾದ ಹೆಸರು ಪಾಸ್ ಪೋರ್ಟ್ ನಲ್ಲಿಯೂ ಕೂಡ ಇಲ್ಲ. ಭೂಗತ ಜಗತ್ತಿನಲ್ಲಿ ಅವನಿಗೆ ಗರುಡ ಎಂದೇ ಹೆಸರು. ಅವನ ಕಣ್ಣುಗಳಿಗೂ, ಹದ್ದಿನ ಕಣ್ಣುಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ಎಲ್ಲರ ಅಂಬೋಣ. ಗರುಡನ ಕಣ್ಣುಗಳಲ್ಲಿ ಕ್ರೂರತೆಯಿಲ್ಲ, ತೀಕ್ಷ್ಣವಾದ ಸೌಮ್ಯತೆ. ಮಂಜುಗಡ್ಡೆಯಲ್ಲಿ ಹುದುಗಿರುವ ಬೆಂಕಿಯಂತೆ.
ಗರುಡನ ಬಗ್ಗೆ ಇನ್ನಷ್ಟು ತಿಳಿಯಬೇಕೆಂದರೆ ಸ್ವಲ್ಪ ಹಿಂದೆ ಹೋಗಬೇಕು. ಅದು ಫೆಬ್ರವರಿ ೨, ೨೦೧೩. ಅಮೇರಿಕದಲ್ಲಿ ಕ್ರಿಸ್ ಕೆಯ್ಲ್ ಎಂಬ ದೈತ್ಯ ವ್ಯಕ್ತಿ ಸಹೋದ್ಯೋಗಿಯ ಗುಂಡೇಟಿನಿಂದಲೇ ಸತ್ತು ಮಲಗಿದ ದಿನ. ಆತ ಅಮೇರಿಕಾ ಕಂಡ ಅದ್ಭುತ Sniper. ಅಮೇರಿಕಾದ ನೇವಿಯಲ್ಲಿ ಯುದ್ಧದ ತರಬೇತಿ ಪಡೆದ ಆತ ತನ್ನ ಹತ್ತು ವರ್ಷದ ಸೇವೆಯಲ್ಲಿ ಬಲಿತೆಗೆದುಕೊಂಡಿದ್ದು ಬರೋಬ್ಬರಿ 160 ಜನರನ್ನು. ಅದಕ್ಕೆ ಎಂಟೆದೆ ಬೇಕು, ಎಂಟೆದೆ ಅಷ್ಟೆ ಇದ್ದರೆ ಸಾಲದು, ಗುರಿ ತಪ್ಪದೆ ಟ್ರಿಗರ್ ಒತ್ತುವ ಛಾತಿ ಬೇಕು.
2003 ರಲ್ಲಿ ಪ್ರಾರಂಭವಾದ ಅಮೇರಿಕಾ ಮತ್ತು ಇರಾಕ್ ನಡುವಿನ ಯುದ್ಧದಲ್ಲಿ ಇದೇ ಕ್ರಿಸ್ ಕೆಯ್ಲ್ ನಿಜವಾದ ಹೀರೊ ಆಗಿದ್ದ. ಆತ Sniper ಹಿಡಿದು ನಿಂತನೆಂದರೆ ಎಷ್ಟೇ ದೂರದ ಬೇಟೆಯನ್ನಾದರೂ ಬಡಿದು ಕೆಳಗುರುಳಿಸಿಬಿಡುತ್ತಿದ್ದ. ತಾನು ಎದುರಿಗಿದ್ದು ತನ್ನ ಹಿಂದಿರುವ ಟೀಮಿಗೆ ದಾರಿ ಮಾಡಿಕೊಡುವುದೇ ಅವನ ಕೆಲಸ. ತನ್ನೆದೆಯೆಡೆಗೆ ನುಗ್ಗಿ ಬರುವ ಬುಲೆಟ್ ಗಳಿಂದ ತಪ್ಪಿಸಿಕೊಂಡು ಅದೇ ದಿಕ್ಕಿಗೆ ಆತ ಗುರಿ ಹಿಡಿದನೆಂದರೆ ಅದೇ ಕೊನೆ ಮತ್ತೆ ಆ ಕಡೆಯಿಂದ ಗುಂಡು ಸಿಡಿದು ಬರುತ್ತಿರಲಿಲ್ಲ. ಇಂತಹ ಕ್ರಿಸ್ ಕೆಯ್ಲ್ 2011 ರಲ್ಲಿ ಯುದ್ಧ ಮುಗಿಸಿ ಬಂದಾಗ ಅವನಿಗೆ ಸಿಕ್ಕ ಬಿರುದುಗಳು, ಮೆಡಲ್ ಗಳು ಅಷ್ಟಿಷ್ಟಲ್ಲ. ರಾತ್ರೋ ರಾತ್ರಿ ಆತನೇನು ಹೀರೊ ಆಗಿರಲಿಲ್ಲ. ಬರೋಬ್ಬರಿ ಹತ್ತು ವರ್ಷಗಳು, ಅವನು ಸಾವಿನೊಂದಿಗೆ ಸರಸವಾಡಿದ್ದು. Sniper ಜಗತ್ತಿನ ಆದರ್ಶವಾಗಿ ನಿಂತಿದ್ದ ಅಮೇರಿಕನ್ ಸ್ನೈಪರ್ ಕ್ರಿಸ್ ಕೆಯ್ಲ್. 
ಇಂಥ ದೈತ್ಯ ವ್ಯಕ್ತಿಯೊಬ್ಬ ಫೆಬ್ರವರಿ 2, 2013. ರಲ್ಲಿ ಗುಂಡೇಟು ತಿಂದು ಸತ್ತಿದ್ದ. ಅದು ಸಹೋದ್ಯೋಗಿಯೊಬ್ಬನ ತಲೆಹಿಡುಕತನದಿಂದ.ಅಂದು ಸ್ನೈಪರ್ ಜಗತ್ತೇ ಕಣ್ಣೀರಿಟ್ಟ ದಿನ. ಎರಡೇ ದಿನದ ನಂತರದ ಅಂತಿಮ ದರ್ಶನದ ದಿನ ಇಡೀ ಜಗತ್ತಿನ ಅತ್ಯುತ್ತಮ ಸ್ನೈಪರ್ ಗಳೆಲ್ಲ ಬಂದು ಸೇರಿದ್ದರು. ಅಲ್ಲಿದ್ದ ಇದೇ ಗರುಡ. ಎಂದೂ ಅಳದ ಗರುಡನ ಕಣ್ಣು ತುಂಬಿತ್ತು ಅಂದು. ಅಮೇರಿಕನ್ ಮಿಲಿಟರಿಯ ಗುಂಪೇ ಅಲ್ಲಿ ತುಂಬಿದ್ದಾಗ ಹೀಗೊಂದು ಅನಾಮಿಕ ವ್ಯಕ್ತಿ ಅಲ್ಲ ಹೋಗಿದ್ದಾನೆ ಎಂದರೆ ಅದು ಕತ್ತಲ ಜಗತ್ತಿನ ಸಾಮರ್ಥ್ಯ ಎಂತಹದು ಎಂಬುದನ್ನು ತೋರಿಸುತ್ತದೆ. 
ಒಂದು ಬಿಳಿ ಗುಲಾಬಿಯನ್ನು ಕ್ರಿಸ್ ನ ಪಾರ್ಥಿವ ಶರೀರದ ಮೇಲಿಟ್ಟು ಗರುಡ ಅಲ್ಲಿಂದ ದುಡು ದುಡು ಹೊರನಡೆದು ಬಿಟ್ಟ. ಒಬ್ಬ ಅದ್ಭುತ ಶಿಷ್ಯನನ್ನು ಕಳೆದುಕೊಂಡ ದುಃಖ ಅವನನ್ನು ಕಾಡಿತ್ತು. ಕ್ರಿಸ್ ಕೆಯ್ಲ್ 1998 ರಲ್ಲಿ ಆರ್ಮಿ ಸೇರುವ ಮೊದಲೇ ತಾನೊಬ್ಬ ಸ್ನೈಪರ್ ಆಗಬೇಕೆಂದು ತೀರ್ಮಾನಿಸಿದ್ದ. ಅದಕ್ಕಾಗಿ ಆತ ಜಗತ್ತಿನ ಹೆಸರಾಂತ ಸ್ನೈಪರ್ ಗಳ ಮನೆ ಬಾಗಿಲನ್ನು ತಟ್ಟಿದ್ದ. ಆಗಿನ್ನೂ ಗರುಡ ಕತ್ತಲ ದುನಿಯಾದಲ್ಲಿ ತನ್ನನ್ನು ಗುರುತಿಸಿಕೊಂಡ ಮನುಷ್ಯನಾಗಿರಲಿಲ್ಲ. 
ಕ್ರಿಸ್ ನ ಕಣ್ಣುಗಳನ್ನು ನೋಡಿದೊಡನೆ ತನ್ನ ಕಣ್ಣುಗಳನ್ನೇ ಕನ್ನಡಿಯಲ್ಲಿ ನೋಡಿಕೊಂಡಂತಾಗಿತ್ತು ಗರುಡನಿಗೆ. ಆತನ ಸೂಕ್ಷ್ಮ ಕಣ್ಣುಗಳು, ಕಲಿಯುವಿಕೆಯ ಬಗೆಗಿನ ತುಡಿತ ಗರುಡನಿಗೆ ಹಿಡಿಸಿತು. ಆ ದಿನದಿಂದ ಸರಿಯಾಗಿ ಒಂದು ವರ್ಷ ಕ್ರಿಸ್ ಕೆಯ್ಲ್ ಗರುಡನ ಪಟ್ಟಾ ಶಿಷ್ಯನಾಗಿದ್ದ. 1999 ರಲ್ಲಿ ಗರುಡ ಇದ್ದಕ್ಕಿದ್ದಂತೆ ಮಾಯವಾಗಿದ್ದ. ಕ್ರಿಸ್ ಅವನನ್ನು ಹುಡುಕಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿತ್ತು. ಅದಾದ ನಂತರ ಕ್ರಿಸ್ ಅಮೇರಿಕನ್ ನೇವಿಯಲ್ಲಿ ಸೇರಿ ಕೊನೆಗೆ ನಡೆದದ್ದೆಲ್ಲಾ ಈಗ ಒಂದು ಇತಿಹಾಸ.
ಅಂತಹ ಕ್ರಿಸ್ ಕೆಯ್ಲ್ ನ ಗುರು ಈ ಗರುಡ. ಗರುಡ ಕಣ್ಣಿನಲ್ಲಿ ಮಾತನಾಡುವ ಮನುಷ್ಯ. ಅವನ ಕಣ್ಣುಗಳು, ಕೆರಳಿ ಬುಸ್ ಗುಡುವ ಕರಿ ಸರ್ಪವನ್ನು ಕೂಡ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸಮ್ಮೋಹನಗೊಳಿಸುವ ಕಪ್ಪಿತ್ತು. ಆ ಕಪ್ಪಿನಲ್ಲಿ ಎಂದೂ ತಪ್ಪದ ಗುರಿಯಿತ್ತು. ಅದೇ ಅವನನ್ನು ಇಡೀ ಪ್ರಪಂಚದ ಗುರಿ ತಪ್ಪದ Sniper ಎಂಬ ಹೆಗ್ಗಳಿಕೆ ನೀಡಿ ನಿಲ್ಲಿಸಿದ್ದು. ಇದು ಭೂಗತ ಜಗತ್ತಿಗೆ ಮಾತ್ರ ತಿಳಿದಿರುವ ಸತ್ಯ.
ಆರಡಿ, ಕೋಲುಮುಖ, ಮುಖದಲ್ಲಿ ತುಂಬಿದ ದೃಢತೆ, ಕೇರ್ ಲೆಸ್ ಆಗಿ ಹಾರಾಡಿಕೊಂಡಿದ್ದ ಕೂದಲು, ಪ್ರತಿ ನಡಿಗೆಯಲ್ಲೂ ಚುರುಕುತನ. ಮಧ್ಯ ವಯಸ್ಸಿನ ಗರುಡ ಈಗಲೂ ಕೂಡ ಹದಿಹರೆಯದ ಹೆಣ್ಣುಗಳ ಫೇವರಿಟ್ ಆಗುತ್ತಾನೆ ಎನ್ನಬಹುದು. ಆತನ ಮೈಕಟ್ಟೆ ಅಂತಹುದು. ಎಲ್ಲಕ್ಕಿಂತ ಹೆಚ್ಚಾಗಿ ಮತ್ತವೇ ಕಣ್ಣುಗಳು, ಸೂಜಿಗಲ್ಲಿನ ಸೆಳೆತದಂತಹ ಕಣ್ಣುಗಳು. 
ಗರುಡ ಸಮಯ ನೋಡಿಕೊಂಡ, ಅರ್ಧ ಘಂಟೆಯಾಗಿತ್ತು ಆತ ಆ ಮೂವತ್ತು ಅಂತಸ್ತಿನ ಕಟ್ಟಡದ ಟೆರೆಸ್ ನಲ್ಲಿ ಕುಳಿತು. ಆತನ ಮುಖದಲ್ಲಿ ತುಂಬಿ ತುಳುಕುವ ಪ್ರಶಾಂತತೆ. ಸುನಾಮಿ ಬರುವ ಮೊದಲಿನ ಸಾಗರದ ಪ್ರಶಾಂತತೆ. ಆತ ತನ್ನ ಕಪ್ಪು ಬ್ಯಾಗಿನಿಂದ ಸಿಗರೇಟ್ ಒಂದನ್ನು ತೆಗೆದು ಹಚ್ಚಿ ಮೇಜಿನ ಮೇಲಿಟ್ಟ!! ಅವನಿಗೆ ಬೇಕಾದ ವಸ್ತುಗಳನ್ನು ಆತ ಮೊದಲೇ ಪಡೆದಿದ್ದ. ಈ ಸಮಯಕ್ಕೆ ಸರಿಯಾಗಿ ಇಂಥಹ ವಸ್ತುಗಳು ಇಂಥಲ್ಲಿಯೇ ಇರಬೇಕು ನಿಮ್ಮ ಕೆಲಸ ಆಗುತ್ತದೆ ಎಂದು ಮೊದಲೇ ಹೇಳಿದ್ದ. ಭೂಗತ ಜಗತ್ತಿನಲ್ಲಿ ಮಾತು ಬಹಳ ಕಡಿಮೆ. ಬಹಳ ಮಾತನಾಡುವವನು ಬಹಳ ಬೇಗ ಜಗತ್ತಿನಿಂದ ಜಾಗ ಬಿಡುತ್ತಾರೆ. ಎಷ್ಟು ಗುಟ್ಟು ನಿನ್ನೊಳಗೆ ಉಳಿಯುತ್ತದೆಯೋ, ಎಷ್ಟು ಸಣ್ಣ ವಾಕ್ಯವನ್ನು ನೀನು ಸಮಗ್ರವಾಗಿ ಅರ್ಥಮಾಡಿಕೊಳ್ಳುತ್ತೀಯೋ ಎನ್ನುವುದರ ಮೇಲೆ ನಿನ್ನ ಭವಿಷ್ಯ ಬದಲಾಗುತ್ತದೆ ಅಲ್ಲಿ. 
ಸಿಗರೇಟ್ ಉರಿದು ಅದರ ಹೋಗೆ ಹೋಗುವ ದಿಕ್ಕು ಮತ್ತು ವೇಗವನ್ನೇ ಎರಡು ನಿಮಿಷ ನೋಡುತ್ತ ನಿಂತ ಗರುಡ. ಸಮಯ ಹತ್ತಿರವಾಗಿದೆ ಎನ್ನಿಸಿತು ಗರುಡನಿಗೆ. 
ಬ್ಯಾಗಿನಿಂದ Sniper ನ ಬಿಡಿಭಾಗಗಳನ್ನು ತೆಗೆದು ಜೋಡಿಸಿದ. ಅದೂ ಕೇವಲ ಒಂದೂವರೆ ನಿಮಿಷದಲ್ಲಿ. ಅದೊಂದು ಹುಚ್ಚು ಅವನಿಗೆ. Fastest assembler of sniper in the world. ಈ ವೇಗ ಬೇಕಾ ಎಂದು ಕೆಲವೊಮ್ಮೆ ಅವನೇ ಯೋಚಿಸುತ್ತಿದ್ದ. ಒಂದು ಸಣ್ಣ ತಪ್ಪು ಕೂಡ ನನ್ನನ್ನು ಸಾವಿನ ಬಾಗಿಲಿನಲ್ಲಿ ನಿಲ್ಲಿಸಬಲ್ಲದು ಎಂಬುದು ಅವನಿಗೆ ತಿಳಿಯದೆ ಏನಿಲ್ಲ. ಆದರೆ ಅದೊಂದು ಚಾಳಿ ಬಿಟ್ಟಿರಲಿಲ್ಲ ಆತ. McMillan Tac-50. Sniper ಗಳ ಕನಸಿನ ದೇವತೆ ಅದು.
ಮಿರಿ ಮಿರಿ ಮಿಂಚುವ ಕಪ್ಪು ಸ್ನೈಪರ್ ಅದು. ಇದೇ ಮಾಡೆಲ್ ನ ಸ್ನೈಪರ್ ಉಪಯೋಗಿಸಿ Rob Furlong 2400 ಮೀಟರ್ ದೂರ ಕುಳಿತು ಶತ್ರುವಿನ ಎದೆಯಲ್ಲಿ ಗುಂಡಿಳಿಸಿಬಿಟ್ಟಿದ್ದ. ಈಗ ಅದೇ ಕಪ್ಪು ಸುಂದರಿಯನ್ನು ಮೈದಡವಿ ಆ ಮೇಜಿನ ಮೇಲೆ ಸರಿಯಾಗಿ ಜೋಡಿಸಿ ಅದರ ಬೈನಾಕ್ಯುಲರ್ ನಲ್ಲಿ ಸುಮ್ಮನೆ ಒಮ್ಮೆ ಸುತ್ತಲೂ ದೃಷ್ಟಿ ಬೀರಿದ. ಎರಡು, ಮೂರು, ನಾಲ್ಕು ಕಿಲೊಮೀಟರ್ ಗಳ ದೃಶ್ಯವನ್ನು ಕೈಗೆ ಸಿಗುವಷ್ಟೇ ಹತ್ತಿರದಲ್ಲಿರುವಂತೆ ಭ್ರಮೆ ಹುಟ್ಟಿಸುತ್ತಿದ್ದಳು ಆ ಕಪ್ಪು ಸುಂದರಿ. 
ಒಂದು ಗಾಢವಾದ ನಿಟ್ಟುಸಿರು ಬಿಟ್ಟು ಮತ್ತೊಮ್ಮೆ ತನ್ನ ಕಣ್ಣನ್ನು ಬೈನಾಕ್ಯುಲರ್ ನ ಗ್ಲಾಸ್ ಮೇಲಿಟ್ಟ ಗರುಡ. ತನಗೆ ಹುಟ್ಟುತ್ತಲೇ ಸಿದ್ಧಿಸಿದ ಕಲೆಯೆನೋ ಎಂಬಂತೆ MacMillan Adjuster ಮೇಲೆ ಆತನ ಕೈ ಹರಿದಾಡುತ್ತಿತ್ತು. ದೀರ್ಘವಾದ ಉಸಿರಾಟ ಮಾಡುತ್ತಿದ್ದ ಗರುಡ. ಸಮಯ ಹತ್ತಿರವಾದಂತೆಲ್ಲ ಆತನ ಮನಸ್ಸು ಒಂದೇ ಕಡೆ ಕೇಂದ್ರೀಕೃತವಾಗುತ್ತಿತ್ತು. ಆತ ಹಚ್ಚಿಟ್ಟ ಸಿಗರೇಟ್ ಉರಿದು ಮುಗಿದಿತ್ತು. ಮತ್ತೊಂದು ಸಿಗರೇಟ್ ಹಚ್ಚಿ ಮೇಜಿನ ಮೇಲಿಟ್ಟ. ಗರುಡ ಯಾವತ್ತೂ ಸಿಗರೇಟ್ ಸೇದಿದವನಲ್ಲ. ಆತನಿಗೆ ಗಾಳಿಯ ದಿಕ್ಕು ಮತ್ತು ಚಲನೆಯ ವೇಗ ತಿಳಿದುಕೊಳ್ಳಲಾಗಿಯೇ ಆ ಸಿಗರೇಟ್. ಎಲ್ಲವೂ ಸರಿಯಿದ್ದಂತೆ ಅನ್ನಿಸಿತು ಗರುಡನಿಗೆ. ಅಲ್ಲಿಂದ ಒಂದೂವರೆ ಕಿಲೊಮೀಟರ್ ದೂರದ ಹೈವೆಯ ಮೇಲೆ ನೆಟ್ಟಿತ್ತು ಅವನ ದೃಷ್ಟಿ. 
ರಸ್ತೆಯ ಪಕ್ಕದಲ್ಲಿ ಗುಂಪು-ಗುಂಪಾಗಿ ಹರಡಿಕೊಂಡಿದ್ದ ಮರಗಳು ಕೂಡ ಇದ್ದವು, ಬದಿಯಲ್ಲಿಯೇ ಬಯಲು ಕೂಡ. ಬಯಲಿದ್ದ ಜಾಗವಾದರೆ ಗರುಡನಿಗೆ ಗುರಿ ಇಡುವುದು ಸುಲಭ. ಆದರೆ ಮರದ ಗುಂಪೆಂದರೆ ಮರಗಳ ಪ್ರತಿಯೊಂದೂ ರೆಂಬೆ,ಕೊಂಬೆ, ಎಲೆ ಅಲುಗಾಡುವುದನ್ನು ಕೂಡ ತಪ್ಪಿಸಿ ಗುರಿ ಇಡಬೇಕು, ಅದು ಬಹಳ ಕಷ್ಟದ ಕೆಲಸ. ಗರುಡ ಮಾತ್ರ ಆ ಮರಗಿಡಗಳ ಮರೆಯನ್ನೇ ಆರಿಸಿದ. ಯಾಕೆಂದರೆ ಒಂದು ಕ್ಷಣ ಏನಾಯಿತು ಎಂದು ಅರಿಯಲು ಪೋಲಿಸರಿಗೆ ಸಮಯ ಬೇಕು. ಮರಗಳ ಎಡೆಯಿಂದ ಏನಾದರೂ ಬಂದಿರಬಹುದು ಎಂದು ಅವರನ್ನು Confuse ಮಾಡಲಷ್ಟೆ ಸಂಚು. ಬಯಲಿನಲ್ಲಿ ಒಮ್ಮೆ ಕಣ್ಣು ಹಾಯಿಸಿದರೆ ಕಾಣುವುದೇ ಎತ್ತರದ ಈ ಬಿಲ್ಡಿಂಗ್.ಇಂತಹ ಸಣ್ಣ ಸಣ್ಣ ಯೋಚನೆಗಳೇ ಅವನನ್ನು ಭೂಗತ ಲೋಕದ Sniper ಸಾಮ್ರಾಟನನ್ನಾಗಿ ಮಾಡಿತ್ತು. 
ಗರುಡ ಹೈವೆಯತ್ತಲೇ ದೃಷ್ಟಿ ನೆಟ್ಟಿದ್ದ, ಯಾವುದೇ ಕ್ಷಣದಲ್ಲೂ ಕೂಡ ಅವನ ಗುರಿ ಈ ಕಡೆ ಬರಬಹುದು ಎಂದು. ಆತನ ಬೈನ್ಯಾಕ್ಯುಲರ್ ನಲ್ಲಿ ಅಸ್ಪಷ್ಟವಾಗಿ ೫ ಕಾರುಗಳು ಕಂಡವು. ಆತನಿಗೆ ನಿಖರವಾಗಿ ಗೊತ್ತು ತನ್ನ ಗುರಿ ಯಾವ ಕಾರಿನಲ್ಲಿ, ಯಾವ ಸೀಟಿನಲ್ಲಿ ಕುಳಿತಿದ್ದಾಳೆ ಎಂದು. ಅವೆಲ್ಲ ಮಾಹಿತಿಗಳು ಇತರರಿಗೆ ಸಿಗುವುದು ಕಷ್ಟ. ಆದರೆ ಕತ್ತಲ ಜಗತ್ತಿಗೆ ಅಬೇಧ್ಯ ಕೋಟೆಯೆಂಬುದೇ ಇಲ್ಲ. ದುಡ್ಡು ಎಲ್ಲವನ್ನೂ ಬದಲಿಸುತ್ತದೆ, ಮನುಷ್ಯನನ್ನು ಮತ್ತು ಮನುಷ್ಯನ ನಿಯತ್ತನ್ನು ಕೂಡ. 
Adjuster ಮೇಲೆ ಕೈ ಆಡಿಸುತ್ತಿದ್ದ ಗರುಡ. ಆರು ಕಿಲೋಮೀಟರ್. ರಸ್ತೆ ಖಾಲಿ ಇರುವುದರಿಂದ ಮೂರರಿಂದ ನಾಲ್ಕು ನಿಮಿಷ ಅಷ್ಟೆ. ಗರುಡ ಬರುತ್ತಿರುವ ಕಾರುಗಳ ವೇಗವನ್ನೇ ನೋಡುತ್ತಿದ್ದ. ತಿರುಗಿ ಒಮ್ಮೆ ಹೊಗೆಯಾಡುತ್ತಿದ್ದ ಸಿಗರೇಟ್ ನೋಡಿದ. ಅವನ ಮನದಲ್ಲಿ ನೂರಾರು ಲೆಕ್ಕಗಳು, ತಾಳೆಗಳು. 
ಅನುಭವವಿಲ್ಲದವರು ಇಂತಹ ಕೆಲಸ ಮಾಡುವಾಗ Tension ಆಗುತ್ತಾರೆ. ಅದರಿಂದ ಅನಾಹುತಗಳೇ ಹೆಚ್ಚು. ಅದರಲ್ಲೇ ಪಳಗಿದವರು ತಮ್ಮ ಗುರಿ ಹತ್ತಿರ ಬಂದಂತೆಲ್ಲ ಪ್ರಶಾಂತ ಮನಸ್ಕರಾಗುತ್ತಾರೆ. ಗರುಡನ ಉಸಿರಿನಲ್ಲಿ ಯಾವುದೇ ಏರಿಳಿತವಿಲ್ಲ. ತಲೆಯಲ್ಲಿ ಮಾತ್ರ ನೂರು ಕುದುರೆಗಳು ಚಲಿಸುವಷ್ಟು ವೇಗವಾದ ಲೆಕ್ಕ ಜರುಗುತ್ತಿತ್ತು. 
ಗಾಳಿ ಚಲಿಸುತ್ತಿರುವ ದಿಕ್ಕು, ಅದರ ವೇಗ, ಬರುತ್ತಿರುವ ಕಾರಿನ ವೇಗ, ಗಾಳಿಯ ಸಾಂದ್ರತೆ, ನಿಂತಿರುವ ಕಾಲ, ನಿಂತಿರುವ ಎತ್ತರ, ಎತ್ತರದಿಂದ ತಗ್ಗಿನ ಕಡೆ ಬುಲೆಟ್ ಸಾಗುವಾಗಿನ ಸಾಂದ್ರತೆ ಎಲ್ಲವನ್ನೂ ಗರುಡ ಯೋಚಿಸುತ್ತಿದ್ದ. ಇವಿಷ್ಟನ್ನೆ ಗರುಡ ಯೋಚಿಸಿದ್ದರೆ ಆತ ಅಷ್ಟು ನಿಖರವಾಗಿ ಗುರಿ ಇಡಲು ಸಾಧ್ಯವೇ? 
ಭೂಮಿ ತನ್ನ ಸುತ್ತ ತಾನು ತಿರುಗುವುದರಿಂದ ಹಿಡಿದು ಯೋಚಿಸಬೇಕಾಗಿತ್ತು ಗರುಡ. 
ಒಂದು ಸೆಕೆಂಡಿಗೆ 830 ಮೀಟರ್ ಸ್ಪೀಡ್ ನಲಿ ಚಲಿಸುವ ಬುಲೆಟ್, ಒಂದೂವರೆ ಕಿಲೋಮೀಟರ್ ಎಂದರೆ ಪೂರ್ತಿ ಎರಡು ಸೆಕೆಂಡ್ ಗಳಿಗಿಂತ ಕಡಿಮೆ. ಆದರೂ ಆ ಹೊತ್ತಿನಲ್ಲಿ ಭೂಮಿ ಎಷ್ಟು ತಿರುಗಬಲ್ಲದು ಎಂಬುದು ಗುರಿಯ ನಿಖರತೆಯನ್ನು ವ್ಯತ್ಯಾಸಮಾಡಬಲ್ಲದು. 
ಈಗ ಗರುಡನಿಗೆ ಎಲ್ಲವು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೊಂದು ಮೂವತ್ತು ಸೆಕೆಂಡ್ ಅಷ್ಟೆ. ತಾನು ಎಣಿಸಿದ ಜಾಗಕ್ಕೆ ತನ್ನ ಗುರಿ ಬಂದುಬಿಡುತ್ತದೆ. 
ಗರುಡನ ಕಣ್ಣು ರೆಪ್ಪೆ ಮಿಟುಕಿಸದೆ ಬೈನಾಕ್ಯುಲರ್ ನೋಡುತ್ತಿದೆ. ಕ್ಷಣದ ನೂರನೇ ಒಂದು ಭಾಗದಲ್ಲಿ ಟ್ರಿಗ್ಗರ್ ಅದುಮಲು ಬೆರಳು ಸಿದ್ಧವಾಗಿದೆ. 
ಗರುಡನಿಗೆ ಈಗ ಸ್ಪಷ್ಟವಾಗಿ ಕಾಣುತ್ತಿದ್ದಳು ಮರ್ಸಿಡಸ್ ಬೆಂಜ್ ಒಳಗೆ ಕುಳಿತಿರುವ ಪ್ರಿಯಂವದಾ ರಾಜ್. ಇಂಡಿಯಾದ ಕಿಂಗ್ ಮೇಕರ್ ಅವಳೇ. ಪ್ರಧಾನ ಮಂತ್ರಿ, ರಾಷ್ಟ್ರಪತಿಗೆ ಇಲ್ಲದ ಅಧಿಕಾರ ಅವಳಿಗಿದೆ. ಅಂತಹ ಪ್ರಿಯಂವದಾ ರಾಜ್ ಆ ದಾರಿಯಲ್ಲಿ ಹೋಗುತ್ತಿದ್ದಳು. ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಗರುಡ. 
ಹತ್ತು.. ಒಂಬತ್ತು.. ಎಂಟು.. ಗರುಡ ಮನಸ್ಸಿನಲ್ಲಿ ಕೌಂಟ್ ಡೌನ್ ಮಾಡತೊಡಗಿದ. 
ಪ್ರಿಯಂವದಾ ರಾಜ್ ಚಲಿಸುತ್ತಿದ್ದಾಳೆಯೇ? ಚಲಿಸುತ್ತಿದ್ದರೆ ಯಾವ ದಿಕ್ಕಿನಲ್ಲಿ ಚಲಿಸುತ್ತಿದ್ದಾಳೆ? ಕಾರಿನ ವಿಂಡೋ ಗ್ಲಾಸ್ ಗಿರುವ ಪವರ್ ಎಷ್ಟು? ಬುಲೆಟ್ ಗ್ಲಾಸ್ ಗೆ ತಾಗಿದ ಕ್ಷಣ ಬದಲಾಗುವ ಬುಲೆಟ್ ನ ಆಂಗಲ್ ಎಲ್ಲವೂ ಗರುಡನ ಮನಸ್ಸಿನಲ್ಲಿ ಸುಳಿದು ಹೋಗುತ್ತಲೇ ಇತ್ತು. 
ನಾಲ್ಕು.. ಮೂರು.. ಕೈ ಮತ್ತಷ್ಟು ಬಿಗಿಯಿತು ಟ್ರಿಗ್ಗರ್ ಮೇಲೆ. 
ಎರಡು.. ಒಂದು.. 
ಸೊನ್ನೆ ಎಂದು ಯೋಚಿಸಲಿಲ್ಲ ಗರುಡ, ಟ್ರಿಗ್ಗರ್ ಅದುಮಿದ ಅಷ್ಟೆ. 
ಟಪ್-- ಎಂಬ ಸಣ್ಣ ಸದ್ದು.. ಒಂದು ಸಣ್ಣ ಜರ್ಕ್..!!
ಉಸಿರು ಬಿಗಿ ಹಿಡಿದು ಬಿಟ್ಟಕಣ್ಣು ಬಿಟ್ಟೆ ಇದ್ದ ಗರುಡ.
ಇದ್ಯಾವುದು ತಿಳಿಯದೇ ಪ್ರಿಯಂವದಾ ರಾಜ್ ಳ ಕಾರು ಆ ಕ್ಷಣ ಅದೇ ಮರದ ಮರೆಗೆ ಸಾಗಿತು....!!!